ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ಕಾಮುಕ ಶಿಕ್ಷಕ ಇದೀಗ ಪೊಲೀಸರ ಅತಿಥಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಶಿಕ್ಷಕನಾಗಿರುವ ಭಾಸ್ಕರ್ ನಾಡಿಗೇರ್ ಎಂಬಾತ ಶಾಲೆಯ ಮಕ್ಕಳಿಗೆ ಪ್ರತಿನಿತ್ಯ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಹೆಣ್ಣು ಮಕ್ಕಳ ಅಂಗಾಗ ಸೇರಿದಂತೆ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ದನಂತೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳು ತಮ್ಮ ಪೋಷಕರಿಗೆ ಶಿಕ್ಷಕನ ಕಾಮುಕ ಚೇಷ್ಟೆ ಬಗ್ಗೆ ದೂರಿದ್ದಾರೆ. ಶಿಕ್ಷಕನ ಲೈಂಗಿಕ ದೌರ್ಜನ್ಯ ಅತಿಯಾದಾಗ ವಿಚಾರಿಸಲು ಪೋಷಕರು ಇಂದು ಏಕಾಏಕಿ ಶಾಲೆಗೆ ಬಂದಿದ್ದಾರೆ. ಈ ವೇಳೆ ಶೌಚಾಲಯದಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಮುಕ ಶಿಕ್ಷಕ ಸಿಕ್ಕಿ ಬಿದ್ದಿದ್ದಾನೆ. ಇದನ್ನು ಕಂಡು ಆಕ್ರೋಶಗೊಂಡ ಪೋಷಕರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
![]()
ಕೆ.ಆರ್.ಪೇಟೆ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ.
ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದು, 10 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಕಾಮುಕ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದರ ಬಗ್ಗೆಯೂ ಮಕ್ಕಳು ಪೋಷಕರಲ್ಲಿ ಹೇಳಿದ್ದರು. ಆದರೆ, ಶಿಕ್ಷಕರ ಬಗ್ಗೆ ಅನುಮಾನಿಸದೆ ಸುಮ್ಮನಾಗಿದ್ದರು. ಅಲ್ಲದೇ ಒಮ್ಮೆ ಶಾಲೆಗೆ ಬಂದು ಮುಖ್ಯ ಶಿಕ್ಷಕಿಯ ಬಳಿ ದೂರು ಸಹ ಹೇಳಿ ಹೋಗಿದ್ದಾರೆ. ಶಿಕ್ಷಕನ ಬಗ್ಗೆ ಎಸ್ಡಿಎಂಸಿ ಸಭೆ ಸೇರಿ ಕ್ರಮ ಕೈಗೊಳ್ಳಬೇಕು ಅಂದುಕೊಂಡಿದ್ದರು. ಆದರೆ, ದಿಢೀರ ಆಗಿ ಪೋಷಕರು ಶಾಲೆಗೆ ಬಂದಾಗ ಆತನ ಕಾಮಚೇಷ್ಟೆ ಜಗಜ್ಜಾಹೀರಾಗಿದೆ. ಇದೀಗ ಕಾಮುಕ ಶಿಕ್ಷಕನನ್ನು ವಶಕ್ಕೆ ಪಡೆದಿರುವ ಕಿಕ್ಕೇರಿ ಪೊಲೀಸರು ಈ ಸಂಬಂಧ ಶಿಕ್ಷಕನ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ: ಫೆ. 13ಕ್ಕೆ ಕರ್ನಾಟಕ ಬಂದ್: 500ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ