Shivamogga ವಿಮಾನ ನಿಲ್ದಾಣಕ್ಕೆ ಬಿಎಸ್​ ಯಡಿಯೂರಪ್ಪ ಹೆಸರು; ಸಿಎಂ ಬಸವರಾಜ ಬೊಮ್ಮಾಯಿ

ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ.

ಬಿ. ಎಸ್.ಯಡಿಯೂರಪ್ಪ

ಬಿ. ಎಸ್.ಯಡಿಯೂರಪ್ಪ

  • Share this:
    ಶಿವಮೊಗ್ಗ (ಏ. 20): ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ (BS Yediyurappa)  ಅವರ ಕನಸಿನ ಕೂಸದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga Airport) ಅವರ ಹೆಸರನ್ನು ಇಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಶಿವಮೊಗ್ಗ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಇಂದು ಇಲ್ಲಿನ ವಿಮಾನ ನಿಲ್ದಾಣ ಕಾಮಾಗಾರಿ ಸೇರಿದಂತೆ ಶಿವಮೊಗ್ಗ ಸ್ಮಾರ್ಟ್​ ಸಿಟಿ (Shivamogga Smart City) ಯೋಜನೆಗಳ ವೀಕ್ಷಣೆ ನಡೆಸಿದರು. ಬಳಿಕ ಮಾತನಾಡಿದ ಅವರು ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನನಿಲ್ದಾಣಕ್ಕೆ ಬಿ. ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. 

    ಕೇಂದ್ರದ ಅನುಮೋದನೆಗೆ ಪ್ರಸ್ತಾವನೆ

    ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ. ಉಡಾನ್ ಯೋಜನೆಯಡಿ ಕಾಮಗಾರಿಯಲ್ಲಿ ಕೈಗೊಂಡಿದ್ದು, ವಿಮಾನನಿಲ್ದಾಣ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಲಾಗುವುದು. ಎಟಿಸಿ ಪರಿಕರಗಳನ್ನು ಅಳವಡಿಸಿ, ಸೌಲಭ್ಯಗಳನ್ನು ನಿರ್ಮಿಸಲಾಗುವುದು ತಿಳಿಸಿದರು.



    ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
    ಶಿವಮೊಗ್ಗದ ಕೈಗಾರಿಕೋದ್ಯಮ, ಶಿಕ್ಷಣ, ಆರೋಗ್ಯ ಎಲ್ಲ ಅಭಿವೃದ್ಧಿಗೆ ವಿಮಾನ ಸೌಲಭ್ಯ ಬಹಳ ಪ್ರಮುಖವಾಗಿದ್ದು, ಜನರ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಬೆಂಗಳೂರು ನಂತರ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಬಿಜಾಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಇಂಬು ನೀಡಲು ವಿಮಾನನಿಲ್ದಾಣದ ಅವಶ್ಯಕತೆ ಬಹಳ ವರ್ಷಗಳಿಂದ ಇದೆ.

    ಯಡಿಯೂರಪ್ಪ ಅವರ ಕನಸಿನ ಕೂಸು

    ಯಡಿಯೂರಪ್ಪ ಅವರು 2006-07 ರಿಂದ ಇಲ್ಲಿ ವಿಮಾನ ನಿಲ್ದಾಣ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ.

    ಇದನ್ನು ಓದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ; ಸಚಿವ ಸುನೀಲ್ ಕುಮಾರ್​​​

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.

    ಜಮೀನು ನೀಡಲು ರೈತರ ಒಪ್ಪಿಗೆ
    ವಿಮಾನನಿಲ್ದಾಣಕ್ಕೆ ಜಿಲ್ಲೆಯ ಹಲವಾರು ರೈತರು ಈಗಾಗಲೇ ಸಹಕಾರ ನೀಡಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಗಿದೆ. ಮುಂದೆ ಅವಶ್ಯಕತೆ ಇರುವ ಜಮೀನನ್ನು ನೀಡಲು ರೈತರು ಒಪ್ಪಿ ಸಹಕರಿಸಿದ  ಅವರಿಗೆ ಧನ್ಯವಾದಗಳು ಎಂದರು.

    ಇದನ್ನು ಓದಿ: ಬೆಂಗಳೂರಿಗೆ ಬಂದಿಳಿದ ದೆಹಲಿ ಸಿಎಂ; ನಾಳೆ ಬೃಹತ್​ ರೈತ ಸಮಾವೇಶದಲ್ಲಿ ಭಾಗಿ

    ಹೆಚ್ಚುವರಿ ಅನುದಾನ ಬಿಡುಗಡೆ
    ವಿಮಾನನಿಲ್ದಾಣ ಕಾಂಪೌಂಡ್ ಸುತ್ತಲಿನ ಸರ್ವಿಸ್ ರಸ್ತೆಗೆ ಡಾಂಬರು ಹಾಕಬೇಕಾಗಿದೆ. ರಾತ್ರಿ ವೇಳೆಯಲ್ಲಿ ವಿಮಾನಗಳನ್ನು ಇಳಿಸಲು (ನೈಟ್ ಲ್ಯಾಂಡಿಂಗ್) ಸೌಲಭ್ಯ ಕಲ್ಪಿಸಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಸುಮಾರು 40-50 ಕೋಟಿ ರೂ.ಗಳ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರ ಅನುಮೋದನೆ ಮಾಡಿ ಬಿಡುಗಡೆ ಮಾಡಲಿದೆ. ಕಾಂಪೌಂಡಿನ ಹೊರಗೆ ರೈತರು ಹೊಲಗಳನ್ನು ಬಿಟ್ಟುಕೊಟ್ಟಿದ್ದು ಅವರು ಓಡಾಡಲು ತೊಂದರೆಯಾಗುತ್ತದೆ. ಅದಕ್ಕಾಗಿ ಕಾಂಪೌಂಡಿನ ಆಚೆಗೂ ಡಾಂಬರು ರಸ್ತೆ ನಿರ್ಮಿಸಲಾಗುವುದು. ಶಿವಮೊಗ್ಗದಿಂದ ವಿಮಾನ ನಿಲ್ದಾಣದ ರಸ್ತೆಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಟ್ಟಕ್ಕೆ ಅಬಿವೃದ್ಧಿ ಮಾಡಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೂ ಬಹಳ ದೊಡ್ಡ ಸಹಾಯಾಗಲಿದೆ.

    ಜೋಗ ಅಭಿವೃದ್ಧಿಗೆ 300 ಕೋಟಿ
    ಜೋಗದ ಅಭಿವೃದ್ಧಿಗೂ 300 ಕೊಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಕೇಬಲ್ ಕಾರ್, ಓಡಾಡಲು ವ್ಯವಸ್ಥೆ, ವೀಕ್ಷಣಾ ಪಾಯಿಂಟ್, ಹೋಟೇಲ್, ಡಾರ್ಮೆಟರಿಗಳನ್ನು ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಮಾತ್ರ ಪ್ರವಾಸಿಗರನ್ನು ಜೋಗ ಆಕರ್ಷಿಸುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ವರ್ಷದಲ್ಲಿ 10 ತಿಂಗಳು ಜೋಗ ಜಲಪಾತವನ್ನು ಬಳಕೆ ಮಾಡಬಹುದಾಗಿದೆ ಎಂದರು.
    Published by:Seema R
    First published: