news18-kannada Updated:March 3, 2021, 11:41 AM IST
ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು (ಮಾ. 3): ಯುವತಿಯೊಂದಿಗೆ ರಾಸಲೀಲೆ ನಡೆಸಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ರಿಲೀಸ್ ಆಗಿದೆ. ಇದರಿಂದ ರಮೇಶ್ ಜಾರಕಿಹೊಳಿ ಅಜ್ಞಾತವಾಸದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯ ತಪ್ಪೇನಿಲ್ಲ. ಈ ಬಗ್ಗೆ ಸಿಎಂ ಬಳಿ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದೇನೆ. ಈ ವೀಡಿಯೋ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇದೆ. ಆ ರಾಜಕಾರಣಿ ಬಿಜೆಪಿಯವರಲ್ಲ. ಬೇರೆ ಪಕ್ಷದ ರಾಜಕಾರಣಿ ಪ್ರಕರಣದ ಹಿಂದಿದ್ದಾರೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು ಎಂದು ಹೊಸ ಬಾಂಬ್ ಹಾಕಿದ್ದಾರೆ.
ಸಿಎಂ ಯಡಿಯೂರಪ್ಪ ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೆಚ್ ವೈ ಮೇಟಿ ರಾಜೀನಾಮೆ ಕೊಡುವ ವೇಳೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ರಮೇಶ್ ಜಾರಕಿಹೊಳಿ ಜೊತೆಗಿರುವ ಮಹಿಳೆ ಯಾರು ಅಂತಾನೇ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಜೊತೆಗಿನ ಮಹಿಳೆಯ ವೀಡಿಯೋ ನಕಲಿ. ಹೀಗಾಗಿ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು
ಒಂದು ವೇಳೆ ಮುಂದೆ ಸಂತ್ರಸ್ಥ ಮಹಿಳೆ ಬಂದು ದೂರು ನೀಡಿದರೆ ಆಮೇಲೆ ರಾಜೀನಾಮೆ ಬಗ್ಗೆ ನೋಡೋಣ. ಈಗ ಆ ಮಹಿಳೆ ದೂರು ನೀಡದೆ, ಬರೀ ಯಾರೋ ಒಬ್ಬರು ಬಂದು ದೂರು ಕೊಟ್ಟರೆ ಹೇಗೆ? ಅದನ್ನು ದೂರು ಎಂತಲೂ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ನಾನಂತೂ ರಮೇಶ್ ಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇನೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಗೋವಿಂದ ಕಾರಜೋಳ ಜೊತೆ ಚರ್ಚೆ ನಡೆಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಸಭೆಗೆ ಆಗಮಿಸಿದ್ದಾರೆ. ಸಿಡಿ ಪ್ರಕರಣ ಸಿಐಡಿ ಅಥವಾ ಸಿಬಿಐಗೆ ವಹಿಸುವಂತೆ ಬಾಲಚಂದ್ರ ಜಾರಕಿಹೊಳಿ ಒತ್ತಾಯ ಮಾಡಿರುವುದರಿಂದ ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು.
Published by:
Sushma Chakre
First published:
March 3, 2021, 11:41 AM IST