ಬೆಂಗಳೂರು (ಮೇ 25): ಕರ್ನಾಟಕದಲ್ಲಿ ಜೂನ್ 25ರಿಂದ ಜುಲೈ 4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಹಾಗೇ, ಜೂನ್ 18ಕ್ಕೆ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸದಂತೆ ಮನವಿ ಮಾಡಿದ್ದಾರೆ.
ಜೂನ್ 18ರಿಂದ ಪಿಯುಸಿ ಪರೀಕ್ಷೆ, ಜೂನ್ 25ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಜುಲೈ 4ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯಲಿದ್ದು, ಮೌಲ್ಯಮಾಪನಕ್ಕೆ 1 ತಿಂಗಳು ಬೇಕಾಗುತ್ತದೆ. ನಂತರ ಪೂರಕ ಪರೀಕ್ಷೆ ನಡೆಸಲಾಗುವುದು. ಶಾಲೆಗಳ ಪ್ರಾರಂಭದ ಬಗ್ಗೆ ಚರ್ಚೆ ನಡೆಯುತ್ತಿದೆ. ಪರೀಕ್ಷೆ ನಡೆಯುವ ಶಾಲೆಗಳ ಕೊಠಡಿಗಳನ್ನು ಸ್ಯಾನಿಡೈಸ್ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೆ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಈ ಎರಡೂ ತರಗತಿಗಳ ಪರೀಕ್ಷೆಗಳನ್ನು ಮುಂದೂಡಬೇಕೆಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತುರ್ತು ಸೇವೆಯಲ್ಲಿರುವ ನಾನು ಕ್ವಾರಂಟೈನ್ ಆಗೋದಿಲ್ಲ; ಬೆಂಗಳೂರಿಗೆ ಬಂದ ಡಿ.ವಿ. ಸದಾನಂದ ಗೌಡ ಸ್ಪಷ್ಟನೆ
ವೇಗವಾಗಿ ಕೊರೋನಾ ಹರಡುತ್ತಿರುವುದರಿಂದ ಜೀವ ಹಾನಿಯಾಗುವ ಸಾಧ್ಯತೆಯಿದೆ. ಇಂತಹ ಭಯಾನಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಈ ಹಿಂದೆ ನಾನು ನಿಮ್ಮ ಜೊತೆ ಮಾತನಾಡಿದಾಗ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಹೀಗಾಗಿ, ಸಕಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಬಹುದು ಎಂಬ ಅಭಿಪ್ರಾಯ ತಿಳಿಸಿದ್ದೆ. ಆದರೆ, ಈಗ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪರೀಕ್ಷೆ ನಡೆಸೋದು ಸೂಕ್ತವಲ್ಲ. ಹೀಗಾಗಿ, ಪರೀಕ್ಷೆ ತೀರ್ಮಾನವನ್ನು ಕೈ ಬಿಡುವಂತೆ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ