ಬೆಂಗಳೂರು (ಜುಲೈ 09): ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈಗ ನಿರೀಕ್ಷೆಯಂತೆ ಪಿಯುಸಿ ಪುನಾವರ್ತಿತ (Repeaters) ವಿದ್ಯಾರ್ಥಿಗಳಿಗೂ ಅದೇ ಸಿಹಿ ಸುದ್ದಿ ಇದೆ. ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಸರ್ಕಾರ ಹೇಳಿದೆ. ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿ ಗಳಿಗೆ (Private Students) ಮುಂದಿನ ತಿಂಗಳು ಪರೀಕ್ಷೆ ನಡೆಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ 17,477 ಪ್ರೈವೇಟ್ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯ ಲಿದ್ದಾರೆ. ಆಗಸ್ಟ್ 31ರೊಳಗೆ ಇವರಿಗೆ ಪರೀಕ್ಷೆ ಆಯೋಜಿಸುವಂತೆ ಸರ್ಕಾರಕ್ಕೆ ಹೈ ಕೋರ್ಟ್ ನಿರ್ದೇಶನ ನೀಡಿದೆ. ಪರೀಕ್ಷೆ ದಿನಾಂಕವನ್ನು ಸದ್ಯದಲ್ಲೇ ಶಿಕ್ಷಣ ಇಲಾಖೆ ಪ್ರಕಟಿಸುವ ನಿರೀಕ್ಷೆ ಇದೆ. ಈ ನಡುವೆ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದರೂ ಸಹ ಫಲಿತಾಂಶ ಮತ್ತು ಅಂಕಕ್ಕೆ ಅನೇಕ ಮಾನದಂಡಗಳಿದ್ದು, ಜುಲೈ 20ರ ಒಳಗೆ ಫಲಿತಾಂಶ ನೀಡುವುದಾಗಿ ಪಿಯು ಬೋರ್ಡ್ ತಿಳಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಲಾಗುತ್ತಿದೆ.
ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಅಸೆಸ್ಮೆಂಟ್ ಸಂಯೋಗದಲ್ಲಿ ಅಂಕ ನೀಡಲಾಗುವುದು ಎಂದು ತಿಳಿದುಬಂದಿದೆ. ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳ ಶೇ. 45, ಪ್ರಥಮ ಪಿಯುಸಿಯ ಶೇ. 45 ಅಂಕ ಹಾಗೂ ದ್ವಿತೀಯ ಪಿಯುಸಿಯ ಅಸೆಸ್ಮೆಂಟ್ ಅಂಕ ಶೇ. 10ರಷ್ಟು ಪರಿಗಣನೆ ಮಾಡಿ ಅಂಕಗಳನ್ನ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 20ರೊಳಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗಲಿದೆ ಎನ್ನಲಾಗಿದೆ.
ಇನ್ನು, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 35 ಅಂಕದ ಜೊತೆಗೆ ಶೇ. 5ರಷ್ಟು ಗ್ರೇಸ್ ಅಂಕಗಳನ್ನ ನೀಡಲಾಗುತ್ತದೆ ಎಂದು ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸ್ಪಷ್ಟಪಡಿಸಿದೆ.
ಖಾಸಗಿ ವಿದ್ಯಾರ್ಥಿಗಳಿಗೆ ಆಗಸ್ಟ್ 31ರೊಳಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20ರ ಒಳಗೆ ಫಲಿತಾಂಶ ಪ್ರಕಟಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಪರೀಕ್ಷೆಯ ವೇಳೆ ಕೋವಿಡ್ ಮಾರ್ಗಸೂಚಿಗಳ ಪಾಲನೆ ಅಗುವಂತೆ ಎಚ್ಚರ ವಹಿಸಬೇಕೆಂದು ನ್ಯಾಯಾಲಯವು ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ತಿಳಿಸಿದೆ. ಒಟ್ಟು 17,477 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.
ಇನ್ನು, ಪಿಯುಸಿ ಪರೀಕ್ಷೆಗಳನ್ನ ಸರ್ಕಾರ ರದ್ದು ಮಾಡಿದರೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ನಡೆಸುವ ನಿರ್ಧಾರ ಮಾಡಿದೆ. ಕೆಲ ದಿನಗಳ ಹಿಂದೆ ಪರೀಕ್ಷೆಯ ದಿನಾಂಕವನ್ನೂ ಪ್ರಕಟಿಸಿದೆ. ಸಕಲ ಮುಂಜಾಗ್ರತಾ ಕ್ರಮಗಳಿಂದ ಎಚ್ಚರಿಕೆಯಿಂದ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.
ಅಲ್ಲದೆ, 10ನೇ ತರಗತಿ ಮತ್ತು ಪ್ರಥಮ ಪಿಯು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳಿಗೆ SATs ವೆಬ್ ಸೈಟ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಇಲಾಖೆಯ SATs ವೆಬ್ ವೈಟ್ ನಲ್ಲಿ sts.Karnataka.gov.in ನಲ್ಲಿ ಮಾಹಿತಿ ಲಭ್ಯವಿದೆ.
10ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜು.10ರವರೆಗೆ ಫಲಿತಾಂಶ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಅಂಕದಲ್ಲಿ ಏನೇ ತಪ್ಪುಗಳಿದ್ದರೆ
ಜು. 12ರ ಒಳಗಾಗಿ ವ್ಯಾಸಾಂಗ ಮಾಡಿದ ಕಾಲೇಜುಗಳ ಗಮನಕ್ಕೆ ತರಬೇಕು ಎಂದೂ ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ