ಬಾಲ ಮಂದಿರದಲ್ಲಿ ಬಾಲಕಿಯರಿಗಿಲ್ಲ ರಕ್ಷಣೆ - ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ - ಇಬ್ಬರು ಸಿಬ್ಬಂದಿ ಅಮಾನತು

ಸೆಕ್ಯೂರಿಟಿ ಗಾರ್ಡ್ ಸಿದ್ದಯ್ಯ ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಮಂದಿರದಲ್ಲಿದ್ದ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ನವೆಂಬರ್ 11 ರಂದು ಅತ್ಯಾಚಾರವೆಸಗಿದ್ದಾನೆ. 

news18-kannada
Updated:January 31, 2020, 7:09 PM IST
ಬಾಲ ಮಂದಿರದಲ್ಲಿ ಬಾಲಕಿಯರಿಗಿಲ್ಲ ರಕ್ಷಣೆ  - ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ - ಇಬ್ಬರು ಸಿಬ್ಬಂದಿ ಅಮಾನತು
ಆರೋಪಿ ಸಿದ್ದಯ್ಯ
  • Share this:
ರಾಯಚೂರು(ಜ.31) : ಆ ಬಾಲಕಿಗೆ ತಂದೆ ತಾಯಿ ಇಲ್ಲ, ಬಾಲ ಮಂದಿರದಲ್ಲಿದ್ದು ಶಿಕ್ಷಣ ಹೊಂದುವ ಕನಸು ಕಂಡಿದ್ದಾಳೆ. ಆದರೆ, ರಕ್ಷಣೆ ಮಾಡಬೇಕಾದ ಬಾಲ ಮಂದಿರದ ಸಿಬ್ಬಂದಿ ಆಕೆಯ ಬಾಳನ್ನು ಹಾಳು ಮಾಡಿದ್ದಾನೆ. ಸರಕಾರಿ ಬಾಲಮಂದಿರದಲ್ಲಿ ಈ ಘಟನೆ ನಡೆದಿರುವ ಹಿನ್ನೆಲೆ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಇಬ್ಬರನ್ನು ಅಮಾನತ್ತು ಮಾಡಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ.

ಬಾಲಮಂದಿರದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಸಿದ್ದಯ್ಯ , ಇಲ್ಲಿರುವ ಬಾಲಕಿಯರಿಗೆ ರಕ್ಷಣೆ ನೀಡಬೇಕಾಗಿರುವ ಈತ ಬಾಲಮಂದಿರದಲ್ಲಿರುವ 16 ವರ್ಷದ ಎಸ್​​ಎಸ್​​ಎಲ್​​ಸಿ ಓದುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ನವೆಂಬರ್ 11 ರಂದು ಅತ್ಯಾಚಾರವೆಸಗಿದ್ದಾನೆ. ಈ ಪ್ರಕರಣದ ನಂತರ ಬಾಲಕಿಯ ಬಳಿ ಇರುವ ಮೊಬೈಲ್ ಮುಖಾಂತರ ಆಕೆಯ ಮೇಲೆ ಅತ್ಯಾಚಾರವಾಗಿರುವದು ಕಂಡು ಬಂದಿದೆ.

ಈ ಪ್ರಕರಣದ ನಂತರ ಬಾಲಕಿಯ ಅಣ್ಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡುತ್ತಾನೆ, ಈ ದೂರಿನ ನಂತರವೂ ಬಾಲಮಂದಿರ ಅಧಿಕಾರಿಗಳಾದ ಸುಪರಿಟೆಂಡೆಂಟ್ ಸಯ್ಯದ್ ಪಾಷಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ ವಿಚಾರಣೆ ಹಾಗೂ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ. ಈ ಮಧ್ಯೆ ಜನವರಿ 30 ರಂದು ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕದ ಅಧಿಕಾರಿ ರಾಯಚೂರಿನ‌ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. 

ಈ ದೂರಿನ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ಸೇರಿದಂತೆ ಬಾಲ ಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಈ ಪ್ರಕರಣದ ಬಗ್ಗೆ ವಿಳಂಬ ನೀತಿ ಅನುಸರಿಸಿದ ಸುಪರಿಟಿಂಡೆಂಟ್ ಸಯ್ಯದ ಪಾಷಾ‌ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದರನ್ನು ಅಮಾನತು ಮಾಡಲಾಗಿದ್ದು, ಬಾಲಕಿಯರ ಬಾಲಮಂದಿರದಲ್ಲಿಯ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಹಾಯಕ ಆಯುಕ್ತರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

ಈ ಘಟನೆಯ ನಂತರ ಜನವರಿ 9 ರಿಂದಲೇ ಆರೋಪಿ ಸಿದ್ದಯ್ಯ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ತಿಳಿಸಿದ್ದಾರೆ. ಕಳೆದ ವಾರ ಸಿಂಧನೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಪ್ರಕರಣ ಹಸಿಯಾಗಿರುವಾಗಲೇ ಮಕ್ಕಳ ರಕ್ಷಣೆ ಮಾಡಬೇಕಾದ ಸಿಬ್ಬಂದಿ ದುರುಳಾಗಿರುವುದು ವರದಿಯಾಗಿದೆ.
First published: January 31, 2020, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading