Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:September 11, 2019, 6:04 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: September 11, 2019, 6:04 PM IST
  • Share this:
1.ಮೊದಲು ಭಾರತೀಯ, ನಂತರ ತಮಿಳಿಗ: ಇಸ್ರೋ ಅಧ್ಯಕ್ಷ ಕೆ. ಸಿವನ್ ಹಳೆಯ ಸಂದರ್ಶನ ಈಗ ವೈರಲ್

ಚಂದ್ರಯಾನ-2 ಯೋಜನೆ ಮೂಲಕ ಇಸ್ರೋ ಅಧ್ಯಕ್ಷ ಡಾ| ಕೈಲಾಸವಡಿವು ಸಿವನ್ ಅವರು ಹೆಚ್ಚೂಕಡಿಮೆ ಮನೆಮಾತಾಗಿದ್ದಾರೆ. ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣಗಳಲ್ಲಿ ಸಂಪರ್ಕಕ್ಕೆ ಸಿಗದೇ ಹೋದಾಗ ಗದ್ಗದಿತಗೊಂಡ ಅವರಿಗೆ ಮೋದಿ ಸಂತೈಸಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೆ ಇದೀಗ ಕೆ. ಸಿವನ್ ಅವರ ಒಂದೂವರೆ ವರ್ಷದ ಹಿಂದಿನ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಶೇರ್ ಆಗುತ್ತಿದೆ. 2018ರ ಜನವರಿಯಲ್ಲಿ ಸನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆ. ಸಿವನ್ ಅವರು ಮಾತನಾಡುತ್ತಾ, ತಾನು ಮೊದಲು ಭಾರತೀಯ, ನಂತರ ತಮಿಳಿಗ. ತಾನು ಇಸ್ರೋ ಸೇರಿಕೊಂಡಿದ್ದು ಭಾರತೀಯನಾಗಿಯೇ ಹೊರತು ತಮಿಳಿಗನಾಗಲ್ಲ ಎಂದು ಹೇಳಿದ್ದರು.

2.ಅಂತರ್ಜಾತಿ ಹಾಗೂ ಅಂತರ್​ ಧರ್ಮೀಯ ವಿವಾಹಗಳು ಸಮಾಜವಾದಕ್ಕೆ ಪೂರಕ; ಸುಪ್ರೀಂ ಕೋರ್ಟ್​ ಅಭಿಮತ

ಭಾರತದಲ್ಲಿ ಸಮಾಜವಾದವನ್ನು ಎತ್ತಿಹಿಡಿಯಲು ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಮದುವೆಗಳು ಸೂಕ್ತ ಮಾದರಿ. ಹೀಗಾಗಿ ಇಂತಹ ಮದುವೆಗಳಿಗೆ ನಾವು ಹಿಂಜರಿಯುವುದಿಲ್ಲ. ಇಲ್ಲಿ ಹಿಂದೂ-ಮುಸ್ಲಿಂ ಮದುವೆಗಳು ಸಹ ಸ್ವೀಕಾರಾರ್ಹ. ಜೋಡಿಗಳು ಪರಸ್ಪರ ಒಪ್ಪಿ ಮದುವೆಯಾದರೆ ಸಮಸ್ಯೆಯಾದರೂ ಏನು? ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

3.ಆಟೋಮೊಬೈಲ್​ ಉದ್ಯಮ ಕುಸಿತಕ್ಕೆ ಓಲಾ-ಊಬರ್​ ಕಾರಣ ಎಂಬ ವಿತ್ತ ಸಚಿವೆಯ ವ್ಯಾಖ್ಯಾನ ತಪ್ಪು ಎಂದ ನಿತಿನ್​ ಗಡ್ಕರಿ

ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಓಲಾ ಮತ್ತು ಊಬರ್​ ಕೊಡುಗೆಯೇ ಕಾರಣ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ನೀಡಿರುವುದು ಹೇಳಿಕೆ ತಪ್ಪು ವ್ಯಾಖ್ಯಾನ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಬಿಎಸ್​6 ಹೊಂಡಾ ಆಕ್ಟಿವಾ ಸ್ಕೂಟರ್​ ಅನಾವರಣಗೊಳಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಆಟೋಮೊಬೈಲ್ ಉದ್ಯಮ ಕುಸಿತಕ್ಕೆ ಹಲವಾರು ಕಾರಣಗಳಿವೆ ಎಂದರು.

4.ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಲ್​ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಟೋಮೊಬೈಲ್​ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಲು ಪ್ರಮುಖ ಕಾರಣ ಇಂದಿನ ಯುವಪೀಳಿಗೆಯ ಮನಸ್ಥಿತಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಟೀಕೆಯ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಜನರು ಸ್ವಂತ ವಾಹನ ಕೊಂಡುಕೊಂಡು ಇಎಂಐ ಕಟ್ಟುವ ಬದಲು ಓಲಾ, ಉಬರ್​ ಕ್ಯಾಬ್​ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್​ ಉದ್ಯಮದಲ್ಲಿ ಕುಸಿತ ಉಂಟಾಗಿದೆ. ಲಕ್ಷಾಂತರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಆಟೋಮೊಬೈಲ್ ಕ್ಷೇತ್ರದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯ ನಿರತವಾಗಿದೆ ಎಂದು ಸೀತಾರಾಮನ್ ಅವರು ತಿಳಿಸಿದ್ದರು.

5.ಕಳೆದುಹೋದ ಬೆಕ್ಕು ಹುಡುಕಿಕೊಟ್ಟರೆ, ಲಕ್ಷ ಬಹುಮಾನ; ಶ್ರೀಲಂಕಾ ಮಾಲೀಕನ ಅಳಲು

ಕೆಲವೊಮ್ಮೆ ತಮ್ಮ ಮನೆಯ ಹಿರಿಯರೋ ಇನ್ಯಾರೋ ಕಾಣೆಯಾದರೂ ಅನೇಕರು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಆದರೆ, ಶ್ರೀಲಂಕಾದ ವ್ಯಕ್ತಿಯೊಬ್ಬರು ತನ್ನ ಮುದ್ದಿನ ಬೆಕ್ಕು ಕಾಣೆಯಾಗಿದ್ದಕ್ಕೆ ಕಂಗಾಲಾಗಿದ್ದಾರೆ. ಮನೆ ತುಂಬ ಲವಲವಿಕೆಯಿಂದ ಓಡಾಡಿಕೊಂಡಿರುತ್ತಿದ್ದ ಬೆಕ್ಕು ನಾಪತ್ತೆಯಾಗಿರುವುದಕ್ಕೆ ತಲೆ ಕೆಡಿಸಿಕೊಂಡಿರುವ ಅವರು ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದಾರೆ. ಆದರೆ, ಬೆಕ್ಕು ಪತ್ತೆಯಾಗದ ಕಾರಣ ಅವರು ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದು ಹೋದ ಬೆಕ್ಕನ್ನು ಹುಡುಕಲು ಉಪಾಯವೊಂದನ್ನು ಮಾಡಿರುವ ಶ್ರೀಲಂಕಾದ ವ್ಯಕ್ತಿ ತನ್ನು ಮುದ್ದಿನ ಬೆಕ್ಕನ್ನು ಹುಡುಕಿಕೊಟ್ಟರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋದೊಂದಿಗೆ ಪೋಸ್ಟ್​ ಮಾಡಿರುವ ಆ ವ್ಯಕ್ತಿ ಇನ್ನಾದರೂ ತನ್ನ ಬೆಕ್ಕು ವಾಪಾಸ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

6.ದಸರಾ ಸಂಭ್ರಮ 2019: ಗೋಲ್ಡನ್​ ಸ್ಟಾರ್​ ಗಣೇಶ್​ರಿಂದ ಈ ಬಾರಿ ಯುವ ದಸರಾ ಉದ್ಘಾಟನೆ

ಸಾಂಸ್ಕೃತಿಕ ನಗರಿಯಲ್ಲಿ ದಿನದಿಂದ ದಿನಕ್ಕೆ ದಸರಾ ಸಂಭ್ರಮ ಹೆಚ್ಚುತ್ತಿದ್ದು, ದಸರಾ ಕಾರ್ಯಕ್ರಮಗಳ ಆಯೋಜನೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಇನ್ನು ದಸರಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಕಾರ್ಯಕ್ರಮದ ಮೊದಲ ಪೋಸ್ಟರ್​ನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಈ ಕಾರ್ಯಕ್ರಮವನ್ನು ಸ್ಯಾಂಡಲ್​ವುಡ್​ ಗೋಲ್ಡನ್​ ಸ್ಟಾರ್​ ಗಣೇಶ್​ ರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

7. ಸ್ವರ್ಗದಿಂದ ಸರ್ಕಾರಕ್ಕೆ ಪತ್ರ ಬರೆದ 12 ವರ್ಷದ ಬಾಲಕಿ

ಡೆಂಘಿಯಿಂದ ಇತ್ತೀಚೆ್ಗೆ ಮೃತಪಟ್ಟ 12 ವರ್ಷದ ಅನನ್ಯಾ ಎಂಬ ಮಗು ಸ್ವರ್ಗದಿಂದಲೇ ಸಿಎಂ, ಮೇಯರ್​ ಅವರಿಗೆ ಮನಕಲಕುವ ಪತ್ರವೊಂದನ್ನು ಬರೆದಿದ್ದಾಳೆ. ಯಾರ ತಪ್ಪಿಗಾಗಿ ನಾನು ಬಲಿಯಾದೆ, ನನ್ನ ಸಾವಿಗೆ ಕಾರಣ ಯಾರು, ಮುಂದೆ ನನ್ನಂತೆ ಇನ್ನೆಷ್ಟು ಮಕ್ಕಳು ಬಲಿಯಾಗಿ, ಎಲ್ಲರಿಂದ ದೂರವಾಗಬೇಕು ಎಂಬ ಪ್ರಶ್ನೆಗಳನ್ನು ಮಗು ಪತ್ರದಲ್ಲಿ ಎತ್ತಿದೆ. ಪತ್ರವನ್ನು ಓದಿದವರ ಕಣ್ಣುಗಳು ಒದ್ದೆಯಾಗಿ, ಮನಸ್ಸು ಭಾರವಾಗುತ್ತದೆ.

8.ಹೊಸ ಸಂಚಾರಿ​ ನಿಯಮ; ದಂಡದ ಪ್ರಮಾಣ ಇಳಿಸಲು ಸಿಎಂ ಬಿಎಸ್​ವೈ ಸೂಚನೆ

ಮೋಟರ್​ ವಾಹನ ಕಾಯ್ದೆ ತಿದ್ದುಪಡಿ 2019ರ ಪ್ರಕಾರ ಜಾರಿಗೆ ಬಂದ  ಹೊಸ ಸಂಚಾರಿ ನಿಯಮದಿಂದಾಗಿ ಈಗಾಗಲೇ ಅನೇಕರು ದುಬಾರಿ ಮೊತ್ತದ ದಂಡ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ದಂಡದ ಮೊತ್ತ ನೋಡಿಯೇ ಸ್ವಂತವಾಹನ ಚಾಲನೆ ಬಗ್ಗೆ ಯೋಚಿಸುವಂತಂಹ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷಣ್​ ಸವದಿ, ಗುಜರಾತ್,ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಟ್ರಾಫಿಕ್ ನಿಯಮಾವಳಿ ಉಲ್ಲಂಘನೆ ದಂಡದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಈ ಸಂಬಂಧ ಇಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ದಂಡದ ಪ್ರಮಾಣ ಕಡಿಮೆ ಮಾಡಿ,ಕಾನೂನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.

9.ದಬಂಗ್​ 3 ಮೋಷನ್​ ಪೋಸ್ಟರ್​ ರಿಲೀಸ್​

ಬಾಲಿವುಡ್​ನ ಬ್ಲಾಕ್​ಬಸ್ಟರ್​ 'ದಬಂಗ್'​ ಸಿನಿಮಾದ ಮೂರನೇ ಭಾಗ 'ದಬಂಗ್​ 3'ರ ಚಿತ್ರೀಕರಣ ಜೋರಾಗಿ ಸಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಸಲ್ಲು ಮತ್ತು ಅವರ ತಂಡ ಎರಡನೇ ಹಂತದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಕಿಚ್ಚ ಸಲ್ಲು ಮುಂದೆ ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್​ ಮುಂದೆ ತೊಡೆ ತಟ್ಟಿ ನಿಲ್ಲುವ ಪವರ್​ಫುಲ್​ ಖಳನ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿರುವ ವಿಷಯ ತಿಳಿದೇ ಇದೆ.

10.ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; ಕೊಹ್ಲಿಗಿಂತ 34 ಅಂಕ ಏರಿಕೆ

ಇತ್ತೀಚೆಗಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಒಂದು ಅಂಕದಿಂದ ನಂಬರ್ ಒನ್ ಪಟ್ಟಕ್ಕೇರಿದ್ದ ಸ್ಮಿತ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ. ಈ ಹಿಂದೆ ಸ್ಟೀವ್ ಸ್ಮಿತ್ 904 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 903 ಅಂಕಹೊಂದಿ 2ನೇ ಸ್ಥಾನಕ್ಕೆ ಕುಸಿದಿದ್ದರು.
First published: September 11, 2019, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading