ಶಿವಮೊಗ್ಗ: ಗೋಡೆ (Wall) ಮೇಲಿನ ಚಿತ್ರ ವಿಚಿತ್ರ ಶಿಲ್ಪ ಕಲೆಗಳು. ಹಲ್ಲಿ, ಚೇಳು ಓಡಾಡುವಂತಹ ರೀತಿಯ ಕೆತ್ತನೆಗಳು. ಒಳಗಡೆ ಪುಟ್ಟದಾದ ದೇವರ (God) ವಿಗ್ರಹಗಳು. ಇನ್ನೊಂದೆಡೆ ಹಂಪಿಯ (Hampi) ಕಲ್ಲಿನ ರಥದಂತಹ ಆಕರ್ಷಣೆ. ಹೌದು, ಇದು ಎಷ್ಟು ವಿಶೇಷವಾಗಿದೆಯೋ, ಅಷ್ಟೇ ಕುತೂಹಲಭರಿತವೂ ಆಗಿದೆ. ಹಾಗಿದ್ರೆ ಏನಿದು ಅಂತೀರಾ? ಇದೆಲ್ಲವನ್ನೂ ಹೇಳ್ತೀವಿ ನೋಡಿ.
ವಿಚಿತ್ರವಾಗಿದೆ ಈ ದೇಗುಲ
ಯೆಸ್, ಈ ಪುರಾತನ ಕಟ್ಟಡ ಅದೆಷ್ಟು ವಿಚಿತ್ರವಾಗಿದೆ ಅಲ್ವ, ಅಂತೆಯೇ ಈ ದೇಗುಲದಲ್ಲಿನ ವಿಷಯವೂ ಅಷ್ಟೇ ವಿಶೇಷವಾಗಿದೆ. ಯೆಸ್, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿಯಲ್ಲಿರುವ ಅಘೋರನಾಥೇಶ್ವರ ದೇವಸ್ಥಾನವು ಅಘೋರಿಗಳಂತೆಯೇ ವಿಚಿತ್ರ ಹಾಗೂ ವಿಶೇಷವಾಗಿದೆ. ಆದರೆ ಮನಶಾಂತಿಗೆ ಹೇಳಿಟ್ಟ ತಾಣ ಅನ್ನೋದು ಇಲ್ಲಿಗೆ ಬರೋ ಪ್ರತಿಯೊಬ್ಬರು ಕಂಡುಕೊಂಡ ಸತ್ಯ.
32 ಕೈಗಳುಳ್ಳ ಶಿವನ ವಿಗ್ರಹ
1499 ರಲ್ಲಿ ಕೆಳದಿ ಶಿವಪ್ಪನಾಯಕ, ರಾಣಿ ಚೆನ್ನಮ್ಮ, ಸದಾಶಿವನಾಯಕ ಎಲ್ಲರೂ ಸೇರಿ ನಿರ್ಮಿಸಿದ ದೇವಾಲಯವೇ ಈ ಇಕ್ಕೇರಿಯ ಅಘೋರನಾಥೇಶ್ವರ ದೇವಸ್ಥಾನ. 16-17ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಶಿಲ್ಪಕಲಾ ಮಾದರಿಯಲ್ಲಿ ನಿರ್ಮಾಣವಾದ ಈ ದೇಗುಲದಲ್ಲಿ ವೀರಭದ್ರ, ಗೋಪಾಲಕೃಷ್ಣ, ಗಣೇಶ, ಷಣ್ಮುಖ, ಅಘೋರೇಶ್ವರ ಮೂರ್ತಿಗಳಿವೆ. ಹಾಗೆಯೇ ದೊಡ್ಡ ಮಂದಿರದ ತದ್ರೂಪಿ ಸಣ್ಣ ದೇಗುಲ ನಿರ್ಮಿಸಿ ಅದರಲ್ಲಿ ಅಖಿಲಾಂಡೇಶ್ವರಿ ಎಂಬ ಪಾರ್ವತಿ ಅವತಾರವನ್ನು ಪೂಜಿಸಲಾಗುತ್ತದೆ. ಹಾಗೆಯೇ ಈ ದೇಗುಲದ ಗರ್ಭಗುಡಿಯನ್ನು ಮೂವತ್ತೆರೆಡು ದೇವತೆಗಳು ಸುತ್ತುವರೆದಿದ್ದಾವಂತೆ ಹಾಗೂ ಗರ್ಭಗುಡಿಯಲ್ಲಿ 32 ಕೈಯುಳ್ಳ ಶಿವನ ವಿಗ್ರಹವಿದೆಯಂತೆ.
ಅಘೋರಿಗಳ ನೆಚ್ಚಿನ ತಾಣ
ಅಚ್ಚರಿಯ ವಿಷಯವೇನೆಂದರೆ ಈ ಜಾಗ ತಂತ್ರ ಮಂತ್ರ ಸಾಧನೆಗೆ ಹೆಸರುವಾಸಿಯಾಗಿತ್ತು. ಹಾಗಾಗಿ ವಾರಣಸಿಯ ಅಘೋರಿಗಳು ಇಲ್ಲಿ ಬಂದು ತಪಸ್ಸನ್ನಾಚರಿಸುತ್ತಿದ್ದರು. ಹೀಗೆ ಅಘೋರಿಗಳಿಂದ ಪೂಜೆಗೊಂಡ ಲಿಂಗವೇ ಇಲ್ಲಿ ಪ್ರತಿಷ್ಠಾಪನೆಗೊಂಡಿದೆ ಎಂಬ ಪ್ರತೀತಿ ಇದೆ. ಆದ್ದರಿಂದಲೇ ಅಘೋರನಾಥೇಶ್ವರ ದೇಗುಲ ಎಂಬ ಹೆಸರೂ ಬಂದಿದೆ. ಹೀಗಾಗಿ ಇಲ್ಲಿನ ಶಿವ ತನ್ನ ಭಕ್ತರಿಗೆ ಬೇಗನೆ ಒಲಿಯುತ್ತಾನೆ ಅನ್ನೋ ನಂಬಿಕೆಯಿದೆ.
ಹಲ್ಲಿ, ಚೇಳಿನ ವೈಶಿಷ್ಟ್ಯತೆ!
ಇನ್ನು ಹೊರಗಡೆ ಪ್ರಾಂಗಣದಲ್ಲಿ ನಂದಿಕೇಶ್ವರ ಮಂಟಪದ ನಂದಿ ಚಿತ್ತಾಕರ್ಷಣೆ ಹೊಂದಿದೆ. ಇನ್ನು ದೇವಸ್ಥಾನದ ತುಂಬೆಲ್ಲಾ ಮಂಡಲಗಳ ರಚನೆ ಇದ್ದು, ಇದು ತಂತ್ರ ಸಾಧನೆಯ ತಾಣ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಇಲ್ಲಿ ಎರಡು ಹಲ್ಲಿ ಹಾಗೂ ಚೇಳಿನ ಶಿಲ್ಪದ ಮೂಲಕ ಕಾಲಜ್ಞಾನ ಹೇಳಲಾಗಿದೆ.
ಹೀಗೆ ಆದ್ದಲ್ಲಿ ಪ್ರಳಯ!
ಹಲ್ಲಿಗಳು ಕಚ್ಚಾಡುವ ಸ್ವಭಾವದವು ಅವುಗಳಿಗೆ ಒಂದು ಗೆರೆ ಮೂಲಕ ತಡೆ ಒಡ್ಡಲಾಗಿದೆ ಅವು ಅದನ್ನು ದಾಟಿದ ದಿನ ಜಗತ್ತಿಗೆ ಪ್ರಳಯ ಎಂಬ ನಂಬಿಕೆಯೊಂದಿದೆ. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ವೈಶಿಷ್ಟ್ಯತೆಗಳನ್ನೇ ಕಣ್ತುಂಬಿಕೊಳ್ಳಬಹುದಾದ ತಾಣವಿದು.
ಇಲ್ಲಿದೆ ಅಘೋರನಾಥೇಶ್ವರ
ಸಾಗರಕ್ಕೆ ಬಂದರೆ ಸಿಗಂದೂರು ಬಸ್ ಹತ್ತಿ ಇಕ್ಕೇರಿ ಕ್ರಾಸ್ ಬಳಿ ಇಳಿದು ಒಂದು ಕಿಲೋ ಮೀಟರ್ ನಡೆದರೆ ಸಾಕು ಈ ದೇವಸ್ಥಾನದ ದರ್ಶನವಾಗುತ್ತದೆ. ಒಟ್ಟಿನಲ್ಲಿ ಇಕ್ಕೇರಿ ಅಘೋರನಾಥೇಶ್ವರ ಹತ್ತು ಹಲವು ವಿಶೇಷತೆಗಳ ದೇಗುಲ ಅನ್ನೋದನ್ನ ಮರೆಯುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ