ಸಾಗರ (ಜೂನ್ 28): ಹಲವು ದಿನಗಳಿಂದ ಮುಚ್ಚಲ್ಪಟ್ಟಿದ್ದ ಧಾರ್ಮಿಕ ಕೇಂದ್ರಗಳು ಲಾಕ್ಡೌನ್ ತೆರವಿನ ಬಳಿಕ ಮತ್ತೆ ತೆರೆಯಲ್ಪಟ್ಟಿವೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಚೌಡೇಶ್ವರಿ ಕ್ಷೇತ್ರ ಕೂಡ ಒಂದು. ಸಿಗಂದೂರಿನ ದೇವಿಯ ದರ್ಶನಕ್ಕೆ ಬಂದ ಮಹಿಳೆಯೊಬ್ಬರು ಲಾಂಚ್ನಲ್ಲಿ ಶರಾವತಿ ನದಿಯ ಹಿನ್ನೀರು ದಾಟಿ ಹೋಗುವಾಗ ಇದ್ದಕ್ಕಿದ್ದಂತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಲಾಂಚ್ ಪ್ರಯಾಣಿಕರು ಹಿನ್ನೀರಿಗೆ ಹಾರಿ, ಆಕೆಯನ್ನು ರಕ್ಷಿಸಿದ್ದಾರೆ.
ಸಾಗರ ತಾಲೂಕಿನ ಸಿಗಂದೂರು ಬಳಿಯ ಶರಾವತಿ ಹಿನ್ನೀರಿನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕರೂರು ಗ್ರಾಮದ 46 ವರ್ಷದ ರೇಣುಕಾ ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ನಿನ್ನೆ ಏಕಾಂಗಿಯಾಗಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಕಾರಿನಲ್ಲಿ ಬಂದಿದ್ದ ರೇಣುಕಾ ಅಲ್ಲಿಂದ ಸಾಗರಕ್ಕೆ ವಾಪಾಸ್ ಲಾಂಚ್ನಲ್ಲಿ ಕಾರಿನ ಜೊತೆ ಹೋಗುವಾಗ ಶರಾವತಿ ಹಿನ್ನೀರಿನಲ್ಲಿ (ಹೊಳೆಬಾಗಿಲು) ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ತಕ್ಷಣ ನೀರಿಗೆ ಹಾರಿದ ಲಾಂಚ್ ಸಿಬ್ಬಂದಿ ಮತ್ತು ಇತರೆ ಪ್ರಯಾಣಿಕರಿಬ್ಬರು ಹಗ್ಗ, ಸೇಫ್ಟಿ ಟ್ಯೂಬ್ ಮೂಲಕ ಆಕೆಯನ್ನು ಮೇಲಕ್ಕೆ ತರಲು ಪ್ರಯತ್ನಿಸಿದ್ದಾರೆ. ಆದರೆ, ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಲಾಂಚ್ ಅನ್ನೇ ಆಕೆಯತ್ತ ತಿರುಗಿಸಿ, ಬಲವಂತವಾಗಿ ಆಕೆಯನ್ನು ಎಳೆದುಕೊಂಡು ಲಾಂಚ್ನೊಳಗೆ ಹಾಕಲಾಗಿದೆ. ಬಳಿಕ ಆಕೆಯನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Karnataka Weather Today: ಕರಾವಳಿ, ಹೈದರಾಬಾದ್ ಕರ್ನಾಟಕ, ಮಲೆನಾಡಿನಲ್ಲಿ ಇಂದಿನಿಂದ ಜುಲೈ 1ರವರೆಗೆ ಭಾರೀ ಮಳೆ
ಹಾವೇರಿಯಿಂದ ಸ್ವಿಫ್ಟ್ ಕಾರಿನಲ್ಲಿ ಏಕಾಂಗಿಯಾಗಿ ಸಾಗರದ ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದ ರೇಣುಕಾ ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಿದ್ದರು ಎನ್ನಲಾಗಿದೆ. ತೀರ್ಥಹಳ್ಳಿ, ಹೊಸನಗರದಲ್ಲಿ ಹತ್ತು ದಿನಗಳ ಕಾಲ ಭಾರೀ ಮಳೆಯಾಗಿರುವುದರಿಂದ ಶರಾವತಿ ನದಿಯ ಹಿನ್ನೀರಿನ ಮಟ್ಟ ಏರಿಕೆಯಾಗಿದೆ. ಸಮುದ್ರದಂತೆ ಹರಡಿ ನಿಂತಿದ್ದ ನೀರಿಗೆ ಹಾರಿ ಆಕೆಯನ್ನು ರಕ್ಷಿಸಿದವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಪ್ರಕರಣದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ