ಶಿವಮೊಗ್ಗ(ಜ. 31): ತರಕಾರಿ ಬೇಕಾ ತರಕಾರಿ... ಬೀನ್ಸ್ 30 ರೂ., ಈರುಳ್ಳಿ 60 ರೂ, ಮೆಣಸಿನಕಾಯಿ 10 ರೂ, ಕೋಸುಗಡ್ಡೆ 20 ರೂ. ಹೀಗೆ ತರಕಾರಿ ಮಾರಾಟ ಮಾಡಿದ್ದು ವ್ಯಾಪಾರಸ್ಥರಲ್ಲ, ಬದಲಿಗೆ ಚಿಣ್ಣರು. ಬಹಳ ಉತ್ಸಾಹದಿಂದ ತರಕಾರಿ ಮಾರಾಟವನ್ನು ಪುಟ್ಟ ಪುಟ್ಟ ಮಕ್ಕಳು ಮಾಡಿ ಹಣ ಸಂಪಾದಿಸಿದರು.
ಒಂದು ದಿನದ ಮಟ್ಟಿಗೆ ಶಾಲೆಯ ಆವರಣ, ಅಕ್ಷರಶಃ ಸಂತೆಯ ವಾತಾವರಣವಾಗಿ ಪರಿವರ್ತನೆಯಾಗಿತ್ತು. ಈ ಶಾಲೆಯ ಮಕ್ಕಳೆಲ್ಲಾ ತರಕಾರಿ ಮಾರಾಟ ಮಾಡುವ ರೈತರಾಗಿದ್ದರು. ಪೋಷಕರು, ಹಾಗೂ ಶಾಲೆಯ ಅಕ್ಕಪಕ್ಕದ ನಿವಾಸಿಗಳೆಲ್ಲಾ ಗ್ರಾಹಕರಾಗಿದ್ದರು. ಮುಗಿಬಿದ್ದು, ನಾ ಮುಂದು, ತಾ ಮುಂದು ಎಂಬಂತೆ, ತರಕಾರಿ ಖರೀದಿ ಮಾಡಿದರು.
ಶಿವಮೊಗ್ಗದ ಅಚ್ಯುತ್ ರಾವ್ ಲೇಔಟ್ ನಲ್ಲಿರುವ ಮೈ ಸ್ಕೂಲ್ ಶಾಲೆ ವತಿಯಿಂದ, ಶಾಲೆಯ ಮಕ್ಕಳಿಗಾಗಿಯೇ ವಿಭಿನ್ನ, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ್ಯವನ್ನು ಕಲಿಸುವುದರೊಂದಿಗೆ, ಅವರಲ್ಲಿ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ, ಈ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಜನರು ಕೂಡ ಮಾರುಕಟ್ಟೆಗೆ ತರಕಾರಿ ಖರೀದಿಗೆ ತೆರಳದೇ, ಇಲ್ಲಿಯೇ ಬಂದು ತರಕಾರಿ ಖರೀದಿ ಮಾಡಿದರು. ತರಕಾರಿ ಮಾರಾಟ ಮಾಡಿದ ಚಿಣ್ಣರು, ಗ್ರಾಹಕರ ಬಳಿ ಚಿಲ್ಲರೆಯೂ ಬಿಡದೇ, ಹಣ ಪಡೆದು ವ್ಯಾಪಾರ-ವಹಿವಾಟು ನಡೆಸಿದ್ದು, ಸೂಪರ್ ಆಗಿತ್ತು
ಚಿಣ್ಣರು, ಥೇಟ್ ರೈತರಂತೆ ವೇಷ ಧರಿಸಿ, ಈರುಳ್ಳಿ, ಟೊಮೆಟೋ, ಬೀನ್ಸ್, ಆಲೂಗಡ್ಡೆ, ಮೆಣಸಿಕಾಯಿ, ಕೋಸುಗಡ್ಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಕೂಗಿ ಕೂಗಿ ಜನರನ್ನು ಕರೆದು ವ್ಯಾಪಾರ ಮಾಡಿದರು. ಪೋಷಕರು ಕೂಡ, ತಮಗೆ ಅಗತ್ಯವಾದ ತರಕಾರಿಗಳನ್ನು ಚೌಕಾಸಿ ಮಾಡಿ ಖರೀದಿ ಮಾಡಿದರು. ಈ ಸಂಗತಿ ಹಾಸ್ಯಭರಿತವಾಗಿತ್ತು. ಮೋದಲೇ ಚಿಣ್ಣರು ಕಡಿಮೆ ದರಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದು, ಈ ನಡುವೆ ಮಹಿಳೆಯರ ಚೌಕಾಸಿ ವ್ಯಾಪಾರ ಮಾಡಿದ್ದನ್ನು ನೋಡಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರು ನಗೆಗಡಲಲ್ಲಿ ತೇಲಿದರು.
ಮಕ್ಕಳಲ್ಲಿ ಪಾಠ-ಆಟದ ಜೊತೆಗೆ, ಈ ರೀತಿ ವ್ಯವಹಾರಿಕ ಜ್ಞಾನವೂ ಬೆಳೆಸುವ ಉದ್ದೇಶದಿಂದ ಶಾಲೆ ಶಿಕ್ಷಕರು, ಆಯೋಜಿಸಿದ್ದ ಸಂತೆ ವ್ಯಾಪಾರ ಅರ್ಥಗರ್ಭಿತವಾಗಿತ್ತು. ಆಟ, ಪಾಠಗಳಿಗಷ್ಟೇ ಸೀಮಿತವಾಗದೇ, ಮಕ್ಕಳ ಸಂತೆ ಮೂಲಕ ಮಾಡಿಸುವ ಮೂಲಕ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರಹಾಕುವ ವಿಭಿನ್ನ-ವಿಶೇಷ ಪ್ರಯತ್ನ ಮಾಡಲಾಯಿತು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಈಕೆ ಸತ್ಯ ಹರಿಶ್ಚಂದ್ರೆ ಎಂದೇ ಫೇಮಸ್; ಪುರುಷರಿಗಿಂತಲೂ ಗಟ್ಟಿಗಿತ್ತಿ; ಆದರೆ ಬದುಕು ಕಟ್ಟಿಕೊಳ್ಳಲು ಪರದಾಟ
ಮಕ್ಕಳು ತರಕಾರಿ ವ್ಯಾಪಾರ ಮಾಡಿ ಸಖತ್ ಖುಷಿ ಪಟ್ಟು ಎಂಜಾಯ್ ಮಾಡಿದರು. ಈ ರೀತಿಯ ಸಂತೆ ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲಿ ವ್ಯಾಪಾರ ಜ್ಞಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ ಶಾಲೆಯ ಕ್ರಮ ಮೆಚ್ಚಲೇ ಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ