Analysis: ಬಲವಂತದ ರಾಜೀನಾಮೆ, ಪ್ರವಾಸಕ್ಕೆ ತಡೆ, ಮೂಲೆಗುಂಪಾಗುವ ಮುನ್ಸೂಚನೆ: ಬಿಎಸ್​ವೈ ಪ್ಲಾನ್​ ಬಿ ಏನು?

BS Yediyurappa's Plan B: ಯಡಿಯೂರಪ್ಪ ಪಕ್ಷಾತೀತ ನಾಯಕ. ಕೇವಲ ವೀರಶೈವ ಲಿಂಗಾಯತ ಸಮುದಾಯವೊಂದೇ ಅಲ್ಲ, ಎಲ್ಲ ಸಮುದಾಯಗಳಿಂದಲೂ ಒಪ್ಪಿತವಾದ ನಾಯಕ. ರಾಜಕೀಯ ಮುಸ್ಸಂಜೆಯಲ್ಲಿ ಅವರಿಗೆ ಅವಮಾನ, ನೋವು, ನಿರಾಶೆ, ಬೇಸರ ಉಂಟಾದರೆ ಅದು ವಿಜಯೇಂದ್ರ ಮೇಲೆ ಅನುಕಂಪವಾಗಿ ತಿರುಗುವ ಸಾಧ್ಯತೆಯೂ ಇರುತ್ತದೆ. ಹಾಗೇನಾದರೂ ಆದಲ್ಲಿ, ವಿಜಯೇಂದ್ರ ರಾಜಕೀಯವಾಗಿ ಬೆಳೆಯುವ ಸಾಧ್ಯತೆಯಿದೆ.

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

  • Share this:
ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ (Former Karnataka Chief Minister BS Yediyurappa) ರಾಜೀನಾಮೆ ನೀಡಿದ ನಂತರ ಮುಂದೇನು ಎಂಬ ಪ್ರಶ್ನೆ ಈಗಲೂ ಕಾಡುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಮುಖ್ಯ ಕಾರಣ ಯಡಿಯೂರಪ್ಪ. ಅದು ಪಕ್ಷದ ಪ್ರತಿಯೊಬ್ಬರಿಗೂ ತಿಳಿದ ವಿಚಾರವೇ. ಆದರೆ ಬಿಜೆಪಿ ಹೈಕಮಾಂಡ್ ಮತ್ತು ಅತೃಪ್ತ ಶಾಸಕರು​ ಅವರನ್ನು ಶತಾಯಗತಾಯ ಇಳಿಸಬೇಕು ಎಂದು ನಿರ್ಧರಿಸಿದ ಪರಿಣಾಮ ಅನಿವಾರ್ಯವಾಗಿ ವಯಸ್ಸಿನ ನೆಪ ಹೇಳಿ ರಾಜೀನಾಮೆ ನೀಡಿದರು. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯಾದ್ಯಂತ ಈಗಿನಿಂದಲೇ ಪ್ರವಾಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. 

ಅದು ಅವರಿಗೆ ಅನಿವಾರ್ಯ ಕೂಡ ಆಗಿತ್ತು. ಏಕೆಂದರೆ ಸಕ್ರಿಯ ರಾಜಕಾರಣದಲ್ಲಿ ಪ್ರಸ್ತುತವಾಗಿ ಉಳಿಯುವ ಅನಿವಾರ್ಯತೆ ಯಡಿಯೂರಪ್ಪ ಅವರಿಗಿದೆ ಎನ್ನುತ್ತಾರೆ ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡವರು. ಯಡಿಯೂರಪ್ಪ ಮಗ ಬಿ.ವೈ. ವಿಜಯೇಂದ್ರ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರ ಆರೋಪಗಳಿವೆ ಮತ್ತು ಬಿ.ವೈ. ವಿಜಯೇಂದ್ರ (BY Vijayendra) ಮತ್ತು ಬಿ.ವೈ. ರಾಘವೇಂದ್ರ (BY Raghavendra) ಇಬ್ಬರ ರಾಜಕೀಯ ಭವಿಷ್ಯ ದೃಷ್ಟಿಯಿಂದಲೂ ಯಡಿಯೂರಪ್ಪ ಅವರು ರಾಜಕಾರಣದಲ್ಲಿ ಮುಂದುವರೆಯಲೇ ಬೇಕಿದೆ ಎನ್ನುವುದು ಹಲವರ ಅಭಿಪ್ರಾಯ.

ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಆದರೆ ಇದುವರೆಗೂ ಒಂದೇ ಒಂದು ಚುನಾವಣೆಯಲ್ಲೂ ಅವರು ಸ್ಪರ್ಧಿಸಿಲ್ಲ. ಯಡಿಯೂರಪ್ಪ ಅವರ ಹೆಸರಿನಿಂದಲೇ ಹಲವು ರಾಜಕೀಯ ಪ್ರಯೋಜನಗಳು, ಸಂಪರ್ಕಗಳು ಅವರಿಗೆ ಲಭ್ಯವಾಗಿವೆ. ಹಾಗಂತ ವಿಜಯೇಂದ್ರ ನೇರ ಚುನಾವಣೆ ಎದುರಿಸಿದರೆ ಸೋಲುತ್ತಾರೆ ಎಂದಲ್ಲ. ಹಲವು ಉಪಚುನಾವಣೆಗಳ ನೇತೃತ್ವವಹಿಸಿ, ಚುನಾವಣಾ ಚಾಣಾಕ್ಷ ಎಂದೂ ವಿಜಯೇಂದ್ರ ಗುರುತಿಸಿಕೊಂಡಿದ್ದಾರೆ.

ಆದರೆ, ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೇ ಆದಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದು, ವಿಜಯೇಂದ್ರ ಶಾಸಕರಾಗಿ ಆಯ್ಕೆಯಾದರೂ ಯಾವುದೇ ಅಧಿಕಾರ ದೊರೆಯುವುದಿಲ್ಲ. ಮತ್ತೆ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಕೂಡ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು.

ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ:

ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ (Union Home Minister Amit Shah) ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ, ಆರ್​ ಅಶೋಕ್ (R Ashoka)​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಹೌದು ಯಾರು ಮುಖ್ಯಮಂತ್ರಿಯಾಗಿರುತ್ತಾರೋ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು ವಾಡಿಕೆ. ನಾವು ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದಿದ್ದರು. ಮುಂದುವರೆದು, ಯಡಿಯೂರಪ್ಪ ಅವರು ನಮ್ಮ ಹಿರಿಯ ನಾಯಕರು, ಅವರನ್ನು ಚುನಾವಣೆಯಲ್ಲಿ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಮತ್ತು ಅವರು ಯಾವಾಗ ಮತ್ತು ಎಲ್ಲಿ ಪ್ರವಾಸ ಮಾಡಬೇಕು ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ (BJP State President Nalin Kumar Katil)​ ನಿರ್ಧರಿಸುತ್ತಾರೆ ಎಂಬ ಹೇಳಿಕೆ ಆರ್​ ಅಶೋಕ್​ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ; ನಟ ಚೇತನ್ ವಿವಾದ

ರಾಜೀನಾಮೆ ನೀಡಿದ ನಂತರ ತಮ್ಮ ಪರಮಾಪ್ತ ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಿಸುವ ಮೂಲಕ, ಈಗಲೂ ರಾಜ್ಯ ಬಿಜೆಪಿಗೆ ನಾನೇ ನಾಯಕ ಎಂಬ ಸಂದೇಶವನ್ನು ಯಡಿಯೂರಪ್ಪ ರವಾನೆ ಮಾಡಿದ್ದರು. ಯಡಿಯೂರಪ್ಪ ವಿರುದ್ಧ ಪಿತೂರಿ ಮಾಡಿದ್ದ, ಬಹಿರಂಗ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್​ ಯತ್ನಾಳ್ (Basanagouda Patil Yatnal​), ಅರವಿಂದ ಬೆಲ್ಲದ್ (Aravinda Bellad)​ ಮತ್ತಿತರರಿಗೆ ಮಂತ್ರಿ ಪದವಿ ಸಿಗದಂತೆ ನೋಡಿಕೊಂಡಿದ್ದರು. ಆದರೆ ದಿನಗಳು ಉರುಳಿದಂತೆ ಚಿತ್ರಣ ಬದಲಾಗುತ್ತಿದೆ.

ಇದನ್ನೂ ಓದಿ: ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ಬಗ್ಗೆ ಬಾಯ್ಬಿಟ್ಟ ಸುಮಲತಾ ಅಂಬರೀಶ್

ರಾಜ್ಯ ಪ್ರವಾಸ ಮಾಡುವ ಮೂಲಕ ಮತ್ತೆ ಬಲಪ್ರದರ್ಶನ ಮಾಡಬೇಕು ಎಂದು ನಿರ್ಧರಿಸಿದ್ದ ಯಡಿಯೂರಪ್ಪ ಅವರಿಗೆ ನಿರಾಶೆಯಾಗಿದೆ. ಯಡಿಯೂರಪ್ಪ ಅವರ ಬಗ್ಗೆ ಎಂದೂ ಮಾತನಾಡದ ಅಶೋಕ್​ ಇಂದು ಪ್ರತಿಕ್ರಿಯಿಸುತ್ತಿದ್ದಾರೆ. ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಬಿಜೆಪಿ ಹೈಕಮಾಂಡ್​ ಮತ್ತು ರಾಜ್ಯಾಧ್ಯಕ್ಷ ಕಟೀಲ್​ ತಡೆ ಹಾಕಿದ್ದಾರೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಯೋಚಿಸುವುದಾದರೆ, ಮುಂದೆ ಯಡಿಯೂರಪ್ಪ ಅವರ ನಡೆ ಏನು ಎಂಬುದು ಸಾಮಾನ್ಯ ಪ್ರಶ್ನೆ. ಹೈಕಮಾಂಡ್​ ಹೇಳಿದಂತೆ ಸುಮ್ಮನಾಗಿ ಬಿಡುತ್ತಾರಾ? ಹೈಕಮಾಂಡ್​ ಮಾತಿಗೆ ಬೆಲೆ ಕೊಡದೇ ರಾಜ್ಯ ಪ್ರವಾಸ ಮಾಡಿ ಶಕ್ತಿ ಪ್ರದರ್ಶನ ಮಾಡುತ್ತಾರ? ಅಥವಾ ರಾಜ್ಯಪಾಲರಾಗಿ ಸುಮ್ಮನೆ ಕೂರುತ್ತಾರ?

ಯಡಿಯೂರಪ್ಪ ಪ್ಲಾನ್​ ಬಿ:

ಒಂದು ಮೂಲಗಳ ಪ್ರಕಾರ, ಯಡಿಯೂರಪ್ಪ ರಾಜಕೀಯ ಮುಸ್ಸಂಜೆಯಲ್ಲಿ ನೋವು ಅವಮಾನ ಸಹಿಸಿ ಸುಮ್ಮನೆ ಕೂರುವವರಲ್ಲ. ಹಾಗೆಂದು ಬಂಡೆಗೆ ತಲೆಚಚ್ಚಿಕೊಳ್ಳುವ ನಿರ್ಧಾರವೂ ಅವರದ್ದಲ್ಲ. ಯಡಿಯೂರಪ್ಪ ಅವರ ಆಪ್ತ ಬಳಗದವರೊಬ್ಬರ ಪ್ರಕಾರ, ಹೈಕಮಾಂಡ್​ ಯಡಿಯೂರಪ್ಪ ಅವರನ್ನು ನೇಪಥ್ಯಕ್ಕೆ ತಳ್ಳಿದರೆ, ಮತ್ತೆ ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಾರೆ. ಆದರೆ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಂತರವಷ್ಟೇ ಹೊಸ ಪಕ್ಷಕ್ಕೆ ಮುನ್ನುಡಿ ಬರೆಯುತ್ತಾರೆ. ವಿಧಾನಸಭೆ ಚುನಾವಣೆಯ ನಂತರ ಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಈ ನಿರ್ಧಾರ ನಿಂತಿದೆ, ಆದರೆ ಅದಕ್ಕೆ ಯಡಿಯೂರಪ್ಪ ಅವರ ಆರೋಗ್ಯವೂ ಕೈ ಹಹಿಡಿಯಬೇಕು ಎನ್ನುತ್ತಾರೆ ಶಿವಮೊಗ್ಗದ ಯಡಿಯೂರಪ್ಪ ಆಪ್ತರೊಬ್ಬರು.

ಇದನ್ನೂ ಓದಿ: ಎರಡು ದಿನ ಎಸ್​ಬಿಐನ ಯೊನೊ, ನೆಟ್‌ಬ್ಯಾಂಕಿಂಗ್, UPI ಸೌಲಭ್ಯ ಇಲ್ಲ

ವೈ.ಎಸ್​. ರಾಜಶೇಖರ್​ ರೆಡ್ಡಿ (YS Rajashekhar Reddy) ಸಾವಿನ ನಂತರ ಕಾಂಗ್ರೆಸ್​ನಲ್ಲಿ ಸರಿಯಾದ ಸ್ಥಾನ ದೊರೆಯದೇ ಜಗನ್​ ಮೋಹನ್​ ರೆಡ್ಡಿ (YS Jagan Mohan Reddy) ವೈ.ಎಸ್​.ಆರ್​​. ಕಾಂಗ್ರೆಸ್​ ಪಕ್ಷ ಕಟ್ಟಿದರು. ಸತತ ಪರಿಶ್ರಮದ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದರು. ವಿಜಯೇಂದ್ರ ತಲೆಯಲ್ಲೂ ಇಂತದ್ದೇ ಒಂದು ಇರಾದೆಯಿದೆ ಮತ್ತು ಚುನಾವಣೆ ಎದುರಿಸಲು ಬೇಕಾದ ಹಣಬಲವೂ ಇದೆ ಎನ್ನುತ್ತಾರೆ ಬಲ್ಲವರು. ಇದೇ ಕಾರಣಕ್ಕಾಗಿ ಅವರಿನ್ನೂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಯಡಿಯೂರಪ್ಪ ಅವರ ವರ್ಚಸ್ಸನ್ನೇ ಹೂಡಿಕೆ ಮಾಡಿ, ಪ್ರಾದೇಶಿಕ ಪಕ್ಷ ಕಟ್ಟಿ ಅಧಿಕಾರ ಚುಕ್ಕಾಣಿಗೇರುವ ಕನಸು ವಿಜಯೇಂದ್ರ ಅವರದ್ದಾಗಿದೆ ಎನ್ನುತ್ತವೆ ಮೂಲಗಳು.

ರಾಜಕೀಯ ಪರಿಣಿತರ ಪ್ರಕಾರ ಇದು ಸಾಧ್ಯವೂ ಹೌದು. ಯಡಿಯೂರಪ್ಪ ಪಕ್ಷಾತೀತ ನಾಯಕ. ಕೇವಲ ವೀರಶೈವ ಲಿಂಗಾಯತ ಸಮುದಾಯವೊಂದೇ ಅಲ್ಲ, ಎಲ್ಲ ಸಮುದಾಯಗಳಿಂದಲೂ ಒಪ್ಪಿತವಾದ ನಾಯಕ. ರಾಜಕೀಯ ಮುಸ್ಸಂಜೆಯಲ್ಲಿ ಅವರಿಗೆ ಅವಮಾನ, ನೋವು, ನಿರಾಶೆ, ಬೇಸರ ಉಂಟಾದರೆ ಅದು ವಿಜಯೇಂದ್ರ ಮೇಲೆ ಅನುಕಂಪವಾಗಿ ತಿರುಗುವ ಸಾಧ್ಯತೆಯೂ ಇರುತ್ತದೆ. ಹಾಗೇನಾದರೂ ಆದಲ್ಲಿ, ವಿಜಯೇಂದ್ರ ರಾಜಕೀಯವಾಗಿ ಬೆಳೆಯುವ ಸಾಧ್ಯತೆಯಿದೆ.
Published by:Sharath Sharma Kalagaru
First published: