ಇನ್ನು 6 ತಿಂಗಳು ಶಿರಾಡಿ ಘಾಟ್​ ಬಂದ್​; ಬಿಸಿಲೆಘಾಟ್​ ಸರಿಯಾಗಲು 2 ವರ್ಷ ಬೇಕು; ಸಚಿವ ಹೆಚ್​.ಡಿ. ರೇವಣ್ಣ

news18
Updated:August 29, 2018, 9:48 PM IST
ಇನ್ನು 6 ತಿಂಗಳು ಶಿರಾಡಿ ಘಾಟ್​ ಬಂದ್​; ಬಿಸಿಲೆಘಾಟ್​ ಸರಿಯಾಗಲು 2 ವರ್ಷ ಬೇಕು; ಸಚಿವ ಹೆಚ್​.ಡಿ. ರೇವಣ್ಣ
news18
Updated: August 29, 2018, 9:48 PM IST
ನ್ಯೂಸ್​18 ಕನ್ನಡ

ಹಾಸನ (ಆ. 29):  ಶಿರಾಡಿ, ಸಂಪಾಜೆ ಘಾಟಿ ರಸ್ತೆಯಲ್ಲಿ ಇನ್ನೂ 6 ತಿಂಗಳು ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು. ಬಿಸಿಲೆ ಘಾಟ್​ ಸರಿಹೋಗಲು ಇನ್ನೂ 2 ವರ್ಷವಾದರೂ ಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ. ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಅವರು, ಬಿಸಿಲೆ ಘಾಟ್ ರಸ್ತೆ ದುರಸ್ತಿಗೆ ಇನ್ನೂ 2 ವರ್ಷ ಬೇಕು. ಮಡಿಕೇರಿಗೆ ಭೂಗರ್ಭ ಶಾಸ್ತ್ರಜ್ಞರು ಭೇಟಿ ನೀಡಿದ್ದರು. ಗುಡ್ಡ ಕುಸಿತ ಕಂಡು ಅವರೇ ಬೆದರಿ ಹೋಗಿದ್ದಾರೆ. ಸೋಮವಾರಪೇಟೆ, ಸಕಲೇಶಪುರಕ್ಕೆ ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರ ಉರುಳಿದರೆ ಅದಕ್ಕೆ ಹೆಚ್​.ಡಿ. ರೇವಣ್ಣ ಅವರೇ ಕಾರಣ ಎಂಬ ಎ. ಮಂಜು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಅವರ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಹಾಲು ಕರೆಯುವ ಮಷಿನ್ ನಿಂತಿದೆ. ಅದಕ್ಕೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ವಿರುದ್ಧ ರೇವಣ್ಣ ಪರೋಕ್ಷ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿದ್ದ ಅಧಿಕಾರಿಗಳೇ ಇದ್ದಾರೆ. ಹಾಸನ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ಪರಿಹಾರ ಮೊತ್ತವನ್ನು ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಮಾಡಬಾರದು. ರಾಜ್ಯ ಸರ್ಕಾರ ಕೇಂದ್ರಕ್ಕೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಮನವಿಗೆ ಸ್ಪಂದಿಸುತ್ತಿಲ್ಲ,
ರಾಜ್ಯದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಕೊಡಗಿನಲ್ಲಿ ರಸ್ತೆಗಳೇ ಸುಮಾರು 500 ಕೋಟಿಗೂ ಹೆಚ್ಚು ಹಾನಿಯಾಗಿದೆ. ಕೇರಳಕ್ಕೆ ಈಗಾಗಲೇ ಕೇಂದ್ರ ಸರ್ಕಾರ 500 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬಿಜೆಪಿ ನಾಯಕರು ಬರೀ ಕುಮಾರಸ್ವಾಮಿಯವರನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ನಾಯಕರು ಭಾಷಣ ಮಾಡೋದು ಬಿಟ್ಟು ರಾಜಕೀಯ ಮಾಡದೇ ದೆಹಲಿಗೆ ಹೋಗಿ ಹಣ ತರಲಿ. ಪ್ರವಾಹದ ಭೀತಿಯಿಂದಾಗಿ ರಾಜ್ಯದ ಜನ ತತ್ತರಿಸಿಹೋಗಿದ್ದಾರೆ. ರಾಜ್ಯ ಸರ್ಕಾರ ಮನವಿ ಮಾಡಿದ ಅರ್ಧದಷ್ಟು ಹಣವನ್ನಾದರೂ ಕೇಂದ್ರ ಬಿಡುಗಡೆ ಮಾಡಬೇಕೆಂದು ರೇವಣ್ಣ ಒತ್ತಾಯಿಸಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ