Second PUC Exams- ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; 18414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
ಕೊರೊನಾ ಕೃಪೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನ ಪರೀಕ್ಷೆ ನಡೆಸದೆಯೇ ವಿವಿಧ ಮಾನದಂಡಗಳಿಂದ ಅಂಕಗಳನ್ನ ನೀಡಿ ಪಾಸ್ ಮಾಡಲಾಗಿತ್ತು. ಇದರಲ್ಲಿ ತೃಪ್ತಿ ಹೊಂದದ ಇಚ್ಛಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಇಂದಿನಿಂದ ಪರೀಕ್ಷೆ ಏರ್ಪಡಿಸಲಾಗಿದೆ.
ಬೆಂಗಳೂರು, ಆ. 19: ಕೊರೋನಾ ಮಧ್ಯೆ ಇದೀಗ ಶಿಕ್ಷಣ ಇಲಾಖೆ ಮತ್ತೊಂದು ಪರೀಕ್ಷೆ ನಡೆಸುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿ ಫಲಿತಾಂಶವನ್ನೂ ಪ್ರಕಟಿಸಿದ ಸರ್ಕಾರ ಈಗ ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆಯೇ ವಿವಿಧ ಮಾನದಂಡಗಳನ್ನಿಟ್ಟು ಎಲ್ಲರನ್ನೂ ಪಾಸ್ ಮಾಡಿತ್ತು. ಆದರೆ, ಕಡಿಮೆ ಅಂಕ ಸೇರಿದಂತೆ ವಿವಿಧ ಕಾರಣಕ್ಕೆ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗಾಗಿ ಇಂದು ಗುರುವಾರದಿಂದ ಪರೀಕ್ಷೆ ಜರುಗಲಿದೆ. ಸೆಪ್ಟೆಂಬರ್ 3ರವರೆಗೆ ಕೊರೊನಾ ಮಾರ್ಗಸೂಚಿಯಂತೆ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
ಈ ಬಾರಿ 18,414 ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 17469 ಖಾಸಗಿ ವಿದ್ಯಾರ್ಥಿಗಳು, 352 ರಿಪೀಟರ್ಸ್, 5093 ಫ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು, ರಾಜ್ಯದ 187 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ಇರುತ್ತೆ. ಸೋಂಕಿನ ಲಕ್ಷಣಗಳಿದ್ರೆ ಕೂಡಲೇ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವ್ರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಆರ್ ತಿಳಿಸಿದ್ದಾರೆ.
ಕೇರಳ ಜಿಲ್ಲೆ ಸೇರಿದಂತೆ ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ RTPCR ನೆಗಟಿವ್ ರಿಪೋರ್ಟ್ ಕಡ್ಡಾಯವಾಗಿದೆ. 72 ಗಂಟೆಗಳ ನೆಗೆಟಿವ್ ರಿಪೋರ್ಟ್ ನೀಡಬೇಕಾಗಿದೆ. ಡೆಸ್ಕ್ಗೆ ಒಬ್ಬರಂತೆ ಪರೀಕ್ಷಾ ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಆತಂಕವಿಲ್ಲದೇ ಇಲ್ಲದೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.
ಎಂಟು ಲಕ್ಷ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದೇವೆ. 18 ಸಾವಿರ ವಿದ್ಯಾರ್ಥಿಗಳ ದ್ವಿತೀಯ ಪರೀಕ್ಷೆಯನ್ನು SOP ಪಾಲಿಸಿ ಯಾವುದೇ ತೊಂದರೆಯಾಗದಂತೆ ನಡೆಸಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೋನಾ ನಡುವೆ ಶಿಕ್ಷಣ ಇಲಾಖೆ ಪರೀಕ್ಷೆಯನ್ನ ಸುರಕ್ಷಿತವಾಗಿ ನಡೆಸಲು ಸರ್ವ ಪ್ರಯತ್ನ ನಡೆಸುತ್ತಿದೆ. ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಎಸ್ ಎಸ್ ಎಲ್ ಸಿ ರೀತಿ ಪರೀಕ್ಷೆ ನಡೆಸುವಂತೆ, ಕೃಪಾಂಕ ನೀಡಿ ಪರೀಕ್ಷೆ ಸರಳೀಕರಿಸುವಂತೆ ಶಿಕ್ಷಣ ಇಲಾಖೆಗೆ, ಸಚಿವರಿಗೆ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಶಿಕ್ಷಣ ಸಚಿವರು ನೀಡಿಲ್ಲ. ಇದರ ನಡುವೆ ಪರೀಕ್ಷೆ ಬರೆಯಲು ತಯಾರಾಗಿರುವ ವಿದ್ಯಾರ್ಥಿಗಳ ದೈರ್ಯ ಶ್ಲಾಘನೀಯ. ಒಟ್ಟಿನಲ್ಲಿ ಪರೀಕ್ಷಾರ್ಥಿಗಳು ಹಾಗೂ ಇಲಾಖೆಯ ಪ್ರಯತ್ನ ಸಫಲವಾಗಿ ಯಾವುದೇ ಆತಂಕವಿಲ್ಲದೆ ಪರೀಕ್ಷೆ ಜರುಗಲಿ ಎಂಬುದೆ ನಮ್ಮ ಆಶಯ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಶರಣು ಹಂಪಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ