'ಫ್ಲಾಪ್​ ಶೋ' ಆದ ಉತ್ತರ ಕರ್ನಾಟಕ ಬಂದ್: ರಾಜ್ಯ ಒಡೆಯುವವರಿಗೆ ಕನ್ನಡಿಗರ ಏಕತೆಯ ಪಾಠ


Updated:August 2, 2018, 5:31 PM IST
'ಫ್ಲಾಪ್​ ಶೋ' ಆದ ಉತ್ತರ ಕರ್ನಾಟಕ ಬಂದ್: ರಾಜ್ಯ ಒಡೆಯುವವರಿಗೆ ಕನ್ನಡಿಗರ ಏಕತೆಯ ಪಾಠ

Updated: August 2, 2018, 5:31 PM IST
ಡಿ. ಪಿ ಸತೀಶ್, ನ್ಯೂಸ್​ 18 ಕನ್ನಡ

ಬೆಂಗಳೂರು(ಆ.02): ಸಾರ್ವಜನಿಕ ಹಾಗೂ ಸ್ಥಳೀಯ ಸಂಘಟನೆಗಳ ಬೆಂಬಲವಿಲ್ಲದ ಕಾರಣ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಕರೆಯಲಾದ ಬಂದ್​ ಯಶಸ್ವಿಯಾಗಿಲ್ಲ. ಉತ್ತರ ಕರ್ನಾಟಕ ಬಂದ್ ಕಿಚ್ಚನ್ನ ಆರಿಸುವಲ್ಲಿ ಕಾಂಗ್ರೆಸ್​-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸಂಪೂರ್ಣ ಯಶಸ್ಸು ಗಳಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಚಾಣಾಕ್ಷ ನಡೆಯಿಂದಾಗಿ ಹಲವು ಸಂಘಟನೆಗಳು ಬಂದ್ ಕೈಬಿಟ್ಟು ಸಮಗ್ರ ಕರ್ನಾಟಕದ ಮಂತ್ರ ಪಠಿಸಿವೆ. ಹೀಗಾಗಿ ಬಿಜೆಪಿ ಪ್ರೇರಿತ ಎನ್ನಲಾದ ಬಂದ್ ಸಂಪೂರ್ಣ ವಿಫಲವಾಗಿದೆ.

ತಾವು ಕರೆದಿದ್ದ ಬಂದ್​ಗೆ ಬೆಂಬಲ ವ್ಯಕ್ತವಾಗದಿರುವುದನ್ನು ಕಂಡ ಸಂಘಟನೆಗಳು ಆ ಕೂಡಲೇ ಇದನ್ನು ಸಾಂಕೇತಿಕ ಪ್ರತಿಭಟನೆಯಾಗಿ ಆಚರಿಸುತ್ತೇವೆಂದು ಘೋಷಿಸಿಕೊಂಡಿದ್ದರು. ಈ ಮೂಲಕ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕರೆಯಲಾದ ಬಂದ್​ ಸಂಪೂರ್ಣವಾಗಿ ವಿಫಲಗೊಂಡಿದೆ. ಇದಕ್ಕೆ ಪೂರಕವಾಗಿ ಉತ್ತರ ಕರ್ನಾಟಕದ ನಗರ ಪ್ರದೇಶಗಳಾದ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಬಿಜಾಪುರ, ಬಳ್ಳಾರಿ ಹಾಗೂ ಗುಲ್ಬರ್ಗಾಗಳಲ್ಲೂ ಬಂದ್​ಗೆ ಬೆಂಬಲ ವ್ಯಕ್ತವಾಗದಿರುವುದು ಅಚ್ಚರಿ ಮೂಡಿಸಿತ್ತು. ಅಂಗಡಿ- ಮಾರುಕಟ್ಟೆ, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸಾರಿಗೆಗೆ ಬಂದ್​ ಬಿಸಿ ತಟ್ಟದೆ ಎಂದಿನಂತೆ ಕಾರ್ಯ ನಿರ್ವಹಿಸುವ ಮೂಲಕ ತಮಗೆ ಬೇರೆ ರಾಜ್ಯ ಬೇಡ, ಅಭಿವೃದ್ಧಿ ಬೇಕೆಂಬ ಸಂದೇಶ ಸಾರಿವೆ.

ಇವೆಲ್ಲದರ ನಡುವೆ ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ರಾಜ್ಯ ನಿರ್ಮಿಸುವ ವಿಚಾರವನ್ನು ಖಂಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ಗಮನಾರ್ಹ. ಇನ್ನು ಅಖಂಡ ಕರ್ನಾಟಕ ಹೋರಾಟಗಾರರು ಹಾಗೂ ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆ ಇಟ್ಟ ಹೋರಾಟಗಾರರು ನಡುವೆ ಬೆಳಗಾವಿಯಲ್ಲಿ ಘರ್ಷಣೆಯೊಂದು ಉಂಟಾಗಿರುವುದನ್ನು ಹೊರತುಪಡಿಸಿದರೆ ಬೇರೆಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್​ ಇಂದಿನ ಬಂದ್​ ಫ್ಲಾಪ್​ ಶೋ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕ ವಿಭಜಿಸಲು ನಡೆಸುವ ಯಾವುದೇ ಹುನ್ನಾರವನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ನ್ಯೂಸ್​ 18 ನೊಂದಿಗೆ ಮಾತನಾಡಿದ ಹೆಚ್​. ಡಿ ಕುಮಾರಸ್ವಾಮಿ ಇಂದಿನ ಬಂದ್​ಗೆ ವ್ಯಕ್ತವಾದ ಪ್ರತಿಕ್ರಿಯೆ ತಾನ್ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಿದೆ ಎಂದಿದ್ದಾರೆ. "ಉತ್ತರ ಕರ್ನಾಟಕದ ಜನರು ಪ್ರತ್ಯೇಕ ರಾಜ್ಯ ಬೇಡ ಎನ್ನುವಂತೆ ನಾನು ಕಾರ್ಯ ನಿರ್ವಹಿಸಿದ್ದೇನೆ. ಕೇವಲ ಕೆಲ ರಾಜಕಾರಣಿಗಳಿಗಷ್ಟೇ ಪ್ರತ್ಯೇಕ ರಾಜ್ಯ ಬೇಕಾಗಿದೆ. ಇವೆಲ್ಲದರ ಹಿಂದೆ ಬಿಜೆಪಿ ನಾಯಕರಿದ್ದಾರೆ. ಆದರೀಗ ಇದಕ್ಕೆ ಹಿನ್ನಡೆಯಾಗಿರುವುದನ್ನು ಕಂಡ ಅವರು ಇದನ್ನು ಜೆಡಿಎಸ್​ ಮೇಲೆ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಕುಕೃತ್ಯ ಬಹಿರಂಗಗೊಂಡಿದೆ" ಎಂದಿದ್ದಾರೆ.

ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳು ತಮ್ಮ ಬಿಜೆಪಿ ಮೇಲೆ ಮಾಡಿರುವ ಆರೋಪಗಳ ವಿರುದ್ಧ ಕಿಡಿ ಕಾರಿರುವ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪ ನಮ್ಮ ಪಕ್ಷವು ಕರ್ನಾಟಕ ವಿಭಜನೆಯನ್ನು ವಿರೋಧಿಸುತ್ತದೆ. ಕರ್ನಾಟಕವನ್ನು ಒಂದಾಗಿಸುವಲ್ಲಿ ನಾವು ಶ್ರಮಿಸುತ್ತಿದ್ದೇವೆಂದಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ಉತ್ತರ ಕರ್ನಾಟಕದ ಜನರ ಮನಸ್ಸಿಗೆ ನೋವುಂಟು ಮಾಡಿದೆ. ಒಂದು ವೇಳೆ ರಾಜ್ಯ ಇಬ್ಭಾಗವಾದರೆ ಅದಕ್ಕೆ ಗೌಡರೇ ಸಂಪೂರ್ನ ಜವಾಬ್ದಾರರು ಎಂದಿದ್ದಾರೆ.
ಇನ್ನು ಪ್ರತ್ಯೇಕ ರಾಜ್ಯ ವಿಚಾರವಾಗಿ ಮಾತನಾಡುವುದು ಎರಡು ಅಲಗಿನ ಕತ್ತಿಯಂತೆ ಎಂದು ಅರಿತಿರುವ ಬಿ. ಎಸ್​ ಯಡಿಯೂರಪ್ಪ, ಈ ಕುರಿತಾಗಿ ಮಾತನಾಡದಿರುವಂತೆ ತಮ್ಮ ಪಕ್ಷದ ನಾಯಕರಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಮುಂದಿನ 2 ತಿಂಗಳೊಳಗೆ ಉತ್ತರ ಕರ್ನಾಟಕದ ಎಲ್ಲಾ 13 ಜಿಲ್ಲೆಗಳ ಜನರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುತ್ತೇನೆಂದಿರುವ ಸಿಎಂ, ಸರ್ಕಾರದ ಕೆಲ ಮುಖ್ಯ ಇಲಾಖೆಗಳ ಕಚೇರಿಯನ್ನು ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾಯಿಸುವುದಾಗಿಯೂ ಹೇಳಿದ್ದಾರೆ.

ಇತ್ತ ಕಾಂಗ್ರೆಸ್​ ಪಕ್ಷವೂ ತಮ್ಮ ಪಕ್ಷದ ನಾಯಕರಿಗೆ ಈ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡದಿರುವಂತೆ ಸೂಚಿಸಿದೆ
First published:August 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ