ಬೆಂಗಳೂರು (ಜೂನ್ 22): 2ನೇ ಹಂತದ ಅನ್ಲಾಕ್ ಜಾರಿ ವೇಳೆ 16 ಜಿಲ್ಲೆಗಳಲ್ಲಿ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ ನಿನ್ನೆ ಮತ್ತೆ 6 ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆ ಮಾಡಿದೆ. ಕೊರೋನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇರುವ ಕಾರಣಕ್ಕೆ ಶಿವಮೊಗ್ಗ, ಉಡುಪಿ ಸೇರಿ 6 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಹೀಗಾಗಿ, ಇಂದಿನಿಂದ ಒಟ್ಟು 22 ಜಿಲ್ಲೆಗಳಲ್ಲಿ ಅನ್ಲಾಕ್ ಜಾರಿಗೆ ಬರಲಿದೆ.
ಇಂದಿನಿಂದ ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲೂ ಲಾಕ್ಡೌನ್ ವಿನಾಯಿತಿ ನೀಡಲಾಗಿದೆ. 2ನೇ ಹಂತದ ಕರ್ನಾಟಕ ಅನ್ಲಾಕ್ ಭಾಗವಾಗಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ 16 ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿತ್ತು. ನಿನ್ನೆ ಮತ್ತೆ 6 ಜಿಲ್ಲೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ.
ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಈ ಮೊದಲು ಅನ್ಲಾಕ್ ಜಾರಿ ಮಾಡಲಾಗಿತ್ತು. ಇಂದಿನಿಂದ ಆ ಪಟ್ಟಿಗೆ ಇನ್ನೂ 6 ಜಿಲ್ಲೆಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿ: Gold Price Today: ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ; ಬೆಳ್ಳಿ ಬೆಲೆ ಒಂದೇ ದಿನದಲ್ಲಿ 200 ರೂ. ಏರಿಕೆ
ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಇಂದಿನಿಂದ ಎಸಿ ಬಳಸದೆ ಹೋಟೆಲ್ ತೆರೆಯಲು ಅವಕಾಶವಿದೆ. ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. ಲಾಡ್ಜ್, ರೆಸಾರ್ಟ್, ಜಿಮ್‌ಗಳು ಕೆಲವು ನಿರ್ಬಂಧಗಳೊಂದಿಗೆ ಕಾರ್ಯ ನಿರ್ವಹಿಸಲು ಜನರಿಗೆ ಅವಕಾಶವಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ.
ಅನ್ಲಾಕ್ ಆಗಿರುವ 22 ಜಿಲ್ಲೆಗಳಲ್ಲಿ ಯಾವುದಕ್ಕೆ ಅನುಮತಿ?:
* ಹೋಟೆಲ್ ಆರಂಭಿಸಲು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಂಜೆ 5 ಗಂಟೆಯವರೆಗೂ ಅವಕಾಶ.
* ಹೋಟೆಲ್ಗಳಲ್ಲಿ ಕುಳಿತು ತಿನ್ನಲು ಅವಕಾಶ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ.
* ಬಾರ್ನಲ್ಲಿ ಕುಳಿತು ಊಟ ಮಾಡಲು ಅವಕಾಶ. ಮದ್ಯ ಪೂರೈಕೆಗೆ ಅವಕಾಶ ಇಲ್ಲ
* ಬಸ್, ಮೆಟ್ರೋ ಸಂಚಾರಕ್ಕೆ ಶೇ.50 ಆಸನ ಸಾಮರ್ಥ್ಯದೊಂದಿಗೆ ಅವಕಾಶ
* ರೆಸಾರ್ಟ್ ಮತ್ತು ಲಾಡ್ಜ್ ಗಳಲ್ಲಿ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ
* ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ
* ಹವಾನಿಯಂತ್ರಣವಿಲ್ಲದೆ ಜಿಮ್ ಗಳು ಕಾರ್ಯ ನಿರ್ವಹಿಸಲು ಅವಕಾಶ.
* ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡೆಗೆ ಅವಕಾಶ
ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ; ಮಲೆನಾಡು, ಕರಾವಳಿಯಲ್ಲಿಂದು ಹಳದಿ ಅಲರ್ಟ್ ಘೋಷಣೆ
ಯಾವುದಕ್ಕೆ ನಿಷೇಧ?:
* ಜುಲೈ 5ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ
* ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ
* ಸಿನಿಮಾ ಮಂದಿರ, ದೇಗುಲ, ಮಾಲ್ಗಳನ್ನು ತೆರೆಯಲು ನಿರ್ಬಂಧ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ