HOME » NEWS » State » SECRETARY GENERAL KHAROLA VISITS KALBURGI AIRPORT PILOT TRAINING CENTER SESR SAKLB

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪೈಲಟ್ ಟ್ರೈನಿಂಗ್; ಕೇಂದ್ರ ಕಾರ್ಯದರ್ಶಿ ಖರೋಲಾ ಭೇಟಿ

ಅತ್ಯಂತ ಹಿಂದುಳಿದ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಪೈಲಟ್ ಟ್ರೈನಿಂಗ್ ಆರಂಭಗೊಂಡಿರುವುದು ಯುವ ಜನತೆಯಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ

news18-kannada
Updated:January 23, 2021, 5:05 PM IST
ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪೈಲಟ್ ಟ್ರೈನಿಂಗ್; ಕೇಂದ್ರ ಕಾರ್ಯದರ್ಶಿ ಖರೋಲಾ ಭೇಟಿ
ಕೇಂದ್ರ ಕಾರ್ಯದರ್ಶಿ ಖರೋಲಾ ಭೇಟಿ
  • Share this:
ಕಲಬುರ್ಗಿ (ಜ. 23):  ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ತಲೆ ಎತ್ತಿರುವ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆಗಳು ಬಿರುಸುಗೊಂಡಿವೆ. ಕಲಬುರ್ಗಿ - ಬೆಂಗಳೂರು ನಡುವೆ ಆರಂಭಿಸಿದ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ವ್ಯಾಪಕ ಸ್ಪಂದನೆ ಸಿಗುತ್ತಿದ್ದಂತೆಯೇ, ಕಲಬುರ್ಗಿ - ದೆಹಲಿ ಹಾಗೂ ಕಲಬುರ್ಗಿ ಮತ್ತು ತಿರುಪತಿಗಳ ನಡುವೆಯೂ ವಿಮಾನ ಸೇವೆ ಆರಂಭಗೊಳಿಸಲಾಗಿತ್ತು. ಇದೀಗ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಮುಂದಿನ ದಿಗಳಲ್ಲಿ ಕಾರ್ಗೋ ಸರ್ವೀಸ್ ಸಹ ಪ್ರಾರಭಗೊಳ್ಳುವ ಮುನ್ಸೂಚನ ಸಿಕ್ಕಿದೆ. ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿ ವತಿಯಿಂದ ಪೈಲಟ್ ಟ್ರೈನಿಂಗ್ ಆರಂಭಿಸಲಾಗಿದೆ. ಐ.ಜಿ.ಆರ್.ಯು.ಎ. ಕೇಂದ್ರ ಸರ್ಕಾರದ ಸಿವಿಲ್ ಏವಿಯೇಷನ್ ಇಲಾಖಾ ವ್ಯಾಪ್ತಿಯಲ್ಲಿದ್ದು, ಆತ್ಮ ನಿರ್ಭರ ಯೋಜನೆ ಅಡಿ ಕಲಬುರ್ಗಿಯಲ್ಲಿ ಪೈಲಟ್ ಟ್ರೈನಿಂಗ್ ಕಾರ್ಯ ಆರಂಭಿಸಿದೆ.

ಉತ್ತರ ಭಾರತದಲ್ಲಿ ಪ್ರತಿಕೂಲ ವಾತಾವರಣ ಇರುವ ಹಿನ್ನೆಲೆಯಲ್ಲಿ ಅಲ್ಲಿನ ತರಬೇತಿ ಪ್ರಕ್ರಿಯೆಯನ್ನು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಿ ತರಬೇತಿ ಆರಂಭಿಸಲಾಗಿದೆ. ಉತ್ತರ ಭಾರತದಿಂದ ಶಿಫ್ಟ್ ಆದ ಪೈಲಟ್ ತರಬೇತಿ ಪ್ರಕ್ರಿಯೆ ಏಪ್ರಿಲ್ ವರೆಗೂ ಮುಂದುವರೆಯಲಿದೆ. ಜೊತೆಗೆ ಪೈಲಟ್ ತರಬೇತಿ ಆಂಭಿಸಲು ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದ್ದು, ಐ.ಜಿ.ಆರ್.ಯು.ಐ. ಸೇರಿ ಇದುವರೆಗೆ ಎರಡು ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ಸಂಸ್ಥೆಗಳಿಂದಲೂ ಪೈಲಟ್ ತರಬೇತಿ ಮುಂದುವರಿಯಲಿದೆ. ಪೈಲಟ್ ತರಬೇತಿಗಾಗಿ ಭಾರತೀಯ ಯುವಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದೇಶಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯೇ ತರಬೇತಿ ನೀಡುವ ಧ್ಯೇಯದೊಂದಿಗೆ ಕಲಬುರ್ಗಿಯಲ್ಲಿಯೂ ಪೈಲಟ್ ಟ್ರೈನಿಂಗ್ ಆರಂಭಿಸಲಾಗಿದೆ. ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸದ್ಯ ನಾಲ್ಕು ತರಬೇತಿ ವಿಮಾನಗಳು ಬಂದಿದ್ದು, ಆರು ಜನ ತರಬೇತುದಾರರಿದ್ದಾರೆ. ಒಟ್ಟು 12 ಜನರಿಗೆ ಸದ್ಯ ಪೈಲಟ್ ತರಬೇತಿ ನೀಡಲಾಗುತ್ತಿದೆ.

ಕಲಬುರ್ಗಿ ನಗರದ ಮೇಲೆ ಲೋಹದ ಹಕ್ಕಿಗಳ ಹಾರಾಟದ ಅಬ್ಬರ ಹೆಚ್ಚಾಗಿದೆ. ಅತ್ಯಂತ ಹಿಂದುಳಿದ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಪೈಲಟ್ ಟ್ರೈನಿಂಗ್ ಆರಂಭಗೊಂಡಿರುವುದು ಯುವ ಜನತೆಯಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ. ಪೈಲಟ್ ಟ್ರೈನಿಂಗ್ ತರಬೇತಿ ಆರಂಭಗೊಂಡ ಹಿನ್ನೆಲೆಯಲ್ಲಿ ಇಂದು ಮಿನಿಸ್ಟ್ರಿ ಆಫ್ ಸಿವಿಲ್ ಏವಿಯೇಷನ್ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಐ.ಜಿ.ಆರ್.ಯು.ಎ.  ನೇತೃತ್ವದಲ್ಲಿ ನಡೀತಿರುವ ತರಬೇತಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಇದನ್ನು ಓದಿ: ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು; ಇಲ್ಲವೇ ಸಿಎಂ ಕಾರ್ಯಾಲಯಕ್ಕೆ ನುಗ್ಗಿ ರಾಜೀನಾಮೆ ‌ಕೇಳುತ್ತೇವೆ; ವಾಟಾಳ್ ಎಚ್ಚರಿಕೆ

ಕಲಬುರ್ಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೈಲಟ್ ತರಬೇತಿ ನೀಡುತ್ತಿರುವ ಸಿಬ್ಬಂದಿ ಜೊತೆ ಸಮಾಲೋಚನೆ ಮಾಡಿದ್ದಾರೆ. ಸದ್ಯ ನಾಲ್ಕು ತರಬೇತಿ ವಿಮಾನಗಳು ಕಲಬುರ್ಗಿಯಲ್ಲಿದ್ದು, ಮತ್ತಷ್ಟು ತರಬೇತಿ ವಿಮಾನಗಳನ್ನು ಕಳುಹಿಸಿಕೊಡಲಿರುವುದಾಗಿ ಪ್ರದೀಪ್ ಸಿಂಗ್ ಖರೋಲಾ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರತಿನಿಧಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಮತ್ತಷ್ಟು ತರಬೇತಿ ವಿಮಾನಗಳನ್ನು ಕಳುಹಿಸಿಕೊಡುವ ಭರವಸೆ ನೀಡಿರುವುದರಿಂದ ಕಲಬುರ್ಗಿಯಲ್ಲಿ ಪೈಲಟ್ ತರಬೇತಿ ಮುಂದುವರಿಯುವ ವಿಶ್ವಾಸ ಮೂಡಿದೆ.

ಖರೋಲಾ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಸಿಇಒ ಪಿ.ರಾಜಾ, ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್, ಪಾಲಿಕೆ ಆಯುಕ್ತ ಮತ್ತಿತರರು ಉಪಸ್ಥಿತರಿದ್ದರು. ಈಗಾಗಲೇ ಕಲಬುರ್ಗಿಯಿಂದ ಬೆಂಗಳೂರು, ದೆಹಲಿ ಹಾಗೂ ತಿರುಪತಿಗಳ ನಡುವ ವಾಣಿಜ್ಯ ವಿಮಾನ ಹಾರಾಟ ಆರಂಭಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪೈಲಟ್ ತರಬೇತಿ ಪ್ರಕ್ರಿಯೆಯೂ ಯಶಸ್ವಿಯಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಪೈಲಟ್ ತರಬೇತಿ ಪ್ರಕ್ರಿಯೆ ಕಲ್ಯಾಣ ಕರ್ನಾಟಕದ ಯುವ ಸಮೂಹದಲ್ಲಿ ಹೊಸ ಆಶಾ ಕಿರಣ ಮೂಡಿಸಿದೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: January 23, 2021, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories