Satish Jarkiholi: ಬೆಳಗಾವಿ ಲೋಕಸಭಾ ಉಪ ಚುನಾವಣೆ; ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ

Belagavi Lok sabha Bypolls: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ಸತೀಶ್ ಜಾರಕಿಹೊಳಿ

ಮಾಜಿ ಸಚಿವ ಸತೀಶ್ ಜಾರಕಿಹೊಳಿ

  • Share this:
ಬೆಂಗಳೂರು (ಜ. 29): ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಶತಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಜೊತೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್​ನಿಂದಲೂ ಸತೀಶ್ ಜಾರಕಿಹೊಳಿಯನ್ನು ಬೆಳಗಾವಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವಂತೆ ಸೂಚನೆ ಬಂದಿದೆ. ಆದರೆ, ಈ ಬಗ್ಗೆ ಸತೀಶ್ ಜಾರಕಿಹೊಳಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸತೀಶ್ ಜಾರಕಿಹೊಳಿ ಅವರಿಗೆ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆದರೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾದ ಕೂಡಲೆ ನಮ್ಮ ಪಕ್ಷದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಸತೀಶ್ ಜಾರಕಿಹೊಳಿ ಅವರೇ ಹೆಸರೇ ಬಹುತೇಕ ಅಂತಿಮವಾಗಿದ್ದು, ಅವರನ್ನೇ ಕಣಕ್ಕಿಳಿಸುವಂತೆ ಹೈಕಮಾಂಡ್ ಕೂಡ ಸೂಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಖಾತೆ ಬಗ್ಗೆ ಅಸಮಾಧಾನವಿಲ್ಲ, ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ

ಸತೀಶ್ ಜಾರಕಿಹೊಳಿ ಕಣಕ್ಕಿಳಿದರೆ ಸೋದರರಿಂದಲೂ ಪರೋಕ್ಷ ನೆರವು ಸಿಗಬಹುದು ಎಂಬುದು ಕಾಂಗ್ರೆಸ್ ಪ್ಲಾನ್ ಎನ್ನಲಾಗಿದೆ. ಲಿಂಗಾಯಿತ ಸಮುದಾಯದ ಹೊರತಾಗಿ ಅಹಿಂದ ಮತಗಳು ಕ್ರೋಢೀಕರಣವಾಗುವ ಲೆಕ್ಕಾಚಾರವನ್ನು ಕೂಡ ಕಾಂಗ್ರೆಸ್ ಹಾಕಿಕೊಂಡಿದೆ. ಸಂಪನ್ಮೂಲ ಕ್ರೋಢೀಕರಣದಲ್ಲೂ ಕೂಡ ಸತೀಶ್ ಎತ್ತಿದ ಕೈ ಎಂಬುದು ಕೈ ನಾಯಕರ ನಿಲುವು. ಹೀಗಾಗಿ, ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸತೀಶ್ ಜಾರಕಿಹೊಳಿಗಿಂತ ಉತ್ತಮ ಅಭ್ಯರ್ಥಿ ಬೇರೊಬ್ಬರಿಲ್ಲ ಅಂತಿದೆ ಕಾಂಗ್ರೆಸ್ ಮೂಲಗಳು.

ಈ ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಕೂಡ ಬೆಳಗಾವಿ ಲೋಕಸಭಾ ಚುನಾವಣೆ ಟಿಕೆಟ್​ಗೆ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್​ನಿಂದಲೂ ಸತೀಶ್ ಜಾರಕಿಹೊಳಿ ಬಗ್ಗೆ ಒಲವು ಹೆಚ್ಚಾಗಿದೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ಆದರೆ, ಒಂದುವೇಳೆ ಹೈಕಮಾಂಡ್ ನನ್ನ ಹೆಸರನ್ನೇ ಅಂತಿಮಗೊಳಿಸಿದರೆ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಈ ಹಿಂದೆ ಸತೀಶ್ ಜಾರಕಿಹೊಳಿ ಹೇಳಿದ್ದರು.

ಕೇಂದ್ರ ಸರ್ಕಾರದಲ್ಲಿ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಅಂಗಡಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಾವನ್ನಪ್ಪಿದ್ದರು. ಕೊರೋನಾದಿಂದ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಜಯ ಗಳಿಸಿದ್ದ ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಆದರೆ, ಉಪ ಚುನಾವಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
Published by:Sushma Chakre
First published: