ಚಾಮರಾಜನಗರ: ನಾಡಿನ ಹಿರಿಯ ವಿದ್ವಾಂಸ, ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ (76) (Maleyur Guruswamy) ಗುರುವಾರ ಮುಂಜಾನೆ ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಮುಂಜಾನೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ (Maleyur Guruswamy Passes Away) ವಿಧಿವಶರಾಗಿದ್ದಾರೆ.
ಪ್ರೊ. ಮಲೆಯೂರು ಗುರುಸ್ವಾಮಿ ಅವರಿಗೆ ತೀವ್ರ ಅನಾರೊಗ್ಯ ಕಾಣಿಸಿಕೊಂಡ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಮೈಸೂರು ನಗರದಲ್ಲಿ ಇರುವ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದ ಅವರ ದೇಹದಲ್ಲಿ ದಿನಕಳೆದಂತೆ ಅನಾರೋಗ್ಯ ಹೆಚ್ಚಾಗ ತೊಡಗಿದೆ. ವೈದ್ಯರು ಕೂಡ ಗುರುಸ್ವಾಮಿ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಇಂದು ಬೆಳ್ಳಂಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಪ್ರೊ. ಮಲೆಯೂರು ಗುರುಸ್ವಾಮಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಮೈಸೂರಿನ ಜೆಎಸ್‌ಎಸ್ ಮಹಾ ವಿದ್ಯಾಪೀಠದ ಬಳಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತ ಪ್ರೊ. ಮಲೆಯೂರು ಗುರುಸ್ವಾಮಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರೊ. ಮಲೆಯೂರು ಗುರುಸ್ವಾಮಿ ಅವರ ಸಾಧನೆ
1947ರ ಆಗಸ್ಟ್ 1ರಂದು ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಜನಿಸಿದ ಪ್ರೊ. ಮಲೆಯೂರು ಗುರುಸ್ವಾಮಿ ಅವರ ತಂದೆ ಶಿವಣ್ಣ ಹಾಗೂ ತಾಯಿ ಮರೆಮ್ಮ. ಈವರೆಗೆ ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸವಾಗಿದ್ದ ಅವರು, ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಹತ್ತಾರು ಪುಸ್ತಕಗಳನ್ನು ರಚಿಸಿದ್ದರು
ಪ್ರೊ. ಮಲೆಯೂರು ಗುರುಸ್ವಾಮಿ ಅವರು ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮ ವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೇ, ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ ಸೇರಿದಂತೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ.
ಸಾಧನೆಗೆ ಒಲಿದು ಬಂದಿತ್ತು ಪ್ರಶಸ್ತಿಗಳು
ಇನ್ನು ಪ್ರೊ. ಮಲೆಯೂರು ಗುರುಸ್ವಾಮಿ ಅವರ ಸಾಧನೆಯನ್ನು ಗೌರವಿಸಿ ಹತ್ತಾರು ಪ್ರಶಸ್ತಿಗಳು ಕೂಡ ಅವರಿಗೆ ಒಲಿದು ಬಂದಿದ್ದು, ಆ ಪೈಕಿ, ಮಹಾಮನ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬಂದಿದೆ.
ಇನ್ನು 2014ರಲ್ಲಿ ಚಾಮರಾಜನಗರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದರೆ, 2017 ರ ಅಕ್ಟೋಬರ್ 22 ರಂದು ಮೈಸೂರಿನ ಕಲಾಮಂದಿರದಲ್ಲಿ 'ಮಲೆಯೂರು ನಮ್ಮವರು' ಮಗು 70' ಎಂಬ ಶೀರ್ಷಿಕೆಯಡಿ ಅಭಿನಂದನೆ ಸಲ್ಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ