ವೃದ್ದಾಶ್ರಮ, ಬಾಲಮಂದಿರಗಳಂತಾದ ಜನವಸತಿ ಪ್ರದೇಶಗಳು; ಸರಕಾರಕ್ಕೆ ಇನ್ನೂ ಅರ್ಥವಾಗದ ಸಮಸ್ಯೆಗಳೇನು ಗೊತ್ತಾ?

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರಲ್ಲಿ ಬಸವನಾಡು ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದ್ದರೂ ಇಲ್ಲಿನ ಗುಳೆಗೆ ಮಾತ್ರ ಇನ್ನೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನರೇಗಾ ಯೋಜನೆಯಡಿ ನೀಡಲಾಗುವ ಕೂಲಿ ಕಡಿಮೆ ಎಂಬ ದೂರು ಒಂದೆಡೆಯಾದರೆ, ಒಂದು ಕುಟುಂಬಕ್ಕೆ ಕೇವಲ 100 ದಿನ ಮಾತ್ರ ಕೆಲಸ ಸಿಕ್ಕರೆ ಇನ್ನುಳಿದ ದಿನ ಉಪವಾಸವೇ ಗತಿ ಎಂಬ ಆತಂಕ ಮತ್ತೊಂದೆಡೆ.

news18-kannada
Updated:January 22, 2020, 9:09 PM IST
ವೃದ್ದಾಶ್ರಮ, ಬಾಲಮಂದಿರಗಳಂತಾದ ಜನವಸತಿ ಪ್ರದೇಶಗಳು; ಸರಕಾರಕ್ಕೆ ಇನ್ನೂ ಅರ್ಥವಾಗದ ಸಮಸ್ಯೆಗಳೇನು ಗೊತ್ತಾ?
ಲಂಬಾಣಿ ತಾಂಡಾ.
  • Share this:
ವಿಜಯಪುರ (ಜ. 22): ಈ ಜನವಸತಿ ಪ್ರದೇಶಕ್ಕೆ ಬಂದರೆ ಸಾಕು ಯಾವುದೋ ವೃದ್ಧಾಶ್ರಮ ಮತ್ತು ಬಾಲಮಂದಿರಗಳಿಗೆ ಬಂದ ಅನುಭವವಾಗುತ್ತದೆ. ಇಲ್ಲಿನ ಬಹುತೇಕ ಯುವಕರು, ಯುವತಿಯರು ಮತ್ತು ದಂಪತಿ ವರ್ಷದ ಆರು ತಿಂಗಳು ಊರಲ್ಲಿ ಇರುವುದೇ ಇಲ್ಲ.  ಇಂಥವರ ಕಲ್ಯಾಣಕ್ಕಾಗಿ ಸರಕಾರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈ ಜನವಸತಿಗಳು ಯಾವುವು ಮತ್ತು ಈ ಜನವಸತಿಗಳು ವೃದ್ಧಾಶ್ರಮ ಮತ್ತು ಬಾಲಮಂದಿರದಂತಾಗಲು ಕಾರಣವೇನು ಎಂಬುದಕ್ಕೆ ಒಮ್ಮೆ ಈ ಲೇಖನ ಓದಿ.

ಚುನಾವಣೆ ಬಂದಾಗ ಇಲ್ಲಿನ ಜನರನ್ನು ಕರೆಸಿಕೊಳ್ಳುವ ರಾಜಕಾರಣಿಗಳು ಮತದಾನದ ಬಳಿಕ ಇವರ ಬಗ್ಗೆ ಕ್ಯಾರೆ ಎನ್ನುವುದಿಲ್ಲ. ಹೌದು, ಇಲ್ಲಿನ ಮಕ್ಕಳು ಆರು ತಿಂಗಳಿಗೊಮ್ಮೆ ತಮ್ಮ ಪೋಷಕರ ಮುಖ ನೋಡುತ್ತವೆ. ಇಲ್ಲಿನ ಹಿರಿಯರೂ ಅಷ್ಟೇ ಆರು ತಿಂಗಳಿಗೊಮ್ಮೆ ತಮ್ಮ ಮಕ್ಕಳ ಮುಖ ನೋಡುತ್ತಾರೆ. ಉಳಿದ ಆರು ತಿಂಗಳು ಈ ಜನವಸತಿಗಳು ಅಕ್ಷರಶಃ ವೃದ್ಧಾಶ್ರಮ ಮತ್ತು ಬಾಲಮಂದಿರದಂತಾಗುತ್ತವೆ.  ನಾವು ಹೇಳ್ತಿರೋದು ಹಿಂದುಳಿದ ಮತ್ತು ದಲಿತ ಜನವಸತಿಗಳ ಬಗ್ಗೆ. ಈ ಸಮಸ್ಯೆ ರಾಜ್ಯಾದ್ಯಂತ ಇದ್ದರೂ ಬಸವನಾಡು ವಿಜಯಪುರ ಜಿಲ್ಲೆಯೊಂದರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಸಾಕು. ಇಡೀ ಈ ಜನಾಂಗದ ಮೂಲ ಸಮಸ್ಯೆ ಅರಿವಾಗುತ್ತದೆ.

ವಿಜಯಪುರ ಜಿಲ್ಲೆಯೊಂದರಲ್ಲಿಯೇ ಸುಮಾರು 328 ಲಂಬಾಣಿ ತಾಂಡಾಗಳಿವೆ.  ಈ ಎಲ್ಟಿಗಳಲ್ಲಿ 3 ಲಕ್ಷ 14 ಸಾವಿರದ 85 ಜನ ವಾಸಿಸುತ್ತಾರೆ. ಇವರಲ್ಲಿ ಅರ್ಧದಷ್ಟು ಜನ ಅರ್ಧ ವರ್ಷ ತಾಂಡಾದಲ್ಲಿ ಇರುವುದೇ ಇಲ್ಲ. ಉದ್ಯೋಗ ಅರಸಿ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಆ ಭಾಗದಲ್ಲಿ ಕಬ್ಬು ಕಟಾವು ಮತ್ತು ಕಟ್ಟಡ ಕಾಮಗಾರಿಗೆ ತರಳಿ, ವಿರಾಮಕ್ಕೆ ಬಂದಾಗ ಮರಳಿ ತಮ್ಮ ತಾಂಡಾಗಳಿಗೆ ಬರುತ್ತಾರೆ.  ಕಿತ್ತು ತಿನ್ನುವ ಬಡತನ, ಹೆಚ್ಚಿನ ಹಣ ಗಳಿಕೆಯ ಆಸೆ ಇಲ್ಲಿನ ದಂಪತಿ ತಮ್ಮ ಮಕ್ಕಳು ಹಾಗೂ ಹಿರಿಯನ್ನು ತಾಂಡಾಗಳಲ್ಲಿಯೇ ಬಿಟ್ಟು ಹೋಗುವಂತೆ ಮಾಡುತ್ತಿದೆ.  ಇಲ್ಲಿನ ಬಹುತೇಕ ತಾಂಡಾಗಳಿಗೆ ಹೋದರೆ ಸಾಕು ಒಂದು ವೃದ್ಧರು ಇಲ್ಲವೆ ಮಕ್ಕಳೇ ಕಾಣ ಸಿಗುತ್ತವೆ.  ಹಲವಾರು ಮನೆಗಳಗೆ ಕೀಲಿ ಹಾಕಿ ಗುಳೆ ಹೋಗಿರುತ್ತಾರೆ ಇಲ್ಲಿನ ಜನ.  ವಯಸ್ಸಾದವರಿಗೆ ಅನಾರೋಗ್ಯ ಸಮಸ್ಸೆ, ದುಡಿಯಲು ಆಗದಿರುವ ಕಾರಣ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಈ ತಾಂಡಾಗಳಲ್ಲಿಯೇ ಬಿಟ್ಟು ಯುವಕ, ಯುವತಿಯರು ಮತ್ತು ದಂಪತಿಗಳು ಗುಳೆ ಹೋಗುತ್ತಿದ್ದಾರೆ ಎನ್ನುತ್ತಾರೆ ದೇವರ ಹಿಪ್ಪರಗಿ ತಾಂಡಾದ ಹಿರಿಯ ಜೀವಗಳಾದ ಮಾಧು ಶಿವು ಚವ್ಹಾಣ, ಕೂಸು ಕಾಳು ರಾಠೋಡ ಮತ್ತು ದೇಸು ಹಿಮಲು ರಾಠೋಡ.  ಈಗ ತಾಂಡಾದಲ್ಲಿರುವ ವೃದ್ಧರೂ ಈ ಹಿಂದೆ ಇದೇ ಪರಿಸ್ಥಿತಿ ಎದುರಿಸಿದ್ದಾರೆ.

ಲಂಬಾಣಿ ತಾಂಡಾದ ಮನೆ ಮುಂದೆ ಮಕ್ಕಳು.


ಇಲ್ಲಿನ ಮಕ್ಕಳಿಗೆ ವರ್ಷದ ಆರು ತಿಂಗಳು ತಂದೆ-ತಾಯಿಯ ಪ್ರೀತಿ ಸಿಗುವುದಿಲ್ಲ. ಅಜ್ಜ-ಅಜ್ಜಿಯೇ ಇವರಿಗೆ ಈ ಸಮಯದಲ್ಲಿ ಎಲ್ಲ ಎನ್ನುವಂತಾಗಿದೆ. ಇದು ಮುಗ್ದ ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿದೆ. ತಂದೆ-ತಾಯಿಯಿಂದ ದೂರ ಇರುವವರ ಪರಿಸ್ಥಿತಿ ತಮಗೆ ಎಲ್ಲಿಲ್ಲದ ಸಂಕಷ್ಟ ತಂದೊಡ್ಡಿದೆ ಎನ್ನುತ್ತಾರೆ ತಾಂಡಾ ಮಕ್ಕಳಾದ ಚಿನ್ನು ರೇವು ರಾಠೋಡ ಮತ್ತು ರೋಹಿತ ಪವಾರ. ಜನ ಗುಳೆ ಹೋಗುವುದನ್ನು ತಡೆಗಟ್ಟಲು ಕೇಂದ್ರ ಸರಕಾರದ ನರೇಗಾ ಯೋಜನೆ ಜಾರಿಗೆ ತಂದಿದೆ. ಅದರಡಿ ಪ್ರತಿವರ್ಷ ಜಿಲ್ಲಾ ಪಂಚಾಯಿತಿ ಮಾನವ ಉದ್ಯೋಗ ಸೃಜನ ದಿನಗಳನ್ನೂ ಮಾಡುತ್ತಿದೆ. ಆದರೆ, ಇದಾವುದೂ ಪ್ರಯೋಜನವಾಗಿಲ್ಲ. ನರೇಗಾ ಯೋಜನೆ ಸಮಗ್ರ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ, ಪ್ರತಿವರ್ಷ ಮಾನವ ಸೃಜನ ದಿನಗಳ ಸಂಖ್ಯೆ ಮತ್ತು ಅದರ ಸಾಧನೆ ಹೆಚ್ಚುತ್ತಲೇ ಇದೆ. ಇದು ಸರಕಾರದ ಜನಪರ ಯೋಜನೆಗಳಿಗೆ ಸಾಕ್ಷಿ ಎನ್ನುತ್ತಾರೆ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ.

ಇದನ್ನು ಓದಿ: ಶಾಲಾ ಮಕ್ಕಳಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಕಾಮದ ಪಾಠ ಮಾಡಿ ಪೇಚಿಗೆ ಸಿಲುಕಿದ ವಿಜ್ಞಾನದ ಮೇಷ್ಟ್ರು

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರಲ್ಲಿ ಬಸವನಾಡು ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದ್ದರೂ ಇಲ್ಲಿನ ಗುಳೆಗೆ ಮಾತ್ರ ಇನ್ನೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನರೇಗಾ ಯೋಜನೆಯಡಿ ನೀಡಲಾಗುವ ಕೂಲಿ ಕಡಿಮೆ ಎಂಬ ದೂರು ಒಂದೆಡೆಯಾದರೆ, ಒಂದು ಕುಟುಂಬಕ್ಕೆ ಕೇವಲ 100 ದಿನ ಮಾತ್ರ ಕೆಲಸ ಸಿಕ್ಕರೆ ಇನ್ನುಳಿದ ದಿನ ಉಪವಾಸವೇ ಗತಿ ಎಂಬ ಆತಂಕ ಮತ್ತೊಂದೆಡೆ. ಹೀಗಾಗಿ ಲಂಬಾಣಿ ತಾಂಡಾಗಳ ಜನರ ಗುಳೆ ತಪ್ಪುತ್ತಿಲ್ಲ. ಇಂಥ ಗುಳೆ ಹೋಗುವ ಜನರ ನೆರವಿಗೆ ಜಾರಿಗೆ ತರಲಾಗಿರುವ ನರೇಗಾ ಯೋಜನೆಯೂ ಇವರಿಗೆ ವರವಾಗುತ್ತಿಲ್ಲ. ಇದಕ್ಕೆ ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲಂಬಾಣಿ ತಾಂಡಾಗಳು ಭವಿಷ್ಯದಲ್ಲಿ ಶಾಶ್ವತವಾಗಿ ವೃದ್ಧಾಶ್ರಮ ಮತ್ತು ಬಾಲ ಮಂದಿರಗಳಾಗುವುದರಲ್ಲಿ ಸಂಶಯವಿಲ್ಲ.
First published: January 22, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading