news18-kannada Updated:February 13, 2021, 3:15 PM IST
ಬೆಳೆಗೆ ಬೆಂಕಿ ಹಚ್ಚಿರುವ ದುಸ್ಕರ್ಮಿಗಳು
ವಿಜಯಪುರ(ಫೆ. 13): ಇಂದು ಬೆಳಿಗ್ಗೆ ರಾಶಿ ಮಾಡಿದರಾಯಿತು ಎಂದುಕೊಂಡಿದ್ದ ಬಡ ಮಹಿಳೆ ಕಳೆದ ಎರಡು ದಿನಗಳಿಂದ ತನ್ನ ಹೊಲದಲ್ಲಿ ಅಕ್ಕರೆಯಿಂದ ಬೆಳೆದಿದ್ದ ಬೆಳೆಯನ್ನು ತಂದು ಸಂಗ್ರಹಿಸಿ ಇಟ್ಟಿದ್ದಳು. ಸೂರ್ಯೋದಯವಾಗಿದ್ದೆ ತಡ, ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮಹಿಳೆಗೆ ತಲುಪಿದ ಶಾಕಿಂಗ್ ನ್ಯೂಸ್ ಆಕೆ ಮತ್ತು ಆಕೆಯ ಮಕ್ಕಳ ವರ್ಷದ ಬದುಕನ್ನೇ ಕಿತ್ತುಕೊಂಡಂತಾಗಿದೆ. ಅಂದಹಾಗೆ, ಈ ಘಟನೆಗೆ ಸಾಕ್ಷಿಯಾಗಿದ್ದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ. ಇಲ್ಲಿನ ರೈತ ಮಹಿಳೆ ಸಾಂಯವ್ವ ಈಶ್ವರಪ್ಪ ಹುನ್ನೂರ ತನ್ನ ಆರು ಎಕರೆಯಲ್ಲಿ ಕಡಲೆ ಬೆಳೆಯನ್ನು ಬೆಳೆದಿದ್ದಳು. ಸೊಂಪಾಗಿ ಬೆಳೆದಿದ್ದ ಬೆಳೆಯನ್ನು ಒಂದು ಕಾಳೂ ಹಾಳಾಗದಂತೆ ನಾಜೂಕಾಕಿ ಕತ್ತರಿಸಿ ರಾಶಿ ಮಾಡಲು ಅದೇ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದಳು. ಆದರೆ, ಆಗಿದ್ದೆ ಬೇರೆ.
ಸಾರವಾಡ ಗ್ರಾಮದ ಈಶ್ವರಲಿಂಗ ದೇವಸ್ಥಾನದ ಹಿಂಭಾಗದ ನಡುವಿನ ರಸ್ತೆಯಲ್ಲಿ ಸುಮಾರು 1 ಕಿ. ಮೀ. ದೂರದಲ್ಲಿ ಈ ಮಹಿಳೆಯ ಹೊಲವಿದೆ. ಮೊದಲೇ ಮುಂಗಾರಿನಲ್ಲಿ ಏನನ್ನೂ ಬೆಳೆಯದ ರೈತ ಮಹಿಳೆಯ ಹಿಂಗಾರಿನಲ್ಲಾದರೂ ತನ್ನ ಕುಟುಂಬಕ್ಕೆ ವರ್ಷದ ತುತ್ತಿನ ಚೀಲ ತುಂಬಲಿ ಎಂದು ಕಡಲೆಯನ್ನು ಬಿತ್ತನೆ ಮಾಡಿದ್ದಳು. ಇಂದು ರಾಶಿ ಮಾಡಬೇಕಿದ್ದ ಕಡಲೆ ಗೂಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ ಸಂಪೂರ್ಣ ಕಡಲೆ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಇಡೀ ಕಡಲೇ ಸುಟ್ಟು ಹೋಗಿದೆ. ರೈತರು ಹೋದಾಗ ಕಾಣಿಸುತ್ತಿದ್ದ ಬೆಂಕಿಯ ಜ್ವಾಲೆಗಳು ದುಷ್ಕರ್ಮಿಗಳ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದ್ದವು.
ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ; ಇನ್ಮುಂದೆ ಟಿಕೆಟ್ ಜೊತೆ ಐಷಾರಾಮಿ ಹೋಟೆಲ್ ಕೂಡ ಬುಕ್ ಮಾಡಬಹುದು...!
ಆರು ಎಕರೆ ಜಮೀನು ಹೊಂದಿರುವ ಸಾಂಯವ್ವ ಈಶ್ವರಪ್ಪ ಹುನ್ನೂರ ಸುಮಾರು ರೂ. 60 ಸಾವಿರ ಹಣವನ್ನು ಖರ್ಚು ಮಾಡಿ ಕಡಲೆ ಬಿತ್ತನೆಗಾಗಿ ನಿರ್ವಹಣೆ ಮಾಡಿದ್ದರು. ಆದರೆ, ಈಗ ಆ ಎಲ್ಲ ಕಡಲೇ ಬೆಂಕಿಯಿಂದಾಗಿ ಸುಟ್ಟು ಹೋಗಿದೆ. ಸುಮಾರು 30 ರಿಂದ 35 ಕ್ವಿಂಟಾಲ್ ಕಡಲೆ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ರೈತ ಮಹಿಳೆ ಸುಮಾರು ರೂ. 1.50 ರಿಂದ ರೂ. 2 ಲಕ್ಷ ರೂಪಾಯಿವರೆಗೆ ನಷ್ಟ ಅನುಭವಿಸಿದ್ದಾಳೆ. ಉತ್ತಮ ಗುಣಮಟ್ಟದ ಕಡಲೆ ಬೆಳೆದಿದ್ದ ಸಾಂಯಕ್ಕ ಈಶ್ವರಪ್ಪ ಹುನ್ನೂರ ಅದನ್ನು ಮಾರಾಟ ಮಾಡಿ ಮುಂದೊಂದು ವರ್ಷಕ್ಕೆ ಕುಟುಂಬ ನಿರ್ವಹಣೆಗೆ ಲೆಕ್ಕ ಹಾಕಿದ್ದಳು. ಆದರೆ, ದುಷ್ಕರ್ಮಿಗಳು ತಮ್ಮ ಹೀನಾಯ ಕೃತ್ಯದ ಮೂಲಕ ರಾಶಿ ಮಾಡಲು ಸಂಗ್ರಹಿಸಿ ಇಡಲಾಗಿದ್ದ ಕಡಲೆಗೆ ಬೆಂಕಿ ಹಚ್ಚಿ ಸುಟ್ಟು ಹಾಕುವ ಮೂಲಕ ಬಡ ಮಹಿಳೆಯ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ.
ಈ ಘಟನೆಯ ಮಾಹಿತಿ ತಿಳಿದ ಸಾರವಾಡ ಗ್ರಾಮದ ಯುವಕರು ಮತ್ತು ಹಿರಿಯರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬೆಳೆಯುವ ಈ ಕಡಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರೆ ಯಾರದಾದರೂ ಹೊಟ್ಟೆಯನ್ನಾದರೂ ತುಂಬಿಸುತ್ತಿತ್ತು. ಆದರೆ, ತಮ್ಮ ದುಷ್ಕೃತ್ಯದ ಮೂಲಕ ದುರುಳರು ಸುಟ್ಟು ಹಾಕಿರುವುದು ಮಾತ್ರ ಅಲ್ಲಿಗೆ ಬಂದಿದ್ದ ಹಲವರ ಕಣ್ಣಂಚಿನಲ್ಲಿ ನೀರು ತರಿಸಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಳೆ ಸುಟ್ಟು ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ರುದ್ರಗೌಡ ಬಿರಾದಾರ, ಬಸವರಾಜ ಚಿಕರೆಡ್ಡಿ, ರವಿ ಜಾಧವ, ವಿಜಯಕುಮಾರ ಯಾದವಾಡ ಆಗ್ರಹಿಸಿದ್ದಾರೆ.
Published by:
Latha CG
First published:
February 13, 2021, 3:13 PM IST