ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು (Schools) ಪುನಃ ಪ್ರಾರಂಭವಾಗಿದೆ (Re-Open). ಬೇಸಿಗೆ ರಜೆ (Summer Holidays), ಆಟದಲ್ಲೇ ಮೈಮರೆತಿದ್ದ ಮಕ್ಕಳು ಇಂದಿನಿಂದ ಮತ್ತೆ ಪಾಠದೊಳಕ್ಕೆ ಬ್ಯುಸಿ (Busy) ಆಗಲಿದ್ದಾರೆ. ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ (Primary) ಮತ್ತು ಪ್ರೌಢಶಾಲೆಗಳು (High School) ಆರಂಭವಾಗಿವೆ. ಕೊರೋನಾ (Corona) ಕಾರಣಕ್ಕೆ ಎರಡು ವರ್ಷಗಳಿಂದ ಶಾಲೆಗಳು ಸರಿಯಾಗಿ ನಡೆದಿರಲಿಲ್ಲ. ಹೀಗಾಗಿ ಬೇಸಿಗೆ ರಜೆಯನ್ನು ಈ ಬಾರಿ 15 ದಿನ ಮೊಟಕುಗೊಳಿಸಲಾಗಿದೆ. ವಾಡಿಕೆಯಂತೆ ಜೂನ್ 1ರ ಬದಲಾಗಿ, ಇಂದಿನಿಂದಲೇ ಶಾಲೆ ಆರಂಭಿಸಲಾಗಿದೆ. ಇಂದು ಮೊದಲ ದಿನದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಅಲ್ಲದೇ ಇಂದಿನಿಂದ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೂ ಚಾಲನೆ ಸಿಗಲಿದೆ. ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.
ಸಂತೋಷದಿಂದಲೇ ಶಾಲೆಗೆ ಬಂದ ಮಕ್ಕಳು
ಇಂದಿನಿಂದ ಪ್ರಸಕ್ತ ಸಾಲಿನ ವರ್ಷದ ಶಾಲೆ ಆರಂಭವಾಗಿದೆ. ಮೊದಲ ದಿನವಾದ ಇಂದು ಪುಟಾಣಿಗಳೆಲ್ಲ ಶಾಲೆಗೆ ಬಂದು ಸಂಭ್ರಮಿಸಿದ್ದಾರೆ. ಬೇಗ ಆರಂಭವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಮಕ್ಕಳು, ಗೆಳೆಯ, ಗೆಳತಿಯರೊಡನೆ ಮೊದಲ ದಿನವೇ ಆಡಿ ಖುಷಿ ಪಟ್ಟಿದ್ದಾರೆ.
ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ
ಮೊದಲ ದಿನ ಶಾಲೆಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಶಾಲೆಗೆ ಬರ್ತಿದ್ದಂತೆ ಶಿಕ್ಷಕ, ಶಿಕ್ಷಕಿಯರು ಮಕ್ಕಳನ್ನು ಅಪ್ಪಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ದೇಹದ ಟೆಂಪರೇಚರ್ ಚೆಕ್ ಮಾಡಿ, ಅವರನ್ನು ಶಾಲೆಯೊಳಗೆ ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Explained: ನಾಳೆಯಿಂದ ಶಾಲೆ ಶುರು, "ಬ್ಯಾಗು ಹಿಡಿ, ಸ್ಕೂಲಿಗ್ ನಡಿ" ಎನ್ನುವ ಮುನ್ನ ಈ ಮಾಹಿತಿ ಗೊತ್ತಿರಲಿ
ಶಾಲೆಗೆ ತಳಿರು ತೋರಣ ಕಟ್ಟಿ ಸ್ವಾಗತ
ಪುತ್ತೂರಿನ ಬ್ರಿಟಿಷ್ ಕಾಲದ ಕೊಂಬೆಟ್ಟು ಸರಕಾರಿ ಶಾಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೇ ಖುದ್ದಾಗಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಒಂದಾಗಿರುವ ಕೊಂಬೆಟ್ಟು ಶಾಲೆಗೆ ತಳಿರು- ತೋರಣಗಳಿಂದ ಶೃಂಗರಿಸಿ ಶಿಕ್ಷಕರು ಹಾಗೂ ಶಾಸಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡಿದ್ದಾರೆ. ಮಕ್ಕಳು ಬರುತ್ತಿದ್ದಂತೆ ಮಕ್ಕಳಿಗೆ ಹೂ, ಚಾಕಲೇಟು ಹಾಗು ಆರತಿ ಎತ್ತಿ ಶಾಸಕರು ಬರಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಲೆಗೆ ಬಂದ ಮಕ್ಕಳು
ಇಂದಿನಿಂದ ಶಾಲೆಗಳು ಪುನರಾರಂಭ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉತ್ಸಾಹದಿಂದ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಪ್ರತಿ ವರ್ಷಕ್ಕಿಂತ 15 ದಿನಗಳು ಮುಂಚಿತವಾಗಿ ಶಾಲೆಗಳು ಪುನರಾರಂಭಗೊಂಡಿದ್ಗರೂ, ಹುಬ್ಬಳ್ಳಿಯಲ್ಲಿ ಬಹುತೇಕ ಕಡೆ ಸಂತಸದಿಂದಲೇ ವಿದ್ಯಾರ್ಥಿಗಳು ಆಗಮಿಸಿದ್ದರು.
ಪೊರಕೆ ಹಿಡಿದು ಶಾಲೆ ಸ್ವಚ್ಛ ಮಾಡಿದ ಶಿಕ್ಷಕರು
ವಿಜಯಪುರ ನಗರದ ಶಿಖಾರಖಾನೆಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಪೊರಕೆ ಹಿಡಿದು ಶಾಲೆಯ ಆವರಣ ಸ್ವಚ್ಛಗೊಳಿಸಿದ್ದಾರೆ. ತಾವೇ ಸ್ವತಃ ಪೊರಕೆ ಹಿಡಿದು ಶಾಲೆಯ ಇಡೀ ಆವರಣ ಸ್ವಚ್ಛಗೊಳಿಸಿ, ತೆಂಗಿನಗರಿ ಕಟ್ಟಿ, ರಂಗೋಲಿ ಹಾಕಿದ್ದಾರೆ. ಈ ಮೂಲಕ ಅದ್ಧೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ರು. ಗುಲಾಬಿ ಹೂವು ಕೊಟ್ಟು ಮಕ್ಕಳಿಗೆ ಶುಭ ಕೋರಿದ್ರು.
ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ
ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಸರ್ಕಾರಿ ಶಾಲೆಗಳ ಸಂಭ್ರಮದ ಆರಂಭವಾಗಿದೆ. ತಳಿರು ತೋರಣ ಕಟ್ಟಿ ರಂಗೋಲಿ ಬಿಡಿಸಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಶಾಲೆಗೆ ಬಂದ ಮಕ್ಕಳಿಗೆ ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ ಮಾಡಿ, ಹಾಲು, ಬಿಸ್ಕಿಟ್ ನೀಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ್ದಾರೆ. ಜಿಲ್ಲೆಯಲ್ಲಿ 975 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 230 ಸರ್ಕಾರಿ ಪ್ರೌಢಶಾಲೆಗಳು ಇಂದಿನಿಂದ ಆರಂಭವಾಗಿವೆ.
ಡೊಳ್ಳು ಬಾರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ
ಕೊಪ್ಪಳ ಜಿಲ್ಲೆಯಲ್ಲಿಯೂ ಶಾಲೆಗಳು ಆರಂಭವಾಗಿವೆ. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಾಲೆಗೆ ಬಂದ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಗಿದೆ. ನಗರದ ಸಿಪಿಎಸ್ ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ, ಡೊಳ್ಳು ಬಾರಿಸುತ್ತಾ ಶಿಕ್ಷಕರು ಶಾಲೆಗೆ ಸ್ವಾಗತಿಸಿದ್ದಾರೆ. ಆದರೆ ಶಾಲಾ ಆರಂಭದ ಮೊದಲ ದಿನ ಶಾಲೆಗೆ ಬೆರಳೆಣಿಕೆಯಷ್ಟು ಮಕ್ಕಳು ಹಾಜರಾಗಿದ್ರು.
ಇದನ್ನೂ ಓದಿ: KSRTC: ಮೇ 16ಕ್ಕೆ ಶಾಲೆ-ಕಾಲೇಜು ಆರಂಭ; ಹಳೇ ಬಸ್ ಪಾಸ್ನಲ್ಲೇ ಪ್ರಯಾಣಕ್ಕೆ ಅವಕಾಶ
ಬಿಸಿಲಿನಿಂದಾಗಿ ಶಾಲೆಗೆ ಬರಲು ಮಕ್ಕಳ ಹಿಂದೇಟು
ಯಾದಗಿರಿ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದ ಹಿನ್ನಲೆ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ, ಕಲಬುರಗಿಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಹೀಗಾಗಿ ಬಿಸಿಲು ಹೆಚ್ಚಾದ ಹಿನ್ನಲೆ ಶಾಲೆಯತ್ತ ಮಕ್ಕಳು ಮುಖ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಾಲ್ ಮಾಡಿದ ಶಿಕ್ಷಕರು, ಅವರನ್ನು ಶಾಲೆಗೆ ಕರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ