ಬೇರೆ ಪಕ್ಷದ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ; ಡಿಸಿಎಂ ಗೋವಿಂದ ಕಾರಜೋಳ ಹೊಸ ಬಾಂಬ್

ಬೇರೆ ಪಕ್ಷದ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಯಪುರದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಾಕಷ್ಟು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

  • Share this:
ವಿಜಯಪುರ (ಫೆ.29): ಕಾಂಗ್ರೆಸ್​-ಜೆಡಿಎಸ್​ನ 17 ಶಾಸಕರು ಸಾಮೂಹಿಕ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಈ ಪೈಕಿ 16 ಶಾಸಕರು ಬಿಜೆಪಿ ಸೇರಿದ್ದು, ಕೆಲವರಿಗೆ ಸಚಿವ ಸ್ಥಾನವೂ ಸಿಕ್ಕಿದೆ. ಈ ಬೆಳವಣಿಗೆ ನಂತರ ಕಾಂಗ್ರೆಸ್-ಜೆಡಿಎಸ್​ನ ​​​ಮತ್ತಷ್ಟು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಚಾಲ್ತಿಯಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೇರೆ ಪಕ್ಷದಿಂದ ಬಿಜೆಪಿ ಸೇರಲು ಶಾಸಕರು ತುದಿಗಾಲಿನ ನಿಂತಿದ್ದಾರೆ ಎಂದಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, “ಬೇರೆ ಪಕ್ಷದ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಎಷ್ಟು ಜನ ಶಾಸಕರು ಎಂಬುದನ್ನು ಹೇಳಲು ಆಗುವುದಿಲ್ಲ,” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

32 ಬಿಜೆಪಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೋವಿಂದ ಕಾರಜೋಳ, “ಇಬ್ರಾಹಿಂ ಜೀವನದಲ್ಲಿ ಎಂದಾದರೂ ಸತ್ಯ ಹೇಳಿದ್ದಾರಾ? 32 ಜನ ಬಿಜೆಪಿ ಶಾಸಕರ ಪೈಕಿ ಅವರು ಒಬ್ಬರ ಹೆಸರು ಹೇಳಲಿ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು. ಇಬ್ರಾಹಿಂ ಕನಸು ಕಾಣುತ್ತಿದ್ದಾರೆ. ಅವರ ಕನಸು ಎಂದಿಗೂ ನನಸಾಗದು. ಬಿಜೆಪಿಯ ಯಾವ ಶಾಸಕರು ಪಕ್ಷ ಬಿಡುವುದಿಲ್ಲ,” ಎಂದರು.

ಇದನ್ನೂ ಓದಿ: ದೆಹಲಿ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯ, ಹೀಗಾಗಿ ಭದ್ರತಾ ವೈಫಲ್ಯ ಎನ್ನಲಾಗದು; ಗೋವಿಂದ ಕಾರಜೋಳ

ಸಿದ್ದರಾಮಯ್ಯ ಕರೆದರೆ ಬಿಜೆಪಿಗೆ ಹೋದವರು ವಾಪಾಸು ಬರುತ್ತಾರೆ ಎನ್ನುವ ಕಾಂಗ್ರೆಸ್​ ನಾಯಕಿ ಮಾರ್ಗರೇಟ್​ ಆಳ್ವಾ ಹೇಳಿಕೆಗೂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. “ಇದು ಮಾರ್ಗರೇಟ್ ಆಳ್ವಾರ ಭ್ರಮೆ. ಆಳ್ವಾ ಮಾತು ನಿಜವಿರಲು ಸಾಧ್ಯವೇ ಇಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆಯವರನ್ನು ಸಿಎಂ ಮಾಡಲು ಬಿಜೆಪಿಯ 18 ಶಾಸಕರು ಸಹಾಯ ಮಾಡಿದ್ದರು. ಮುಂದೆಯೂ ವಾಜಪೇಯಿ ಸಂಪುಟದಲ್ಲಿ ಹೆಗಡೆಯವರು ಕೇಂದ್ರದ ಸಚಿವರಾಗಿದ್ದರು. ನಾವೆಲ್ಲ ರಾಮಕೃಷ್ಣ ಹೆಗಡೆ ಹಿಂಬಾಲಕರು. ಹೀಗಾಗಿ ನಾವು ಅಂದೇ ಬಿಜೆಪಿ ಸೇರಿ ಆಗಿದೆ. ಹೀಗಾಗಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಸೋನಿಯಾ ಗಾಂಧಿ ಬಗ್ಗೆ ಟೀಕೆ:

ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜೀನಾಮೆ ನೀಡಬೇಕು ಎಂದು ಸೋನಿಯಾ ಗಾಂಧಿ ಒತ್ತಾಯಿಸಿದ ವಿಚಾರದಲ್ಲಿ ಮಾತನಾಡಿರುವ ಅವರು, “ಅಮಿತ್​ ಶಾ ಬಳಿ ರಾಜೀನಾಮೆ ಕೇಳುವ ನೈತಿಕ ಹಕ್ಕು ಸೋನಿಯಾ ಗಾಂಧಿಗೆ ಇಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸೋನಿಯಾ ಹಾಗೂ ಅವರ ತಂಡ ಏನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ಅನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ತಿರಸ್ಕಾರ ಮಾಡಿದ್ದಾರೆ,” ಎಂದು ಟೀಕಿಸಿದರು.
First published: