Satish Jarkiholi: ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸ್ಪರ್ಧೆ; ರಾಜಕೀಯ ಲೆಕ್ಕಾಚಾರಗಳೇನು?

Belagavi Lok Sabha Bypolls: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿ ಅವಮಾನಕ್ಕೆ ಒಳಗಾಗಿದ್ದಾರೆ. ಇದು ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ನಡುವೆ ಸತೀಶ್ ಜಾರಕಿಹೊಳಿ ಚುನಾವಣೆಗೆ ಸ್ಪರ್ಧೆಗೆ ಮುಂದಾಗಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ (ಮಾ. 25): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 17ರಂದು ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ಬೆಳವಣಿಗೆ ಹಿಂದ ಹಲವು ರಾಜಕೀಯ ಲೆಕ್ಕಾಚಾರಗಳು ಜಿಲ್ಲೆಯಲ್ಲಿ ಆರಂಭವಾಗಿದೆ. ಸತೀಶ ಜಾರಕಿಹೊಳಿ ಸ್ಪರ್ಧೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಚರ್ಚೆ ಶುರುವಾಗಿದ್ದು, ಬಿಜೆಪಿ ಇದಕ್ಕೆ ಪ್ರತ್ಯಾಸ್ತ್ರವಾಗಿ ಯಾರನ್ನು  ಕಣಕ್ಕೆ ಇಳಿಸಿದೆ ಎಂಬ ಕುತೂಹಲ ಹುಟ್ಟಿಸಿದೆ.

ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲೆಯಲ್ಲಿ ತನ್ನದೇ ಹಿಡಿತ ಹೊಂದಿರೋ ಸತೀಶ್ ಜಾರಕಿಹೊಳಿ ಇದೀಗ ಲೋಕಸಭೆ ಉಪಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.  ಎರಡು ಸಲ ಎಂಎಲ್ ಸಿ ಹಾಗೂ ಸತತ ಮೂರು ಬಾರಿ ಯಮಕನಮರಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ಅಲ್ಲದೇ ಸದ್ಯ ಕಾಂಗ್ರೆಸ್ ಪಕ್ಷ ಕಾರ್ಯಾಧ್ಯಕ್ಷರಾಗಿ ಸಹ ಕೆಲಸ ಮಾಡುತ್ತಿದ್ದು, ಸೇವಾದಳದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಾಜಕೀಯ ಅಷ್ಟೇ ಅಲ್ಲದೇ ಸಮಾಜ ಸೇವೆ, ಉದ್ಯಮ ಹಾಗೂ ಮೂಢ ನಂಬಿಕೆ ವಿರುದ್ಧ ಹೋರಾಟದಲ್ಲಿ ಸತೀಶ್ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆಗಿರೋ ಸಂಘಟನೆಯನ್ನು ಹೊಂದಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡು ಸಲ ಕೆಲಸ ಮಾಡಿರೋ ಅನುಭವ ಸಹ ಇದೆ.

ಇದನ್ನೂ ಓದಿ: 224 ಶಾಸಕರ ಬಗ್ಗೆ ತನಿಖೆಯಾಗಲಿ ಎಂಬ ಹೇಳಿಕೆ ನೀಡಿ ಇದೀಗ ವಿಷಾದ ವ್ಯಕ್ತಪಡಿಸಿದ ಸಚಿವ ಕೆ. ಸುಧಾಕರ್!

ಸದ್ಯ, ಸತೀಶ್ ಜಾರಕಿಹೊಳಿ ಅವರ ಸಹೋದರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿ ಅವಮಾನಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೇ ಪವರ್ ಫುಲ್ ಖಾತೆಯನ್ನು ಕಳೆದುಕೊಂಡಿದ್ದಾರೆ, ಇದು ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ನಡುವೆ ಸತೀಶ್ ಜಾರಕಿಹೊಳಿ ಚುನಾವಣೆಗೆ ಸ್ಪರ್ಧೆಗೆ ಮುಂದಾಗಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.  ಈ ಹಿನ್ನೆಲೆಯಲ್ಲಿ ಅಹಿಂದ ಮತಗಳನ್ನು ಕ್ರೋಢೀಕರಿಸಲು ಸತೀಶ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿದೆ. ಇನ್ನೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಲ್ಲ. ಸತೀಶ ಜಾರಕಿಹೊಳಿಯನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸಿದರೆ ಇಲ್ಲಿನ ಹಲವು ನಾಯಕರಿಗೆ ಅನುಕೂಲವಾಗಲಿದೆ, ಇದರಿಂದ ಹೈಕಮಾಂಡ್ ಮೇಲೆ ಒತ್ತಡ ತಂದು ಸತೀಶ್ ಜಾರಕಿಹೊಳಿಗೆ ಟಿಕೆಟ್ ಕೊಡಿಸಲಾಗಿದೆ ಎಂಬ ಮಾತು ಸಹ ಇದೆ.

ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ನಿಲ್ಲುವುದು ಪಕ್ಕಾ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಹಲವು ರಾಜಕೀಯ ಬೆಳವಣಿಗೆ ನಡೆದಿವೆ. ಬದಲಾದ ಲೆಕ್ಕಾಚಾರದಲ್ಲಿ ಮತ್ತೆ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. 20ಕ್ಕೂ ಹೆಚ್ಚು ಆಕಾಂಕ್ಷಿಗಳು ಬಿಜೆಪಿಯಲ್ಲಿ ಇದ್ದು, ಹಲವರು ದೆಹಲಿ ಮಟ್ಟದಲ್ಲಿ ಲಾಬಿಯನ್ನು ಆರಂಭಿಸಿದ್ದಾರೆ. ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಜಾತಿ ಮತ್ತು ಯುವಕರಿಗೆ ಮಣೆ ಹಾಕಿದಂತೆ ಆಗುತ್ತದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೇ ಇನ್ನೂ ಎರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಅಂತಿಮವಾಗೋ ಸಾಧ್ಯತೆ ಇದೆ.
Published by:Sushma Chakre
First published: