ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಕಣ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ

news18
Updated:August 27, 2018, 1:39 PM IST
ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಕಣ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ
ಶಿವಮೊಗ್ಗ ನಕ್ಷೆ
news18
Updated: August 27, 2018, 1:39 PM IST
ನಾಗರಾಜ್, ನ್ಯೂಸ್ 18 ಕನ್ನಡ

ಶಿವಮೊಗ್ಗ (ಆಗಸ್ಟ್ 27): ಶಿವಮೊಗ್ಗ ಪಾಲಿಕೆ ಮಹಾನಗರ ಪಾಲಿಕೆಯಾಗಿ ಘೋಷಣೆಯಾದ ನಂತರ ನಡೆಯುತ್ತಿರುವ ಮೊದಲನೇ ಚುನಾವಣೆ ಇದಾಗಿದೆ. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಶತಾಯ ಗತಾಯ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಬೇಕು ಎಂದು ಮೂರೂ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿವೆ.

ಟಿಕೆಟ್ ನೀಡಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಹಲವು ಗೊಂದಲಗಳು ನಿರ್ಮಾಣವಾಗಿವೆ. ಈ ಎರಡು ಪಕ್ಷದಲ್ಲಿ ಹಲವಾರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಸಣ್ಣ ಪುಟ್ಟ ಗೊಂದಲಗಳು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಕಾರ್ಯತಂತ್ರ  ರೂಪಿಸುತ್ತಿದ್ದಾರೆ. ಮೂರು ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಮಾಡುತ್ತಿವೆ. ಹೀಗಾಗಿ ಅಳೆದು ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಇದರ ನಡುವೆಯೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಬಂಡಾಯದ ಬಿಸಿ ಕಾಣಿಸಿಕೊಂಡಿದೆ.

ಕಾಂಗ್ರೆಸ್​ನಲ್ಲಿ ಟಿಕೆಟ್ ವಂಚಿತರು ನಡುಬೀದಿಯಲೇ ಮುಖಂಡರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರೆ, ಬಿಜೆಪಿ ಟಿಕೆಟ್ ವಂಚಿತ ಕಾರ್ಯಕರ್ತರು ಹಲವು ವಾರ್ಡ್​ಗಳಲ್ಲಿ ಬಂಡಾಯ ಸ್ಪರ್ಧೆ ಮಾಡಿದ್ದಾರೆ.  ಜೆಡಿಎಸ್​ಗೆ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲವಾಗಿದೆ.

ಕಳೆದ ಬಾರಿ  ಬಿಜೆಪಿ ಮತ್ತು ಕೆಜೆಪಿ ಎರಡು ಪಕ್ಷಗಳು ಸ್ಪರ್ಧೆ ಮಾಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಸಭೆಯಲ್ಲಿ  ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಸಹಕಾರ ಪಡೆದು ಅಧಿಕಾರ ಹಿಡಿದಿತ್ತು. ಸದ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಧಿಕಾರದಲ್ಲಿದ್ದು, ಜೆಡಿಎಸ್ ಮೇಯರ್ ಸ್ಥಾನ ಮತ್ತು ಕಾಂಗ್ರೆಸ್ ಉಪ ಮೇಯರ್ ಸ್ಥಾನ ಅಲಂಕರಿಸಿತ್ತು.

ಟಿಕೆಟ್ ವಂಚಿತ ಕಾಂಗ್ರೆಸ್​ ನಾಯಕರಿಂದ ಪ್ರತಿಭಟನೆ

ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿತ ಕಾರ್ಯಕರ್ತರು  ಈಗಾಗಲೇ ಪಕ್ಷದ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೇ,  ಕಲ್ಲು ತೂರಿ ಪಕ್ಷದ ಕಚೇರಿ ಕಿಟಕಿ ಗಾಜು ಪುಡಿ-ಪುಡಿ ಮಾಡಿದ್ದರು. ಟಿಕೆಟ್ ವಂಚಿತರ ಆಕ್ರೋಶ ಈಗ ಮತ್ತಷ್ಟು ಹೆಚ್ಚಾಗಿದೆ. ಗೋಪಿಶೆಟ್ಟಿಕೊಪ್ಪದಲ್ಲಿ ಗುಲ್ನಾಜ್ ಖಾನಂರನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದ್ದ ಪತಿ ರಿಯಾಜ್ ಅಹಮ್ಮದ್​ಗೆ ಕಡೇ ಹಂತದಲ್ಲಿ ಟಿಕೆಟ್ ನಿರಾಕರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
Loading...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಅಡ್ಡಗಟ್ಟಿದ ರಿಯಾಜ್ ಅಹಮ್ಮದ್ ಏಕ ವಚನದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆದಿತ್ತು. ಕಾಂಗ್ರೆಸ್​ಗೆ ಗೋಪಿಶೆಟ್ಟಿಕೊಪ್ಪ ಅಲ್ಲದೇ ವಿನೋಬನಗರ ಉತ್ತರ, ಹೊಸಮನೆಯಲ್ಲೂ ಬಂಡಾಯ ಎದುರಾಗಿದೆ. ಹೊಸಮನೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ರಂಗನಾಥ್ ಅವರ ಪತ್ನಿಗೆ ಟಿಕೆಟ್ ನೀಡಲಿಲ್ಲ ಎಂದು ಬಂಡಾಯ ಸ್ಪರ್ಧೆ ಮಾಡಿದ್ದಾರೆ.

ಬ್ಲಾಕ್ ಅಧ್ಯಕ್ಷರಿಗೆ ಟಿಕೆಟ್ ಇಲ್ಲ

ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಲಿ ಸದಸ್ಯ ವಿಶ್ವನಾಥ ಕಾಶಿ ಅವರಿಗೆ ಟಿಕೆಟ್ ಕೈ ತಪ್ಪಿದೆ. ಮೀಸಲು ಕಾರಣದಿಂದಾಗಿ ವಿಶ್ವನಾಥ ಕಾಶಿ ಅವರು ಬೇರೆ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಮುಖಂಡರ ಸೂಚನೆಯಂತೆ ಗೋಪಾಲಗೌಡ ವಾರ್ಡ್​ನಲ್ಲಿ 20 ದಿನದಿಂದ ಪ್ರಚಾರ ಕೈಗೊಂಡಿದ್ದರು. ಆದರೆ, ಕಡೇ ಹಂತದಲ್ಲಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ.

ಬ್ಲಾಕ್ ಅಧ್ಯಕ್ಷರಿಗೆ ಕಡ್ಡಾಯವಾಗಿ ಟಿಕೆಟ್ ಕೊಡಬೇಕೆಂದು ಪಕ್ಷ ಸೂಚನೆ ನೀಡಿತ್ತು. ಅದೇ ಕಾರಣಕ್ಕೆ ವಿನೋಬನಗರ ಉತ್ತರದಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಟಿಕೆಟ್ ಕೊಡಬೇಕೆಂಬ ಕಾರಣಕ್ಕೆ ದೀಪಕ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ದಕ್ಷಿಣ ಬ್ಲಾಕ್ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದರೂ ವಿಶ್ವನಾಥ್ ಕಾಶಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ಪಕ್ಷದ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸದ್ಯ ಉಪ ಮೇಯರ್  ಸ್ಥಾನ ಪಡೆದಿದೆ.  ವಿಧಾನ ಸಭೆ ಚುನಾವಣೆಯಲ್ಲಿ  ಶಿವಮೊಗ್ಗ ಜಿಲ್ಲೆಯಲ್ಲಿ ಸೋತು ಸುಣ್ಣವಾಗಿರುವ  ಕಾಂಗ್ರೆಸ್​ಗೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಬಿಜೆಪಿಯಲ್ಲೂ ಬಂಡಾಯದ ಬಿಸಿ

ಬಿಜೆಪಿಗೂ ಹಲವೆಡೆ ಬಂಡಾಯ ಎದುರಾಗಿದೆ. ವಿಧಾನಸಭೆಯಲ್ಲಿ ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧೀರರಾಜ್ ಹೊನ್ನವಿಲೆ ಶಾಂತಿನಗರದಿಂದ ಬಂಡಾಯ ಸ್ಪರ್ಧೆ ಮಾಡಿದ್ದಾರೆ. ಕಲ್ಲಹಳ್ಳಿ ಕೆಎಚ್​ಬಿಯಲ್ಲಿ ಹಾಲಿ ಸದಸ್ಯೆ ಅರ್ಚನಾ ಸಂತೋಷ್, ಬಸವನಗುಡಿಯಿಂದ ಶಿವಕುಮಾರ್ ಬಂಡಾಯ ಸ್ಪರ್ಧೆ ಮಾಡಿದ್ದಾರೆ.

ಯಡಿಯೂರಪ್ಪ ಅವರ ಬೆಂಬಲಿಗರಾದ ಹಾಲಿ ಸದಸ್ಯ ಮಾಲತೇಶ್​ಗೆ ಟಿಕೆಟ್  ನಿರಾಕರಿಸಲಾಗಿದೆ.  ಬಳ್ಳಿಕೆರೆ ಸಂತೋಷ್ ಸಹ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡವರು ಅವರಿಗೂ ಸಹ ಟಿಕೆಟ್ ಸಿಕ್ಕಿಲ್ಲ.  ಈಶ್ವರಪ್ಪನವರು ಮಣೆ ಹಾಕಿದ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಶ್ವರಪ್ಪ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಟಿಕೆಟ್ ನೀಡಿರುವುದು ಬಿಜೆಪಿ ಪಟ್ಟಿ ನೋಡಿದರೆ ಗೊತ್ತಾಗುತ್ತದೆ.

ಕಳೆದ ಬಾರಿ ಕೆಜೆಪಿ, ಬಿಜೆಪಿಯಿಂದಾಗಿ ಶಿವಮೊಗ್ಗದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಈ ಬಾರಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ  ರೂಪಿಸುತ್ತಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಜಯಗಳಿಸಿದೆ. ಅದರಲ್ಲೂ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ನಗರ ಕ್ಷೇತ್ರದ ಇತಿಹಾಸದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ  ಜಯಗಳಿಸಿದ್ದಾರೆ. ಇದೇ ಹುರುಪಿನಲ್ಲಿ ಪಕ್ಷದ ಕಾರ್ಯಕರ್ತರು ಪಾಲಿಕೆ ಚುನಾವಣೆಗೆ ಧುಮುಕಿದ್ದಾರೆ. ಅದರೆ ಬಂಡಾಯದ ಬಿಸಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆ ಇದೆ.

ಬಿಜೆಪಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲೇಬೇಕಾದ ಅನಿವಾರ್ಯತೆ ಇದೆ. ಶಿವಮೊಗ್ಗ ಹೇಳಿ ಕೇಳಿ ಯಡಿಯೂರಪ್ಪನವರ ಜಿಲ್ಲೆ, ಈಶ್ವರಪ್ಪನವರ ತವರು ಕ್ಷೇತ್ರ. ಹೀಗಾಗಿ ಬಿಜೆಪಿ ಈ ಚುನಾವಣೆಯನ್ನು ಸವಾಲಾಗಿಯೇ ಸ್ವೀಕರಿಸಿದೆ.

ಜೆಡಿಎಸ್​ಗೆ ಅಭ್ಯರ್ಥಿಗಳೇ ಇಲ್ಲ!

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್​ ತೀವ್ರ ಸ್ಪರ್ಧೆ ಎದುರಾದರೆ ಜೆಡಿಎಸ್​ನಲ್ಲಿ ಕೆಲ ವಾರ್ಡ್​ಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಪಕ್ಷವು 32 ವಾರ್ಡ್​ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗೋಪಾಳಗೌಡ ವಾರ್ಡ್​ನಿಂದ ಸ್ಪರ್ಧೆ ಬಯಸಿದ್ದ ಹಾಲಿ ಸದಸ್ಯ ಮಹೇಶ್ ಅವರಿಗೆ ಪಕ್ಷವು ಅಶ್ವತ್ಥನಗರದಿಂದ ಟಿಕೆಟ್ ಘೋಷಿಸಿತ್ತು. ಆದರೆ, ಮಹೇಶ್ ಅವರು ಸ್ಪರ್ಧೆ ಮಾಡಿಲ್ಲ. ಮತ್ತೊಂದು ಕಡೆ ಬಸವನಗುಡಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ.

ಹಾಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮೇಯರ್ ಸ್ಥಾನ ಹೊಂದಿದೆ.  ಅಂತಹ ಪಕ್ಷಕ್ಕೆ 35 ವಾರ್ಡ್​ಗಳ ಪೈಕಿ ಮೂರರಲ್ಲಿ ಅಭ್ಯರ್ಥಿಗಳೇ ಇಲ್ಲವಾಗಿದೆ.

ಶಿವಮೊಗ್ಗ ಪಾಲಿಕೆ ಅಲ್ಲದೆ ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್​ನೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿರುವ ಜೆಡಿಎಸ್​ಗೆ ಈ ಚುನಾವಣೆ ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ಬಹಳ ಮಹತ್ವದ್ದಾಗಿದೆ. ಆಡಳಿತ ಪಕ್ಷ ಚುನಾವಣೆಯಲ್ಲಿ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಬೇಕಾದ ಅನಿವಾರ್ಯತೆಯಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ದಯನೀಯ ಸೋಲು  ಅನುಭವಿಸಿದೆ. 2013ರಲ್ಲಿ ಇದ್ದ 3 ಶಾಸಕರನ್ನು 2018 ರ ಚುನಾವಣೆಯಲ್ಲಿ ಕಳೆದುಕೊಂಡಿದೆ. ನಗರದ ವ್ಯಾಪ್ತಿಯಲ್ಲಿ ಸಂಘಟನೆ ಸಂಪೂರ್ಣ ನೆಲಕಚ್ಚಿದೆ.  ಮಹಾನಗರ ಪಾಲಿಕೆ ಚುನಾವಣೆ ಸಮಯದಲ್ಲಿ ಜೆಡಿಎಸ್​ಗೆ ನೂತನ ಜಿಲ್ಲಾಧ್ಯಕ್ಷರು ಆಗಮಿಸಿದ್ದಾರೆ. ಮಂಜುನಾಥ್ ಗೌಡ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದು, ಅವರ ಮೇಲೆ  ಜವಾಬ್ದಾರಿ ಹೆಚ್ಚಿದೆ. ಕಳೆದ ಬಾರಿ 35 ವಾರ್ಡ್​ಗಳಲ್ಲಿ  ಜೆಡಿಎಸ್ 6 ಸ್ಥಾನಗಳಿಸಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿಗೆ ಸ್ಥಾನ ಗಳಿಸುವುದು ಜೆಡಿಎಸ್ ಗೆ ಅನಿವಾರ್ಯವಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವಿವರ

ವಾರ್ಡ್​ಗಳ ಸಂಖ್ಯೆ         -      35

ಮತದಾರರು                     -      2,74,218

ಪುರುಷ ಮತದಾರರು   -       1,35,524

ಮಹಿಳಾ ಮತದಾರರು  -   1,38,673

ಮತಗಟ್ಟೆಗಳು               -      283

ಸೂಕ್ಷ್ಮ ಮತಗಟ್ಟೆಗಳು  -   87 

ಅತೀ ಸೂಕ್ಷ್ಮ ಮತಗಟ್ಟೆಗಳು  -    21

ಸಾಮಾನ್ಯ ಮತಗಟ್ಟೆಗಳು   -     175

 

ಒಟ್ಟು ಕಣದಲ್ಲಿರುವ ಅಭ್ಯರ್ಥಿಗಳು  -  206

ಬಿಜೆಪಿ -     35

ಕಾಂಗ್ರೆಸ್ - 35

ಜೆಡಿಎಸ್  - 32

ಬಿಎಸ್ ಪಿ - 2

ಎಸ್ ಪಿ  - 2

ಎಸ್​ಡಿಪಿಐ  - 8

ಪಕ್ಷೇತರರು  -  93
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...