Chikmagalur: ದೇವಸ್ಥಾನದಲ್ಲೇ ಮಹಿಳೆ ಮೇಲೆ ದೌರ್ಜನ್ಯ: ಪ್ರಶ್ನಿಸಿದ ಗಂಡನ ಕೈ ಮುರಿದ ಕೀಚಕರು

ದೇವಸ್ಥಾನಕ್ಕೆ ಬಂದ ಆರು ಕೀಚಕರು ದೇವಸ್ಥಾನದ ಆವರಣದಲ್ಲೇ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಲು ಮುಂದಾಗಿದ್ದಾರೆ.

ಅಜ್ಜಂಪುರ ಪೊಲೀಸ್​ ಠಾಣೆ

ಅಜ್ಜಂಪುರ ಪೊಲೀಸ್​ ಠಾಣೆ

  • Share this:
ಚಿಕ್ಕಮಗಳೂರು (ಮಾ. 17): ದೇವಸ್ಥಾನದಲ್ಲಿ ಕೈ ಮುಗಿಯುತ್ತಿದ್ದ ಮಹಿಳೆ ಮೇಲೆ ಪುಂಡರು ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಗ್ರಾಮದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ, ಈ ಕೃತ್ಯ ಪ್ರಶ್ನಿಸಲು ಮುಂದಾದ ಮಹಿಳೆಯ ಗಂಡಗ ಕೈ ಬೆರಳನ್ನು ಮುರಿದಿದ್ದಾರೆ.  ಕೈ ಬೆರಳನ್ನ ಮುರಿದುಕೊಂಡು ಅಜ್ಜಂಪುರ ಠಾಣೆ ಮುಂದೆ ನ್ಯಾಯಕ್ಕಾಗಿ ಪರಿತಪ್ಪಿಸುತ್ತಿರುವ ಈ ದಂಪತಿ ಹೆಸರು ಮಂಜನಾಯ್ಕ, ಶೀಲಾಬಾಯಿ. ನಿನ್ನೆ ಈ ದಂಪತಿ ಮಗು ಜೊತೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ದೇವಾಲಯಕ್ಕೆ ತೆರಳಿದ್ದರು.  ದೇವಿ ಜಾತ್ರೆ ನಡೆದು ತಿಂಗಳಾದ ಹಿನ್ನೆಲೆ ತಿಂಗಳ ಪೂಜೆಗೆ ಹೋಗಿದ್ದರು. ಗಂಡ ದೇವರಿಗೆ ಎಡೆ ಕೊಡಲು ಹೋಗಿದ್ದರು. ಈ ವೇಳೆ  ಹೆಂಡತಿ ಪೂಜೆಗೆ ರೆಡಿ ಮಾಡುತ್ತಿದ್ದರು. ಆಗ ದೇವಸ್ಥಾನಕ್ಕೆ ಬಂದ ಆರು ಕೀಚಕರು ದೇವಸ್ಥಾನದ ಆವರಣದಲ್ಲೇ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಲು ಮುಂದಾಗಿದ್ದಾರೆ. ದೇವಸ್ಥಾನದ ಆವರಣದಲ್ಲೇ  ಆರು ಮದ್ಯವ್ಯಸನಿಗಳು ಪೂಜೆ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎಲ್ಲೆಂದರಲ್ಲಿ ಕೈ ಹಾಕಿ ಲೈಂಗಿಕ ಹಿಂಸೆ ನೀಡಿದ್ದಾರೆ.

ಇದನ್ನು ಪ್ರಶ್ನೆ ಮಾಡಿದ ಗಂಡನಿಗೆ ಮದ್ಯ ಕುಡಿದು ಅಮಲಿನಲ್ಲಿ ತೇಲುತ್ತಿದ್ದ ಕುಡುಕರು ಕೈ ಬೆರಳನ್ನ ಮುರಿದು, ನೆಲಕ್ಕಾಕಿ ತುಳಿದಿದ್ದಾರೆ. ಅಮ್ಮನ ಕಣ್ಣಲ್ಲಿ ನೀರು ಕಂಡು ಮಗು ಅಮ್ಮ ಎಂದು ಓಡಿ ಬಂದಾಗ ಮಗುವನ್ನ ಮೂಲೆಗೆ ತಳ್ಳಿದ್ದಾರೆ. ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾರೆ. ಆರು ಜನರ ಮದ್ಯದ ಅಮಲನ್ನ ಎದುರಿಸಲಾಗದ ದಂಪತಿ ನಿರ್ಗತಿಕರಾಗಿದ್ದರು. ಅಲ್ಲೇ ಇದ್ದ ಇತರೇ ಭಕ್ತರು ಮೂಕ ಪ್ರೇಕ್ಷಕರಾಗಿದ್ದರು.

ಒಂದು ತಿಂಗಳ ಹಿಂದೆಯಷ್ಟೇ ಅದ್ದೂರಿ ಜಾತ್ರೆ, ರಥೋತ್ಸವ ನಡೆದ ಸಂದರ್ಭದಲ್ಲಿ ಸಾವಿರಾರು ಜನರು ದೇವಿಯ ಸನ್ನಿಧಿಗೆ ಆಗಮಿಸಿ ಉಘೇ ಉಘೇ ಎಂದಿದ್ರು, ಆ ಸಂದರ್ಭದಲ್ಲಿ ಹಾಗೆ ಬಂದ ಯಾರೊಬ್ಬರಾಗಲಿ ಅಸಭ್ಯವಾಗಿ ವರ್ತಿಸಿರಲಿಲ್ಲ. ಆದರೆ ನಿನ್ನೆ ನಡೆದ ತಿಂಗಳ ಪೂಜೆಯಲ್ಲಿ ಆರು ಜನ ಮತಿಗೇಡಿಗಳು ದೇವರ ಸನ್ನಿಧಿ ಎಂಬುದನ್ನು ಮರೆದು  ರಾಕ್ಷಸ ಮನೋಭಾವನೆ ತೋರಿದ್ದಾರೆ. ಈ ಪ್ರಕರಣದಲ್ಲಿ ಐದು ಆರೋಪಿಗಳನ್ನ ಅಜ್ಜಂಪುರ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನೀಚ ಬುದ್ದಿಯಿಂದ ಇಷ್ಟೆಲ್ಲಾ ಅವಾಂತರ ಮಾಡಿದ ದುರುಳರು ಪೊಲೀಸರಿಗೆ ಸಿಕ್ಕಿಬೀಳುತ್ತಲೇ ರಾಜಿಯಾಗುವ ನಾಟಕವಾಡಿದ್ದಾರೆ. ಕೊನೆಗೆ ದುರುಳರ ಹಣದ ಆಮಿಷಕ್ಕೆ ಬಲಿಯಾಗದ ಕುಟುಂಬಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ಒಟ್ಟಾರೆ ಕೀಚಕರ ಕ್ರೌರ್ಯದಿಂದ ಕುಟುಂಬ ನರಕಯಾತನೆ ಪಡುತ್ತಿದ್ದು, ಒಂದೆಡೆ ತನ್ನ ಮೇಲೆ ನಡೆದ ಕೀಚಕರ ಕೃತ್ಯಕ್ಕೆ ಬೆಚ್ಚಿಬಿದ್ದಿರುವ ಮಹಿಳೆ ಕಣ್ಣೀರು ಹಾಕುತ್ತಿದ್ರೆ, ಇನ್ನೊಂದೆಡೆ  ಪೆಟ್ಟು ತಿಂದು ಪತಿರಾಯ ಆಸ್ಪತ್ರೆ ಪಾಲಾಗಿದ್ದಾನೆ. ಇಷ್ಟಾದ್ರೂ ಯಾವುದೇ ರಾಜಿಗೆ ಬಗ್ಗದ ಕುಟುಂಬ, ಈ ಪರಿಸ್ಥಿತಿ ಬೇರೆ ಯಾವ ಹೆಣ್ಣಿಗೆ ಬರಬಾರದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
Published by:Seema R
First published: