ಶಿವಮೊಗ್ಗ: ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಈ ಬಾಲಕಿಗೆ ಶಿವಮೊಗ್ಗದ (Shivamogga News) ಮೆಗ್ಗಾನ್ ಆಸ್ಪತ್ರೆಯ (Mcgann Hospital) ವೈದ್ಯರು ದೇವರಾಗಿದ್ದಾರೆ. ಬಾಲಕಿಗಿದ್ದ ಹುಟ್ಟು ಕಿವುಡುತನವನ್ನು ನಿವಾರಣೆ ಮಾಡಿದ್ದಾರೆ. ಇದರಿಂದ ಬಡ ಕುಟುಂಬದಲ್ಲಿ ಸಂತೋಷ ಮೂಡಿದೆಯಲ್ಲದೇ ಇಡೀ ಮಲೆನಾಡಿನ ಜನರಲ್ಲಿ ಆಶಾಕಿರಣವಾಗಿದೆ.
ಮನೆಯಲ್ಲಿ ಮಗುವಾದ ಖುಷಿಯಲ್ಲಿ ಮನೆಮಂದಿಯೆಲ್ಲ ಇದ್ದರೆ, ಮಗುವಿಗೆ ಕಿವಿ ಕೇಳಿಸುವುದಿಲ್ಲ ಎಂಬ ವಿಷಯ ಸಿಡಿಲು ಬಡಿದಂತೆ ಆಗಿತ್ತು. ಮಗು ಹುಟ್ಟಿದಾಗ ಪೋಷಕರು ಕಾಡುತ್ತಿದ್ದ ಬಡತನವನ್ನು ಮರೆತಿದ್ದರು.
ಕನಸು ಕಂಡಿದ್ದ ಕುಟುಂಬಕ್ಕೆ ನಿರಾಶೆ
ಆದರೆ ಮನೆಗೆ ಮಹಾಲಕ್ಷ್ಮಿ ಬಂದಳು, ಮುಂದೊಂದು ದಿನ ತಮ್ಮ ಕುಟುಂಬದ ಕಷ್ಟ ಕಾರ್ಪಣ್ಯ ಕಳೆಯುತ್ತದೆ ಅಂತ ಕನಸು ಕಂಡವರಿಗೆ ಮಗನಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ ಎಂದು ತಿಳಿದು ನಿರಾಸೆಗೊಂಡಿದ್ದರು.
ಹುಡುಕಿ ಬಂತು ಹೊಸ ಬೆಳಕು
ಮನೆಯ ಮಹಾಲಕ್ಷ್ಮಿ ಎಂದು ಅಂದುಕೊಂಡಿದ್ದ ಬಡ ಕುಟುಂಬದ ದಂಪತಿಗೆ ತಮ್ಮ ಮಗು ವಿಶೇಷ ಚೇತನ ಎಂದು ತಿಳಿದು ದುಃಖಿತರಾಗಿದ್ದರು. ಕಟ್ಟಿಕೊಂಡ ಕನಸು ಕನಸಾಗಿಯೇ ಉಳಿಯುತ್ತದೆ ಎಂಬ ಚಿಂತೆಯಲ್ಲಿ ಕಾಲಕಳೆಯುತ್ತಿದ್ದರು. ಆದರೆ ಈಗ ಮಗುವಿಗೆ ಹೊಸ ಬೆಳಕು ಬಂದಿದ್ದಲ್ಲದೆ ಬಾಲಕಿಯ ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಾಣವಾಗಿದೆ. ಇದಕ್ಕೆ ಕಾರಣ ಶಿವಮೊಗ್ಗದ ಆಸ್ಪತ್ರೆ ವೈದ್ಯರು.
ಮಲೆನಾಡಿನಲ್ಲಿ ಪ್ರಥಮ ಬಾರಿಗೆ ನಡೆದ ಚಿಕಿತ್ಸೆಯಿದು
ಬಾಲಕಿಗೆ ಕಾಕ್ಲಿಯರ್ ಇಂಪ್ಲಾಂಟ್’ ಎಂಬ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬಾಲಕಿಗೆ ಹೊಸ ಬೆಳಕು ನೀಡಲಾಗಿದೆ. ಆ ಮೂಲಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಮಲೆನಾಡಿನಲ್ಲಿ ಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಸಿದ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿಕಿತ್ಸೆ ನೀಡಿದ್ದು ಈ ವೈದ್ಯರ ತಂಡ
ಶಿಕಾರಿಪುರ ತಾಲೂಕಿನ ನರಸಾಪುರ ಗ್ರಾಮದ ಭಾನಪ್ಪ ಮತ್ತು ರೇಖಾ ದಂಪತಿ ಪುತ್ರಿ ವರ್ಧಿನಿ ಹೆಸರಿನ ಮಗುವಿಗೆ ಬುಧವಾರ ಈ ಶಸ್ತ್ರಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ. ಈ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕದ ಖ್ಯಾತ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಕಿವಿ ಮೂಗು ಗಂಟಲು ತಜ್ಞರ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬೆಂಗಳೂರಿನ ಡಾ.ಶಂಕರ್ ಮಡಿಕೇರಿ ನೆರವೇರಿಸಿದ್ದಾರೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗದಲ್ಲಿ ಸಿಗಲಿದೆ ಈ ಸಂಸ್ಥೆಗಳ ವಿಮಾನ ಸೇವೆ!
ಇನ್ನು ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕ ಡಾ. ಕೆ.ಎಸ್.ಗಂಗಾಧರ, ಸಹ ಪ್ರಾಧ್ಯಾಪಕ ಡಾ.ಶ್ರೀಧರ್ ಎಸ್. ಮತ್ತು ಸೀನಿಯರ್ ರೆಸಿಡೆಂಟ್ ಡಾ.ಹಂಸ ಎಸ್. ಶೆಟ್ಟಿಅವರನ್ನು ತರಬೇತುಗೊಳಿಸಲಾಗುತ್ತಿದೆ. ಇನ್ನು ಮುಂದೆ ನಿರಂತರವಾಗಿ ಆಸ್ಪತ್ರೆಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಚಿಕಿತ್ಸೆಯು ಪ್ರಾರಂಭವಾಗಿದ್ದು, ಇನ್ನೂ ಹಲವಾರು ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Ikkeri Temple: ಇದು ಅಘೋರಿಗಳ ನೆಚ್ಚಿನ ತಾಣ, ಚಿತ್ರ, ವಿಚಿತ್ರಗಳ ದೇಗುಲ!
ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಉತ್ತಮ ಸೇವೆ ಒದಗಿಸುತ್ತಿರುವ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 12 ಲಕ್ಷದ ದುಬಾರಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಿದೆ. ಇದು ಈ ಭಾಗದ ಸಾರ್ವಜನಿಕರಿಗೆ ಸಂತಸ ಮೂಡಿಸಿದೆ.
ವರದಿ: ವಿನಯ್ ಪುರದಾಳು, ನ್ಯೂಸ್ 18 ಶಿವಮೊಗ್ಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ