ಬೆಂಗಳೂರು (ಜೂನ್ 22); ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ಇಡೀ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಿಗೆ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಪ್ರಕರಣವನ್ನು ಎಸ್ಐಟಿ (SIT) ತನಿಖೆಗೂ ವಹಿಸಲಾಗಿತ್ತು. ಆದರೆ, ಸೆಕ್ಷನ್ 377 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ, ಆ ಸಿಡಿಯಲ್ಲಿರುವುದು ತಾನೇ ಎಂದು ಸ್ವತಃ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದರೂ ಸಹ ಎಸ್ಐಟಿ ಅಧಿಕಾರಗಳು ಈವರೆಗೆ ಅವರನ್ನು ಬಂಧಿಸಿಲ್ಲ. ಎಸ್ಐಟಿ ಪೊಲೀಸರ ಇಂತಹ ನಡೆಯಿಂದ ಈಗಾಗಲೇ ಪೊಲೀಸರು ಈ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಸಂಶಯಗಳು ಮೂಡುತ್ತಿದೆ. ಈ ನಡುವೆ ಮಾಜಿ ಸಚಿವ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ನಡೆಯೂ ಸಹ ಈ ಎಲ್ಲಾ ಸಂಶಯಗಳಿಗೆ ಇಂಬು ನೀಡುವಂತಾಗಿದೆ.
ಮತ್ತೆ ಸಚಿವ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ಮುಂಬೈಗೆ ತೆರಳಿದ್ದ ರಮೇಶ್ ಜಾರಕಿಹೊಳಿ ಅಲ್ಲಿನ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಿಡಿ ನ ಕೇಸ್ ಮುಗಿಸಿ ಮತ್ತೆ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಮನವಿಗೆ ಫಡ್ನವಿಸ್ ನಿರೀಕ್ಷಿತ ಉತ್ತರ ನೀಡಿಲ್ಲ. ಬದಲಾಗಿ "ನಾನು ಕರ್ನಾಟಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕಮಾಂಡ್ ಗೆ ಸಂದೇಶವನ್ನು ಮಾತ್ರ ತಲುಪಿಸಲು ಪ್ರಯತ್ನಿಸುತ್ತೇನೆ. ಉಳಿದದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ" ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ.
ದೇವೇಂದ್ರ ಫಡ್ನವಿಸ್ ಅವರ ಈ ಉತ್ತರ ಸಾಮಾನ್ಯವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಸಾಕಷ್ಟು ನಿರಾಸೆಯನ್ನು ಉಂಟು ಮಾಡಿರುವುದು ಸುಳ್ಳಲ್ಲ. ಈ ನಡುವೆ ಖ್ಯಾತ ವಕೀಲೆ ಮಾನವ ಹಕ್ಕು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಸಿಡಿ ಕೇಸ್ನಲ್ಲಿ ಸಂತ್ರಸ್ತ ಯುವತಿ ಪರ ವಕಾಲತ್ತು ವಹಿಸಿರುವುದು ರಮೇಶ್ ಜಾರಕಿಹೊಳಿ ಅವರಿಗೆ ಭಾರೀ ಹಿನ್ನೆಡೆಯಾಗಲಿದೆ ಎನ್ನಲಾಗುತ್ತಿದೆ.
ಸೆಕ್ಸ್ ಸಿಡಿ ಕೇಸ್ನಲ್ಲಿ ಜಾರಕಿಹೊಳಿ ವಿರುದ್ಧ ಇಂದಿರಾ ಜೈಸಿಂಗ್ ಹಾಜರ್!:
ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಅವರು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಪರ ವಕಾಲತ್ತು ವಹಿಸುತ್ತಿರುವುದು ಪೊಲೀಸ್ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: Mission 2024| ಮೋದಿ ವಿರುದ್ಧ ತೃತೀಯ ರಂಗದೊಂದಿಗೆ ಅಖಾಡಕ್ಕಿಳಿದ ಶರದ್ ಪವಾರ್; ಇಲ್ಲಿದೆ ತೃತೀಯ ರಂಗದ ಕಂಪ್ಲೀಟ್ ಚಿತ್ರಣ!
"ವಿಶೇಷ ತನಿಖಾ ತಂಡ(SIT) ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಸಿಬಿಐ ತನಿಖೆ ನಡೆಸಬೇಕು ಎಂದು ಸಂತ್ರಸ್ತ ಯುವತಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠದ ಮುಂದೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು" ಎಂದು ಅರ್ಜಿದಾರರ ಪರ ವಕೀಲರಾದ ಇಂದಿರಾ ಜೈಸಿಂಗ್ ಈಗಾಗಲೇ ನ್ಯಾಯಾಲಯದ ಎದುರು ಮನವಿ ಸಲ್ಲಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚನಲ ಮೂಡಿಸಿ, ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾಗಿದ್ದ ಸಿಡಿ ಪ್ರಕರಣ ಇಂದಿರಾ ಜೈಸಿಂಗ್ ಆಗಮನದಿಂದ ಮತ್ತೆ ಹೊಸ ಆರಂಭ ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: IISC ಮೇಲೆ 2005 ರಲ್ಲಿ ಉಗ್ರರು ದಾಳಿ ಮಾಡಿದ್ದ ಪ್ರಕರಣ; ಸಾಕ್ಷಾಧಾರ ಕೊರತೆಯಿಂದ ಶಂಕಿತ ಉಗ್ರ ಖುಲಾಸೆ
ಲಿಂಗ ಸಮಾನತೆ ಹಾಗೂ ಮಾನವ ಹಕ್ಕುಗಳ ಹೋರಾಟ ವಿಚಾರವಾಗಿ ಇಂದಿರಾ ಜೈಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2005 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2018 ರಲ್ಲಿ ಫಾರ್ಚ್ಯೂನ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇಂದಿರಾ ಕೂಡ ಒಬ್ಬರು.
ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಇಂದಿರಾ ಜೈಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅಡಿಷನಲ್ ಸಾಲಿಸಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ವಕೀಲರು ಎಂಬ ಕೀರ್ತಿ ಕೂಡ ಇವರಿಗೆ ಇದೆ. ಹೀಗಾಗಿ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಇಂದಿರಾ ಜೈಸಿಂಗ್ ಎಂಟ್ರಿ ಮಾಜಿ ಸಚಿವರ ರಾಜಕೀಯ ಬದುಕಿಗೆ ಪೂರ್ಣ ವಿರಾಮ ಇಡಲಿದೆ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ