ಶಿವಮೊಗ್ಗ: ಇದೇನಿದು ದೇವಾಲಯದ ಆವರಣದಲ್ಲಿ ಬೀಡಿ, ಸಿಗರೇಟಾ ಅಂತಾ ಕೇಳ್ಬೇಡ್ರಿ. ಇದು ಇಲ್ಲಿಗೆ ಅರ್ಪಿಸೋ ಹರಕೆ, ಹೀಗೆ ಆರೋಗ್ಯಕ್ಕೆ ಹಾನಿಕರವಾದ ಧೂಮಪಾನವೇ ಈ ದೈವದ (Daiva) ನೈವೇದ್ಯ. ನಿಮ್ಮ ಇಷ್ಟಾರ್ಥಗಳು ಈಡೇರಬೇಕಿದ್ರೆ ನೀವ್ ಕೊಡ್ಬೇಕಾದ ಹರಕೆನೂ ಇದೆ. ಅಷ್ಟಕ್ಕೂ ಈ ಬೀಡಿ, ಸಿಗರೇಟು ನೈವೇದ್ಯ ಅಂತಾ ಸ್ವೀಕರಿಸುವ ಈ ದೈವವಾದ್ರೂ (Bhangi Bhootappa) ಯಾವುದು ಅಂತೀರ? ಈ ಕುರಿತ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ ನೋಡಿ.
ಹೌದು, ಇದು ಶಿವಮೊಗ್ಗದ ಸಾಗರದ ಅನಂತಪುರ ವ್ಯಾಪ್ತಿಯ ಯಡೇಹಳ್ಳಿಯ ಬಸವನಹೊಂಡದಲ್ಲಿ ಕಂಡು ಬರೋ ಭಂಗಿ ಭೂತಪ್ಪನ ದೇವಸ್ಥಾನ. ರುಮಾಲು ಧರಿಸದ ಅಜ್ಜನ ಹೋಲುವ ಭಂಗಿ ಭೂತಪ್ಪ ಮೂರ್ತಿ ಕೆಳಗಡೆ ಇದ್ದರೆ, ಅದ್ರ ದೊಡ್ಡ ಲಿಂಗಾಕಾರದ ಮೂರ್ತಿಯಿದೆ. ಇಲ್ಲಿನ ದೈವವಾದ ಭೂತಪ್ಪನಿಗೆ ಭಂಗಿಯೇ ವಿಶೇಷ ನೈವೇದ್ಯ.
ಭಂಗಿಗೆ ಒಲಿಯುವ ದೈವ
ತಂಬಾಕು, ಭಂಗಿಯ ವಾಸನೆಗೆ ಒಲಿದು ಬೇಡಿದ್ದನ್ನು ಕೊಡೋ ದೈವ ಇದು ಅನ್ನೋ ನಂಬಿಕೆ. ಕರಾವಳಿ ಹಾಗೂ ಮಲೆನಾಡಿನವರು ಭಯ ಭಕ್ತಿಯಿಂದ ಸ್ಮರಿಸುವ ದೈವವೂ ಇದಾಗಿದೆ. 16 ನೇ ಶತಮಾನಕ್ಕಿಂತ ಹಿಂದಿನಿಂದಲೂ ಈ ದೈವದ ಆರಾಧನೆಯಿದೆಯಂತೆ. ಅಲ್ಲದೇ ಅಜ್ಜನ ರೂಪದಲ್ಲಿ ಆಗಾಗ ಇಲ್ಲಿ ದೈವವು ಕಾಣಿಸಿಕೊಳ್ಳುವ ಪ್ರತೀತಿಯಿದೆ. ಇಲ್ಲಿ ಇಷ್ಟಾರ್ಥ ಸಿದ್ಧಿಸಲು ಸಿಗರೇಟು, ಕೋಳಿ ಕೊಡುವ ಪದ್ಧತಿ ಉಂಟು.
ಕಲ್ಲಿನ ಹರಕೆ
ಅಷ್ಟೇ ಅಲ್ಲದೇ, ಕಲ್ಲಿನ ಟ್ರಾಲಿ ಸಾಗಿಸುವವರು ಒಂದು ಕಲ್ಲನ್ನು ಇಲ್ಲಿಟ್ಟು ಹೋಗುತ್ತಾರೆ. ಯಾರೇ ಈ ಮಾರ್ಗದಲ್ಲಿ ಹೊರಟರೂ ಎರಡು ನಿಮಿಷ ನಿಂತು ಕೈ ಮುಗಿದು ಮುಂದಕ್ಕೆ ಸಾಗೋದು ರೂಢಿ. ಪ್ರತಿ ಸೋಮವಾರದ ಬೆಳಿಗ್ಗೆ ಮಾತ್ರ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಇದು ಹೊಸನಗರ ಮೂಲಕ ಉಡುಪಿಗೆ ತೆರಳುವ ಮಾರ್ಗವಾಗಿದ್ದರಿಂದ ಕರಾವಳಿ ಹಾಗೂ ಮಲೆನಾಡು ಎರಡೂ ಭಾಗದ ಜನರಿಗೆ ಈ ದೈವದ ಬಗ್ಗೆ ವಿಶೇಷ ನಂಬಿಕೆಯಿದೆ.
ಇದನ್ನೂ ಓದಿ: Shivamogga Viral News: ಅಪ್ಪನ ಸಾವಿನ ನಡುವೆಯೂ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ! ವಿಡಿಯೋ ಕಾಲ್‌ನಲ್ಲೇ ಅಂತ್ಯಸಂಸ್ಕಾರ
ಇಲ್ಲಿದ್ದಾನೆ ಭಂಗಿ ಭೂತಪ್ಪ
ಸಾಗರದಿಂದ ಯಡೇಹಳ್ಳಿಗೆ ಬಂದು ಎರಡು ಕಿಲೋಮೀಟರ್ ಸಾಗಿದರೆ ಈ ದೈವದ ದರ್ಶನವಾಗುತ್ತದೆ. ಅಲ್ಲಿ ಎತ್ತರದ ಮಂದಿರದಲ್ಲಿ ಬಸವನಹೊಂಡ ಭಂಗಿ ಭೂತಪ್ಪ ದೇವಾಲಯ ಎಂದು ಬರೆದಿರುವುದನ್ನು ನೋಡಬಹುದು.
ಇದನ್ನೂ ಓದಿ: Travel Subsidy: ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ 500 ರೂಪಾಯಿ ಸಬ್ಸಿಡಿ!
ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಸೇರಿದಂತೆ ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತವೆ. ಒಟ್ಟಿನಲ್ಲಿ ಭಂಗಿ ಭೂತಪ್ಪ ತನ್ನ ಹೆಸರಿಗೆ ತಕ್ಕಂತೆ ಬೀಡಿ, ಸಿಗರೇಟು ಹೀಗೆ ತಂಬಾಕಿನ ಘಾಟಿಗೆ ಒಲಿದು ಬಿಡುವ ದೈವ ಅನ್ನೋ ಪ್ರತೀತಿಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ