ಕಲಬುರ್ಗಿ (ನ.20): ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಶಾಸಕರ ಪತ್ನಿಯ ಕಾರು ಸೀಜ್ ಆಗಿದ್ದರೂ ಬಿಜೆಪಿ ನಾಯಕರು ಮಾನ ಮರ್ಯಾದೆ ಇಲ್ಲದೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ನಗರದ ಗ್ರಾಮೀಣ ಕ್ಷೇತ್ರದ ಶಾಸಕರ ಹೆಂಡತಿ ಜಯಶ್ರೀ ಕಾರು ಸೀಜ್ ಆಗಿದೆ. ಇಷ್ಟಾದರೂ ಬಿಜೆಪಿ ನಾಯಕರು ಮಾನ ಮರ್ಯಾದೆ ಇಲ್ಲದವರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಗೆ ಎಂಎಲ್ ಎ ಟಿಕೆಟ್ ನೀಡಿದೆ. ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ಎಂಎಲ್ಎ ಆದರೆ ಯುವಕರ ಗತಿಯೇನು ಎಂದು ಪಾಟೀಲ ಪ್ರಶ್ನಿಸಿದ್ದಾರೆ. ಶಾಸಕ ಬಸವರಾಜ ಮುತಿಮೋಡ ವಿರುದ್ಧ ಹಿಂದೆ 12 ಪ್ರಕರಣಗಳಿದ್ದವು. ಪೊಲೀಸರು ಶಾಮೀಲಾಗಿದ್ದರಿಂದ ಮತ್ತು ಬೆಟ್ಟಿಂಗ್ ಕಾನೂನು ದುರ್ಬಲವಿದ್ದುದರಿಂದ ಪ್ರಕರಣದಿಂದ ಮತ್ತಿಮೂಡ್ ಖುಲಾಸೆಯಾಗಿದ್ದಾರೆ. ಆದರೆ ಈಗ ಅವರ ಪತ್ನಿಯ ಕಾರೇ ಸೀಜ್ ಆಗಿದೆ. ಶಾಸಕರ ಬಾಮೈದ ನಾಪತ್ತೆಯಾಗಿದ್ದಾನೆ. ಇಷ್ಟೆಲ್ಲಾ ನಡೆದಿರುವಾಗ ಪತ್ನಿಯ ಕಾರು ಸೀಜ್ ರಾಜಕೀಯ ಪ್ರೇರಿತ ಹೇಗಾಗುತ್ತೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮತ್ತಿತರರು ಬೆಟ್ಟಿಂಗ್ ಪ್ರಕರಣ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾಲೀಕಯ್ಯ ಅಂತಹ ಹಿರಿಯ ನಾಯಕರಿಂದ ಇದು ನಿರೀಕ್ಷಿಸಿರಲಿಲ್ಲ. ಬೆಟ್ಟಿಂಗ್ ದಂಧೆಕೋರರನ್ನು ಸಮರ್ಥಿಸಿಕೊಳ್ಳೋದು ನೈತಿಕವಾಗಿ ಎಷ್ಟು ಸರಿ ಎಂದು ಇದೇ ವೇಳೆ ಪ್ರಶ್ನಿಸಿದರು.
ಮಾಲೀಕಯ್ಯ ಗುತ್ತೇದಾರ ಮಾತೆತ್ತಿದರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯುತ್ತಾರೆ. ಪ್ರತಿಯೊಂದಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಣೆ ಮಾಡುತ್ತಾರೆ. ತಮ್ಮ ಸ್ವಯಂಕೃತ ಅಪರಾಧಗಳಿಂದಾಗಿ ಮಾಲೀಕಯ್ಯ ರಾಜಕೀಯ ಸ್ಥಾನಮಾನ ಕಳೆದುಕೊಂಡಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಸಚಿವ ಸ್ಥಾನಗಳನ್ನೂ ಕಳೆದುಕೊಂಡಿದ್ದಾರೆ. ರಾಜಕೀಯವಾಗಿ ಬೆಳೆದದ್ದೇ ಮಲ್ಲಿಕಾರ್ಜುನ ಖರ್ಗೆ ಪ್ರೋತ್ಸಾಹದಿಂದ ಎನ್ನುವುದನ್ನು ಮರೀಬಾರದು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಪ್ರಿಯಾಂಕ್ ಖರ್ಗೆ ನನ್ನ ಮುಂದೆ ಬಚ್ಚಾ: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಕಿಡಿ
ಸಿಎಂ ರಾಜೀನಾಮೆಗೆ ಬಿ.ಆರ್.ಪಾಟೀಲ ಆಗ್ರಹ
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಯಡಿಯೂರಪ್ಪಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಇಂತಹ ವಾತಾವರಣದಲ್ಲಿ ಮುಂದುವರಿಯೋ ಬದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಅತಿವೃಷ್ಟಿ ಮತ್ತು ಪ್ರವಾಹ ದಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ನೂರಾರು ಕೋಟಿ ಹಾನಿಯಾಗಿದೆ.
ಆದರೆ, ಇದುವರೆಗೂ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಎನ್.ಡಿ.ಆರ್.ಎಫ್. ಅಡಿಯೂ ಕೇಂದ್ರ ಹಣ ಕೊಟ್ಟಿಲ್ಲ. ಪರಿಹಾರಕ್ಕಾಗಿ ಯಡಿಯೂರಪ್ಪ ಕೇಂದ್ರದ ಮುಂದೆ ಕೈಕಟ್ಟಿ ನಿಂತರೂ ಪ್ರಯೋಜನವಿಲ್ಲದಂತಾಗಿದೆ. ಕೇಂದ್ರದ ಮುಂದೆ ಯಡಿಯೂರಪ್ಪ ಪದೇ ಪದೇ ಅಪಮಾನಕ್ಕೊಳಗಾಗುತ್ತಿದ್ದಾರೆ. ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಸಿಎಂ ಸ್ಥಾನದಲ್ಲಿ ಮುಂದುವರಿಯೋ ಅವಶ್ಯಕತೆಯಿಲ್ಲ. ಯಡಿಯೂರಪ್ಪ ತಕ್ಷಣ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರ ಬರಬೇಕು. ಕನಿಷ್ಠ ಘನತೆ ಗೌರವನಾದ್ರೂ ಉಳಿಯುತ್ತದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ