ಬೆಂಗಳೂರು (ಡಿಸೆಂಬರ್ 17); ಕಳೆದ ಉಪ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಅಚ್ಚರಿಯ ಆಘಾತ ನೀಡಿದವರೆಂದರೆ ಬಿಜೆಪಿ ಸಂಸದ ಬಚ್ಚೇಗೌಡ ಅವರ ಶರತ್ ಬಚ್ಚೇಗೌಡ. ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಯಾಗಿದ್ದ ಎಂಟಿಬಿ ನಾಗರಾಜ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಚಿವ ಸ್ಥಾನಕ್ಕೆ ಏರುವ ಆಸೆಯಲ್ಲಿದ್ದರು. ಆದರೆ, ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಎಂಟಿಬಿ ನಾಗರಾಜ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಮೂಲಕ ಇಡೀ ರಾಜ್ಯ ರಾಜಕೀಯ ವಲಯದಲ್ಲಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಇದೀಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರ? ಎಂಬ ಪ್ರಶ್ನೆ ಮನೆ ಮಾಡಿದೆ.
ಪಕ್ಷೇತರರಾಗಿ ಗೆದ್ದಿದ್ದರೂ ಸಹ ಶರತ್ ಬಚ್ಚೇಗೌಡ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಎಂಟಿಬಿ ನಾಗರಾಜ್ ವಿರೋಧ ವ್ಯಕ್ತಪಡಿಸಿದ ಕಾರಣ ಈ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಇಷ್ಟು ದಿನ ಶರತ್ ಬಚ್ಚೇಗೌಡ ಸಹ ಸುಮ್ಮನಿದ್ದರು. ಆದರೆ, ನಿನ್ನೆ ತಡರಾತ್ರಿ ಶರತ್ ಬಚ್ಚೇಗೌಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ; ರಾತ್ರಿ ಪಾರ್ಟಿ ಮುಗಿಸಿ ಸ್ನೇಹಿತರ ಮನೆಯಲ್ಲೇ ನೇಣಿಗೆ ಶರಣು
ಭೇಟಿ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಜೊತೆಗೆ ಆಗಮಿಸಿ ಡಿಕೆ ಶಿವಕುಮಾರ್ ಅವರೊಂದಿಗೆ 30 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿರುವ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಭರವಸೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ