ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಚಿವಾಲಯ, ಆಯುಕ್ತಾಲಯ ಮತ್ತು ನಿರ್ದೇಶನಾಲಯಗಳಲ್ಲಿ ದೀರ್ಘ ಅವಧಿಯಿಂದ ಬಾಕಿ ಉಳಿದಿರುವ ಆಡಳಿತಾತ್ಮಕ, ನೌಕರರ ಸೇವಾ ವಿಷಯಗಳ ಮತ್ತು ಶಿಕ್ಷಣ ಇಲಾಖೆಯ ವಿವಿಧ ನೌಕರರ ಸಂಘಗಳ ಬೇಡಿಕೆಗಳ ಇತ್ಯರ್ಥಕ್ಕೆ ಮತ್ತು ಇಂತಹ ಸಮಸ್ಯೆಗಳ ಕಡತಗಳ ಶೀಘ್ರ ವಿಲೇವಾರಿ ಅಗತ್ಯ ಕ್ರಮ ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳ ನೌಕರರ ಸಂಘಗಳ ಪದಾಧಿಕಾರಿಗಳೊಂದಿಗೆ ಇಂದು ಸಭೆ ನಡೆಯಿತು. ಇಲ್ಲಿ ನಡೆದ ಚರ್ಚೆಯಲ್ಲಿ ಶೀಘ್ರವಾಗಿ ಕಡತಗಳ ವಿಲೇವಾರಿ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದರೊಂದಿಗೆ ಬೇಡಿಕೆಗಳಿಗೆ ಸಂಬಂಧಿಸಿದಂತೆ ಇತ್ಯರ್ಥ ಪಡಿಸಬಹುದಾದಂತಹ ಮತ್ತು ಆರ್ಥಿಕ ಹೊರೆಯಾಗದಂತಹ ಸಮಸ್ಯೆಗಳ ಶೀಘ್ರ ಈಡೇರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯ ವಿವಿಧ ಸ್ತರಗಳಲ್ಲಿ ಬಾಕಿ ಇರುವ ಹಲವಾರು ಸಮಸ್ಯೆಗಳನ್ನು ವಿಭಾಗಿಸಿ ಪ್ರತ್ಯೇಕವಾಗಿ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಅರ್ಹ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದ್ದಾರೆ. ಶಿಕ್ಷಕರ ವರ್ಗಾವಣೆ, ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆ, ವೃಂದ ನೇಮಕಾತಿ ನಿಯಮಗಳ ಪರಿಷ್ಕರಣೆ, ನೇರ ನೇಮಕಾತಿ, ಪದನಾಮ ಪರಿಷ್ಕರಣೆ, ಕಾಲಮಿತಿ ಬಡ್ತಿ, ವೇತನ ತಾರತಮ್ಯ, ಬಡ್ತಿ ಹೊಂದಿದ ಶಿಕ್ಷಕರು ಮತ್ತು ಉಪನ್ಯಾಸಕರ ವೇತನದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ನೌಕರರ ಸಮಸ್ಯೆಗಳ ಇತ್ಯರ್ಥಪಡಿಸಲು ಪ್ರತ್ಯೇಕವಾಗಿ ಮತ್ತು ಸಂಘಟನೆವಾರು ಪ್ರಸ್ತಾವನೆ ಮಂಡಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಹಣಕಾಸು ಹೊರೆ ಬೀಳುವ, ಆರ್ಥಿಕ ಹೊರೆಯಾಗದ, ನಿಯಮಗಳ ತಿದ್ದುಪಡಿ ಮಾಡಬೇಕಾದ, ಕಾಯ್ದೆ ತಿದ್ದುಪಡಿಯಿಂದ ಬಗೆಹರಿಯಬಹುದಾದ, ತಕ್ಷಣವೇ ಇತ್ಯರ್ಥ ಪಡಿಸಬಹುದಾದ, ಸಮಯ ಹಿಡಿಯಬಹುದಾದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಹದಿನೈದು ದಿನಗಳ ಒಳಗೆ ಅಗತ್ಯ ವಿವರಗಳೊಂದಿಗೆ ಮಂಡಿಸಲು ಸೂಚಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಶಿಕ್ಷಣ ಇಲಾಖೆಯ ನೌಕರರ ಸಂಘಗಳ ಬೇಡಿಕೆಯನ್ನು ಮಂಡಿಸಿದಾಗ ಎಲ್ಲ ಸಮಸ್ಯೆಗಳನ್ನು ಆಲಿಸಿದ ಸಚಿವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಕರ ಮತ್ತು ನೌಕರರ ಬೇಡಿಕೆಗಳ ಈಡೇರಿಸಿರುವುದರ ವಿವರಗಳನ್ನು ಒದಗಿಸಿದರು. ಕಳೆದ ಒಂದೂಕಾಲು ವರ್ಷದಲ್ಲಿ ನನೆಗುದಿಗೆ ಬಿದ್ದಿದ್ದ ವಿವಿಧ ವೃಂದದ ಪದೋನ್ನತಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಕಳೆದ ಒಂದು ವರ್ಷದಲ್ಲಿ 3008 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ, 2404 ಪ್ರೌಢಶಾಲಾ ಶಿಕ್ಷಕರಾಗಿ, 1342 ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ, 396 ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ, 40 ಮಂದಿ ಪ್ರಾಂಶುಪಾಲರಿಗೆ ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರಾಗಿ ಬಡ್ತಿ, 200ಕ್ಕೂ ಹೆಚ್ಚು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಡ್ತಿ ಸೇರಿದಂತೆ ಹಲವು ವರ್ಷಗಳಿಂದ ಬಾಕಿ ಇದ್ದ ಪದೋನ್ನತಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು. ಶಿಕ್ಷಕ ಮಿತ್ರ ಆಪ್ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ, 2500 ಟಿಜಿಟಿ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 20,000 ಶಿಕ್ಷಕರ ನೇಮಕಾತಿ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: ಭಾರತದ ಹೊಸ ಕೃಷಿ ಕಾನೂನುಗಳು ರೈತರ ಆದಾಯ ಹೆಚ್ಚಿಸಲಿವೆ, ಆದರೆ ಸಾಮಾಜಿಕ ಸುರಕ್ಷೆ ಅಗತ್ಯ; ಐಎಂಎಫ್ನ ಗೀತಾ ಗೋಪಿನಾಥ್
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರಿಗಿಂತ ಕಡಿಮೆ ವೇತನ ಪಡೆಯುವಂತಾಗಿರುವುದು, ಪ್ರೌಢಶಾಲೆಯಿಂದ ಪದವಿ ಪೂರ್ವ ಉಪನ್ಯಾಸಕರಾಗಿ ಬಡ್ತಿ ಹೊಂದಿದವರಿಗೆ ಪ್ರೌಢಶಾಲೆ ಶಿಕ್ಷಕರಿಗಿಂತ ಕಡಿಮೆ ವೇತನ ಇರುವುದು ಸೇರಿದಂತೆ ವೇತನ ತಾರತಮ್ಯ, ಬಡ್ತಿ ತಾರತಮ್ಯ ನಿವಾರಣೆ, ಪದನಾಮ ಬದಲಾವಣೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಒಂದೇ ಒಂದು ಬಡ್ತಿಯಿಲ್ಲದೇ ನಿವೃತ್ತಿಯಾಗುವುದು ಸೇರಿದಂತೆ ನೂರಾರು ಬೇಡಿಕೆಗಳ ಕುರಿತು ಚರ್ಚೆ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಬಡ್ತಿ ಶಿಕ್ಷಕರ ಸಂಘ, ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇದಿಕೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕ ವೃಂದದ ಶಿಕ್ಷಕರ ಸಂಘ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ, ಪ್ರೌಢಶಾಲಾ ಗ್ರೇಡ್-1 ಮತ್ತು ಗ್ರೇಡ್-2 ವೃತ್ತಿಶಿಕ್ಷಕರ ಸಂಘಗಳು ಸೇರಿದಂತೆ ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು.