ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಶಂಕರ ಫಾಲ್ಸ್

ದಟ್ಟಕಾನನದ ಮಧ್ಯೆಯಿರೋ ಈ ಜಲಪಾತದ ಹೆಸರು ಶಂಕರ ಫಾಲ್ಸ್. ಇಲ್ಲಿ ಒಂದು ಕಲ್ಲು ಶಂಕರನ ರೂಪದಲ್ಲಿದ್ದು, ಅದರ ಮೇಲಿಂದ ಗಂಗೆ ಉಕ್ಕಿ ಹರಿದ ಹಾಗೆ ನೋಡುಗರಿಗೆ ಭಾಸವಾಗುತ್ತದೆ. ಹಾಗಾಗಿಯೇ ಈ ಜಲಪಾತಕ್ಕೆ ಹಿಂದಿನಿಂದಲೂ ಶಂಕರ ಜಲಪಾತವೆಂದು ನಾಮಕರಣ ಮಾಡಲಾಗಿದೆ

news18-kannada
Updated:January 14, 2020, 7:57 AM IST
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಶಂಕರ ಫಾಲ್ಸ್
ಶಂಕರ ಫಾಲ್ಸ್
  • Share this:
ಚಿಕ್ಕಮಗಳೂರು (ಜ.14) : ಚಿಕ್ಕಮಗಳೂರಿನಲ್ಲಿ ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಹಿಡಿದ ದಾರಿಯಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಅದರಲ್ಲೂ ಮಲೆನಾಡಿನ ಸುತ್ತಮುತ್ತಲಿರೋ ಝರಿ, ಜಲಪಾತಗಳಂತೂ ನೋಡುಗನ ಮನಸ್ಸಿನ ಭಾವನೆಗಳಿಗೆ ಜೀವ ತುಂಬುತ್ತವೆ. ಸದ್ಯ ಕಾಫಿನಾಡಲ್ಲಿ ಚುಮು ಚುಮು ಚಳಿ ಜೋರಾಗಿದ್ದು, ಮೈ ಕೈ ನಡುಗಿಸೋ ಚಳಿ ಮಧ್ಯೆಯೂ ಜಲಪಾತದಲ್ಲಿ ಮಿಂದೇಳೋ ಖುಷಿ ಸಖತ್ ಥ್ರಿಲ್ ಕೊಡುತ್ತೆ.

ದಟ್ಟಕಾನನದ ಮಧ್ಯೆಯಿರೋ ಈ ಜಲಪಾತದ ಹೆಸರು ಶಂಕರ ಫಾಲ್ಸ್. ಇಲ್ಲಿ ಒಂದು ಕಲ್ಲು ಶಂಕರನ ರೂಪದಲ್ಲಿದ್ದು, ಅದರ ಮೇಲಿಂದ ಗಂಗೆ ಉಕ್ಕಿ ಹರಿದ ಹಾಗೆ ನೋಡುಗರಿಗೆ ಭಾಸವಾಗುತ್ತದೆ. ಹಾಗಾಗಿಯೇ ಈ ಜಲಪಾತಕ್ಕೆ ಹಿಂದಿನಿಂದಲೂ ಶಂಕರ ಜಲಪಾತವೆಂದು ನಾಮಕರಣ ಮಾಡಲಾಗಿದೆ. ಸುಮಾರು 20 ಅಡಿ ಎತ್ತರದಿಂದ ಬೀಳೋ ಈ ಗಂಗೆಗೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳೊ ತಾಕತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಬಳಿಯಿರುವ ಈ ಫಾಲ್ಸ್, ಬೇಸಿಗೆಯಲ್ಲೂ ತನ್ನ ಸೌಂದರ್ವನ್ನ ಕಡಿಮೆ ಮಾಡಿಕೊಂಡಿಲ್ಲ. ಒಮ್ಮೆ ಈ ಸ್ಥಳಕ್ಕೆ ತೆರಳಿದ್ರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ. ಕಪ್ಪು ಬಂಡೆಗಳ ನಡುವೆ  ಹಾಲು ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನು ವರ್ಣಿಸಲು ಅಸಾಧ್ಯ.

ಕಳೆದ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರೋದ್ರಿಂದ ಜಲಪಾತದಲ್ಲಿ ನೀರು ಯಥೇಚ್ಚವಾಗಿ ಹರಿಯುತ್ತಿದ್ದು, ಧುಮ್ಮಿಕುತ್ತಿರುವ ಗಂಗೆಗೆ ಬೆನ್ನು ಕೊಡೊದೇ ಒಂದು ರೀತಿಯ ಥ್ರಿಲ್ ಆದ ಅನುಭವ ವಾಗುತ್ತದೆ.  ಕಡಿಮೆ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾದ ಶಂಕರ ಫಾಲ್ಸ್ ಹೊರ ಜಗತ್ತಿಗೆ ಎಲೆಮರೆಕಾಯಂತಾಗಿದೆ. ಈ ನಡುವೆಯೂ ವೀಕೆಂಡ್ ಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಜಲಪಾತಕ್ಕೆ ಆಗಮಿಸಿ ಮಸ್ತ್ ಎಂಜಾಯ್ ಮಾಡುತ್ತಾರೆ.

ಇದನ್ನೂ ಓದಿ : ನಿವೃತ್ತ ಸೈನಿಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ವಂಚಕರು

ಬೇರೆ ಫಾಲ್ಸ್ ಗೆ ಹೋಲಿಸಿದ್ರೆ ಇಲ್ಲಿ ಕೊಂಚ ಪ್ರವಾಸಿಗರ ಕೊರತೆ ಇದ್ದರೂ ಸೌಂದರ್ಯದ ಸೊಬಗಿಗೆನೋ ಕೊರತೆ ಇಲ್ಲ. ಶಂಕರ ಜಲಪಾತದಲ್ಲಿ ಮೇಲಿಂದ ಧುಮ್ಮುಕ್ಕೋ ನೀರಿಗೆ ಮೈಯೊಡ್ಡಿ ನಿಂತರೆ ಮೇಲೇ ಬರಲು ಮನಸ್ಸೇ ಆಗಲ್ಲ. ದಟ್ಟ ಕಾನನ ನಡುವೆ ಪ್ರಕೃತಿಯ ಸೌಂದರ್ಯದ ಸಿರಿಯನ್ನೇ ಹೊದ್ದುಕೊಂಡು ಮಲಗಿರೋ ಈ ಶಂಕರ ಜಲಪಾತ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರೋದಂತೂ ಸುಳ್ಳಲ್ಲ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ