Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18-kannada
Updated:September 19, 2019, 7:05 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1 .ಸೋಮವಾರದವರೆಗೂ ಡಿಕೆಶಿ ತಿಹಾರ್​ ಜೈಲಿನಲ್ಲಿ

ದೆಹಲಿಯ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣ ಸಂಬಂಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಇಂದು ವಿಶೇಷ ನ್ಯಾಯಾಲಯದಲ್ಲಿ ನಡೆದಿದ್ದು, ವಾದ ಪ್ರತಿವಾದದ ನಂತರ ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಕೋರ್ಟ್​ ಮುಂದೂಡಿದೆ. ವಿಶೇಷ ನ್ಯಾಯಮೂರ್ತಿ ಅಜಯ್​ ಕುಮಾರ್ ಕುಹಾರ್​ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿ.ಕೆ.ಶಿವಕುಮಾರ್ ಪರವಾಗಿ ಅಭಿಷೇಕ್​ ಮನು ಸಿಂಘ್ವಿ ಹಾಗೂ ಮುಕುಲ್​ ರೋಹ್ಟಗಿ, ದಯನ್​ ಕೃಷ್ಣನ್​ ವಾದ ಮಂಡನೆ ಮಾಡಿದರೆ, ಇಡಿ ಪರವಾಗಿ ಕೆ.ಎಂ. ನಟರಾಜ್​ ವಾದ ಮಂಡಿಸಿದರು. ಮಧ್ಯಾಹ್ನ 3.30 ವಿಚಾರಣೆ ಆರಂಭವಾದಾಗ, ಮೊದಲಿಗೆ ಇಡಿ ಪರ ವಕೀಲರಾದ ಕೆ.ಎಂ. ನಟರಾಜ್ ವಾದ ಮಂಡನೆ ಅರಂಭಿಸಿದರು. ಡಿಕೆಶಿ ಅವರ ಕೆಲವು ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಯಾಗಬೇಕಿದೆ. ಮುಖ್ಯವಾಗಿ ಹಣ ವರ್ಗಾವಣೆ ಬಗ್ಗೆ ತನಿಖೆ ಆಗಬೇಕಿದೆ. ಕೇವಲ ಐಟಿ ಕಾಯ್ದೆಯಡಿ ಬರುವುದಿಲ್ಲ. ಪರೋಕ್ಷವಾಗಿ ಪಿಎಂಎಲ್​ಎ ಅಡಿ ಬರುತ್ತದೆ ಎಂದು ಹೇಳಿದರು.

2. ವಲಸಿಗರನ್ನು ದೂರವಿಡುವ ಉದ್ದೇಶ ನಮಗಿಲ್ಲ; ಪರಮೇಶ್ವರ್

ಕಾಂಗ್ರೆಸ್​​ನಲ್ಲಿ ಪಕ್ಷದ ಅಧಿಕಾರ ಚುಕ್ಕಾಣಿಗಾಗಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರ ನಡುವೆ ತಿಕ್ಕಾಟ ಆರಂಭವಾಗಿದೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್​ ನಡುವೆ ವೈಮನಸ್ಸು ಆರಂಭವಾಗಿದೆ. ಇದೇ ಉದ್ದೇಶದಿಂದ ಕಾಂಗ್ರೆಸ್​ ಸಭೆಗಳಿಂದ ಪರಮೇಶ್ವರ್​ ಅಂತರ ಕಾಯ್ದುಗೊಳ್ಳುತ್ತಿದ್ದಾರೆ ಎಂಬ ಸುದ್ದಿಗಳಿಗೆ ಖುದ್ದು ಮಾಜಿ ಡಿಸಿಎಂ ತೆರೆ ಎಳೆದಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲವೂ ಸರಿಯಿದೆ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ವೈರತ್ವ ಆರಂಭವಾಗಿದೆ ಎನ್ನುವ ರೀತಿ ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಈ ರೀತಿಯ ಯಾವುದೇ ಬೆಳವಣಿಗೆ ಪಕ್ಷದಲ್ಲಿ ನಡೆದಿಲ್ಲ.  ಕಾಂಗ್ರೆಸ್​ಗೆ ನಷ್ಟವಾಗಲಿದೆ ಎಂಬ ಕಾರಣಕ್ಕೆ ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಬಿಂಬಿಲಾಗುತ್ತಿದೆ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ಸ್ಪಷ್ಟಪಡಿಸಿದರು.  ವಲಸಿಗ ಕಾಂಗ್ರೆಸ್ಸಿಗರನ್ನು ದೂರವಿಡಬೇಕು ಎಂದಿದ್ದರೆ ನಾವು ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕರಾಗಿ ಅಥವಾ ಮುಖ್ಯಮಂತ್ರಿಯಾಗಿ ಮಾಡುತ್ತಿರಲಿಲ್ಲ. ನಮ್ಮ ಪಕ್ಷದ ನಾಯಕ ಅವರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದ ಇದ್ದೇವೆ. ಸಾಮೂಹಿಕ ನಾಯಕತ್ವದಿಂದ ಪಕ್ಷ ಕಟ್ಟುತ್ತೇವೆ ಎಂದರು

3. ಚಿದಂಬರಂಗೆ ಇನ್ನೂ 14ದಿನ ನ್ಯಾಯಾಂಗ ಬಂಧನ

ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿ ಇನ್ನೂ 14 ದಿನ ವಿಸ್ತರಣೆಗೊಂಡಿದೆ. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಅ. 3ವರೆಗೂ ಅದೇ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ. ಚಿದಂಬರಮ್ ಅವರನ್ನು 14 ದಿನಗಳ ಕಾಲ ಜುಡಿಷಿಯಲ್ ಕಸ್ಟಡಿಗೆ ಕೊಡಬೇಕೆಂದು ಸಿಬಿಐ ಮಾಡಿಕೊಂಡ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರ ನ್ಯಾಯಪೀಠವು ಪುರಸ್ಕರಿಸಿದೆ. ಹಾಗೆಯೇ, ಚಿದಂಬರಮ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಕಾಳಜಿ ವಹಿಸಿ ಆಗಾಗ್ಗ ತಪಾಸಣೆ ನಡೆಸಬೇಕೆಂದು ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ.

 4. ವಾಯುಸೇನಾ ಮುಖ್ಯಸ್ಥರಾಗಿ ಭೌದಾರಿಯಾ ನೇಮಕವಾಯುಸೇನೆಯ ನೂತನ ಮುಖ್ಯಸ್ಥರಾಗಿ ಆರ್​ಕೆಎಸ್​ ಭೌದಾರಿಯಾರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಭೌದರಿಯಾ ವಾಯುದಳ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏರ್​ ಚೀಫ್​ ಮಾರ್ಷಲ್​ ಬಿಎಸ್​ ಧನೋವಾ ಅವರ ಅಧಿಕಾರಾವಧಿ ಇದೇ ಸೆಪ್ಟೆಂಬರ್​ 30ರಂದು ಅಂತ್ಯವಾಗಲಿದ್ದು, ಈ ಹಿನ್ನೆಲೆ ಈ ನೇಮಕಾತಿ ಮಾಡಿ ಆದೇಶ ನೀಡಲಾಗಿದೆ. ಇನ್ನು ಭೌದಾರಿಯಾ ಅವರ ಅಧಿಕಾರಾವಧಿ ಕೂಡ ಇದೇ ದಿನದಂದು ಮುಕ್ತಾಯವಾಗಲಿದೆ. ಆದರೆ ಅವರನ್ನು ವಾಯುದಳ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಿರುವ ಹಿನ್ನೆಲೆ ಇವರ ಸೇವಾವಧಿ ಇನ್ನು ಮೂರು ವರ್ಷ ವಿಸ್ತರಣೆಯಾಗಲಿದ್ದು, 62 ವಯಸ್ಸಿಗೆ ಇವರು ನಿವೃತ್ತಿಯಾಗಲಿದ್ದಾರೆ.

5. ಕಾಶ್ಮೀರಿಗರನ್ನು ಪ್ರೀತಿಯಿಂದ ಕಾಣಬೇಕು; ಮೋದಿ

ಜಮ್ಮು-ಕಾಶ್ಮೀರದ ದುಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ದೂಷಿಸಿದ ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯದಲ್ಲಿ “ಹೊಸ ಸ್ವರ್ಗ” ವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದ್ದಾರೆ. ಮುಂದಿನ ತಿಂಗಳು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ನಾಸಿಕ್​ನಲ್ಲಿ​ಆಯೋಜಿಸಲಾಗಿದ್ದ 'ಮಹಾ ಜನಾದೇಶ್ ಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಜಮ್ಮು-ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಹೆಚ್ಚಿಸುವ ಸಲುವಾಗಿ ಗಡಿಯುದ್ಧಕ್ಕೂ ಸಾಕಷ್ಟು ಭಯೋತ್ಪಾದಕ ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಾವು ಕಾಶ್ಮೀರದಲ್ಲಿ ಹೊಸ ಸ್ವರ್ಗವನ್ನು ರಚಿಸಬೇಕು. ಪ್ರತಿ ಕಾಶ್ಮೀರಿಯನ್ನು ಪ್ರೀತಿಯಿಂದ ಆಲಂಗಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ

6. ರಾಜ್ಯದಲ್ಲಿ ಐಟಿ ಬಲಪಡಿಸಲು ಡಿಸಿಎಂ ಚಿಂತನೆ

ಕರ್ನಾಟಕದ ಮಾಹಿತಿ ತಂತ್ರಜ್ಞಾನ ವಲಯಕ್ಕೆ ಇನ್ನಷ್ಟು ಪುಷ್ಟಿ ನೀಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಐಟಿ-ಬಿಟಿ ಸಚಿವ ಡಾ| ಅಶ್ವಥ ನಾರಾಯಣ ಅವರು ಹೇಳಿದರು. ಇಂದು ನಡೆದ ಐಟಿ, ಬಿಟಿ ಸಂಸ್ಥಾಪಕರ ಜೊತೆಗಿನ ಸ್ನೇಹಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ಐಟಿ ಮಾರುಕಟ್ಟೆಯಲ್ಲಿ ಕರ್ನಾಟಕ ಇನ್ನಷ್ಟು ಉತ್ತುಂಗಕ್ಕೇರುವುದು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಅದಕ್ಕಾಗಿ ಕರ್ನಾಟಕ ಇನ್ನೋವೇಶನ್ ಅಥಾರಿಟಿಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಐಟಿ ಮಾರುಕಟ್ಟೆ 1 ಟ್ರಿಲಿಯನ್ ಡಾಲರ್ (ಸುಮಾರು 70 ಲಕ್ಷ ಕೋಟಿ ರೂ) ​ನಷ್ಟಿದೆ. ಕರ್ನಾಟಕದ ಐಟಿ ಪಾಲು ಶೇ. 10ರಷ್ಟಿದೆ. ಇದನ್ನು ಶೇ. 40ಕ್ಕೆ ಹೆಚ್ಚಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು. ಅಂದರೆ, 100 ಬಿಲಿಯನ್ ಡಾಲರ್​ನಷ್ಟಿರುವ ಕರ್ನಾಟಕದ ಐಟಿ ಮಾರುಕಟ್ಟೆಯ ವ್ಯಾಪ್ತಿಯನ್ನು 400 ಬಿಲಿಯನ್ ಡಾಲರ್​ಗೆ ಹೆಚ್ಚಿಸುವುದು ಸರಕಾರದ ಗುರಿಯಾಗಿದೆ

7. ಅಮಿತ್​ ಶಾ ಭೇಟಿಯಾದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್​ಸಿ) ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಶಾ ಅವರನ್ನು ಭೇಟಿಯಾದ ಬ್ಯಾನರ್ಜಿ, ಎನ್​ಆರ್​ಸಿ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ನಿಜವಾದ ಮತದಾರರು ಹೊರಗುಳಿದಿರುವ ವಿಷಯವನ್ನು ಎತ್ತಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ದೆಹಲಿ ನಾರ್ಥ್​ ಬ್ಲಾಕ್​ನಲ್ಲಿರುವ ಗೃಹ ಸಚಿವಾಲಯದ ಕಚೇರಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.

8 ನೆರೆ ಚರ್ಚೆ ಭೇಟಿಗೆ ಸಿಎಂಗೆ ಸಮಯ ನೀಡಿದ ಪ್ರಧಾನಿ; ಸಿದ್ದರಾಮಯ್ಯ ಕಿಡಿ

ಅತಿವೃಷ್ಟಿಯಿಂದ ನಲುಗಿರುವ ರಾಜ್ಯದ ಜನರಿಗೆ ಪರಿಹಾರ ಕಲ್ಪಿಸಲು ಕೇಂದ್ರದಿಂದ ಇನ್ನು ನೆರವು ಬರದೇ ಇರುವ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಸಮಯ ಕೇಳಿದ್ದ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ನಿರಾಸೆಯಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದ್ದರೂ ಈ ಬಗ್ಗೆ ರಾಜ್ಯದ ಸಿಎಂ ಜೊತೆ ಚರ್ಚಿಸಲು ಪ್ರಧಾನಿ ಮುಂದಾಗದಿರುವ ಕ್ರಮದ ಕುರಿತು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಹರಿಹಾಯ್ದಿದ್ದಾರೆ. ಅತಿವೃಷ್ಠಿಯಂತಹ ತುರ್ತು ಸ್ಥಿತಿಯಲ್ಲಿಯೂ ರಾಜ್ಯದ ಸಿಎಂ ಯಡಿಯೂರಪ್ಪ ಅವರಿಗೆ  ಸಂದರ್ಶನ ನಿರಾಕರಿಸುತ್ತಿರುವುದು  ಅವರಿಗೆ ಅವಮಾನವಾದರೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಸ್ವಾಭಿಮಾನಿ ಕನ್ನಡಿಗರು ಇದನ್ನು‌ ಸಹಿಸಲಾರರು ಎಂದಿದ್ದಾರೆ.

9. ಮಾಸ್ಕ್​ ತೊಟ್ಟು ಮೈಸೂರು ಸುತ್ತಿದ ನವರಸ ನಾಯಕ

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಓಡಾಡುವ ಹಾಗೂ ಕಾಣಿಸಿಕೊಳ್ಳುವ ಆಸೆಗಳನ್ನು ಮಾರು ವೇಷದಲ್ಲಿ ತೀರಿಸಿಕೊಳ್ಳುತ್ತಾರೆ. ಈಗ ಕನ್ನಡದ ನವರಸ ನಾಯಕ ಜಗ್ಗೇಶ್​ ಅವರು ಮುಖಕ್ಕೆ ಮಾಸ್ಕ್​ ಹಾಗೂ ತಲೆಗೆ ಟೋಪಿ ಹಾಕಿಕೊಂಡು ಮೈಸೂರಿನ ರಸ್ತೆಗಳಲ್ಲಿ ಅಡ್ಡಾಡಿದ್ದಾರೆ. ಅಷ್ಟೇ ಅಲ್ಲದೇ ಟಾಂಗಾ ಗಾಡಿಯಲ್ಲಿ ಕುಳಿತು ತಮ್ಮ ಆಸೆ ತೀರಿಸಿಕೊಂಡಿದ್ದಾರೆ. ಅದನ್ನು ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕವರಿದ್ದಾಗ ಅಮ್ಮನ ಜೊತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದ ನೆನಪನ್ನು ಹಸಿರಾಗಿಸಿಕೊಂಡಿದ್ದಾರೆ. ದೊಡ್ಡವರು ಮಕ್ಕಳಂತೆ ಬದುಕಿದರೆ ಸಂತೋಷವಾಗಿರಬಹುದು ಎಂದು ಬರೆದುಕೊಂಡಿದ್ದಾರೆ.

10.ಚೀನಾ ಓಪನ್​ ಪ್ರಿ ಕ್ವಾರ್ಟರ್​ನಲ್ಲಿ ಸೋತ ಸಿಂಧು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇತ್ತೀಚೆಗಷ್ಟೆ ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು. ಆದರೀಗ ಸಿಂಧು ಅವರು ಪ್ರತಿಷ್ಠಿತ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ. ಅಲ್ಲದೆ ಕೂಟದಿಂದಲೇ ಹೊರಬಿದ್ದು ಆಘಾತ ಅನುಭವಿಸಿದ್ದಾರೆ. ಇಂದು ನಡೆದ ಮಹಿಳಾ ಸಿಂಗಲ್ಸ್​ನ ಪ್ರಿ ಕ್ವಾರ್ಟರ್ ಹಣಾಹಣಿಯಲ್ಲಿ ಸಿಂಧು ಅವರು ಥಾಯ್ಲೆಂಡ್‌ನ ಪಾರ್ನ್‌ಪಾವೇ ಚೊಚೊವಾಂಗ್ ವಿರುದ್ಧ 12-21, 21-13, 21-19  ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದರು
First published: September 19, 2019, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading