ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನವಾದ ನಿನ್ನೆ ಐಚ್ಛಿಕ ಕನ್ನಡ, ಗಣಿತ, ಮೂಲಗಣಿತ ಪರೀಕ್ಷೆ ಸುಸೂತ್ರವಾಗಿ ನಡೆದವು. ಸಾಮಾಜಿಕ ಅಂತರ, ಕೋವಿಡ್ 19 ಸುರಕ್ಷತಾ ಕ್ರಮಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪಾಲಿಸಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆಯಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಬೆಂಗಳೂರಿನ ವಸಂತನಗರದಲ್ಲಿರುವ ಸಂತ ಅನ್ನಮ್ಮನವರ (St Anne's) ವಿದ್ಯಾ ಸಂಸ್ಥೆ ಮತ್ತು ಕೋಟೆ ವಾಣಿವಿಲಾಸ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಮತ್ತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು. ‘ಆ.21ರಂದು ಭಾಷಾ ಪರೀಕ್ಷೆ ಇರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಇರುತ್ತಾರೆ. ಹೀಗಾಗಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಲೇಜುಗಳ ಆಡಳಿತ ಮಂಡಳಿ, ಪ್ರಾಂಶುಪಾಲರಿಗೆ ಸೂಚಿಸಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು.
‘ಇಲಾಖೆಯಿಂದ ನೀಡಲಾದ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಪರೀಕ್ಷೆ ಬರೆಯುತ್ತಿರುವವರಲ್ಲಿ ಖಾಸಗಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪರೀಕ್ಷೆಗೆ ಓದಿಕೊಳ್ಳಲು, ಸಿದ್ಧತೆ ಮಾಡಿಕೊಳ್ಳಲು ಖಾಸಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ಇತ್ತು. ಹೀಗಾಗಿ, ಖಾಸಗಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಪಾಸ್ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಈ ವಿಚಾರವನ್ನು ಈಗಾಗಲೇ ತಿಳಿಸಲಾಗಿದೆ’ ಎಂದು ಸಚಿವರು ಸ್ಪಷ್ಟಪಡಿಸಿದರು.
ಪುನಾರವರ್ತನೆ: ‘ಆ.23ರಿಂದ ಪ್ರೌಢಶಾಲೆ 9 ಮತ್ತು 10ನೇ ತರಗತಿ ಆರಂಭದ ಮೊದಲ ಹದಿನೈದು ದಿನಗಳು ಪುನರಾವರ್ತನೆ ಕ್ಲಾಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ’ ಎಂದು ಸಚಿವರು ಹೇಳಿದರು.‘ಮಕ್ಕಳು ಒಂದುವರೆ ವರ್ಷದಿಂದ ತರಗತಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ, ಸುಮಾರು ಶೇ 50ರಷ್ಟು ವಿದ್ಯಾರ್ಥಿಗಳು ವಿದ್ಯಾಗಮ, ಆನ್ಲೈನ್ ಕ್ಲಾಸ್ ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ, ಅವರು ಶಾಲೆ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ’ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಬರಗಾಲ ಸಮಸ್ಯೆ, ಹವಾಮಾನ ವೈಪರೀತ್ಯ ತಡೆಗಟ್ಟಲು ಆಫ್ರಿಕಾ ರೈತರ ವಿನೂತನ ತೋಟಗಾರಿಕೆ
ಪ್ರತಿಕ್ರಿಯೆ ಆಧರಿಸಿ 1ರಿಂದ 8ನೇ ತರಗತಿಗಳು ಹಂತ ಹಂತವಾಗಿ ಆರಂಭ:‘ಆ.23ರಿಂದ ಆ.30ರವರೆಗೆ 9 ಮತ್ತು 10ನೇ ತರಗತಿ ಹಾಗೂ ಪಿಯು ಕ್ಲಾಸ್‌ಗಳು ಆರಂಭವಾದ ನಂತರ ಬರುವ ಪ್ರತಿಕ್ರಿಯೆ ಆಧರಿಸಿ 1ರಿಂದ 8ನೇ ತರಗತಿಗಳು ಪುನಾರಂಭದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದೇ ಅವಧಿಯಲ್ಲಿ ಮಕ್ಕಳ ಪಾಲಕರಿಂದಲೂ ಅಭಿಪ್ರಾಯ ಸಂಗ್ರಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲೆ ಆರಂಭದ ದಿನಗಳು ಯಶಸ್ವಿಯಾದರೆ ಮುಂದಿನ ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ’ ಎಂದು ಸಚಿವರು ಹೇಳಿದರು.
ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಬಾಧಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ, ಮೂರನೇ ಅಲೆ ಬಗ್ಗೆ ಆತಂಕ ಬೇಡ. ಸ್ವತಃ ಮಕ್ಕಳೇ ಶಾಲೆ ಆರಂಭಿಸಿ ಎಂದು ಕೇಳುತ್ತಿದ್ದಾರೆ. ‘ಬೇರೆ ಕ್ಲಾಸ್ಗಳನ್ನು ಶುರು ಮಾಡಿದ್ದೀರಿ. ನಮ್ಮ ಕ್ಲಾಸ್ ಏಕೆ ಆರಂಭಿಸಿಲ್ಲ?’ ಎಂದು ಎರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನನಗೆ ಕೇಳಿದ್ದಾಳೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತುಂಬಾ ಆಸಕ್ತಿ ಇದೆ ಎಂದು ಸಚಿವರು ತಿಳಿಸಿದರು.
ಮೊದಲನೆ ಅಲೆ, ಎರಡನೇ ಅಲೆಯಲ್ಲಿ ಆಯಾ ಶಾಲೆಗಳ ವ್ತಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾಹಿತಿ ಕ್ರೋಢೀಕರಿಸಿ ಮುಖ್ಯಮಂತ್ರಿಯವರು, ಟಾಸ್ಕ್ಫೋರ್ಸ್ ಜೊತೆ ಚರ್ಚಿಸಿ 1ರಿಂದ 8ನೇ ತರಗತಿಗಳನ್ನು ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ