ರಾಹು ಕಾಲ ನೋಡಿ ನಾಮಪತ್ರ....! ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲ್ಲ - ಇದು ಜಾರಕಿಹೊಳಿ ಸ್ಟೈಲ್..!


Updated:April 17, 2018, 3:25 PM IST
ರಾಹು ಕಾಲ ನೋಡಿ ನಾಮಪತ್ರ....! ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲ್ಲ - ಇದು ಜಾರಕಿಹೊಳಿ ಸ್ಟೈಲ್..!
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ಏ. 17): ಮೇ 12ರ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.  ದೇಶದಲ್ಲಿ ಗಮನ ಸೆಳೆದಿರೋ ಈ ಚುನಾವಣೆ ಎಲ್ಲಾ ರಾಜಕೀಯ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಬಾರಿ ಹೇಗಾದ್ರು ಮಾಡಿ ಗೆಲ್ಲಲೇಬೇಕು ಎಂದು ಎಲ್ಲರು ಹಠಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಒಳ್ಳೆಯ ದಿನ, ಗಳಿಗೆ, ಮುಹೂರ್ತ ನೋಡಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಾರೆ.  ಶತಾಯ ಗತಾಯ ಗೆಲ್ಲಲೆಂದು ಪ್ರತಿ ಗ್ರಾಮ, ಪ್ರತಿ ಮನೆಗೆ ಭೇಟಿ ನೀಡಿ ತಮಗೆ ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಬೆಳಗಾವಿಯ ಪವರ್​ಫುಲ್ ರಾಜಕಾರಣಿ ಸತೀಶ್ ಜಾರಕಿಹೊಳಿ ಮಾತ್ರ ಇದಕ್ಕೆ ಅಪವಾದ. ಇವರು ರಾಹು ಕಾಲದಲ್ಲೇ ನಾಮಪತ್ರ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ, ನಾಮಪತ್ರ ಸಲ್ಲಿಸಿದ ಮೇಲೆ ಕ್ಷೇತ್ರಕ್ಕೆ ಪ್ರಚಾರಕ್ಕೂ ಇವರು ಹೋಗಲ್ವಂತೆ.

ಸತೀಶ್ ಜಾರಕಿಹೊಳಿ ಕಳೆದ ಎರಡು ಚುನಾವಣೆಯಲ್ಲಿ ಬೆಳಗಾವಿಯ ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಇದೀಗ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.

ಈ ಬಾರಿ ಜ್ಯೋತಿಷಿಗಳ ಪ್ರಕಾರ ಇರೋ ರಾಹುಕಾಲ ಹಾಗೂ ಅತ್ಯಂತ ಕೆಟ್ಟ ದಿನವೇ ಇವರು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಕಳೆದ ಭಾರೀಯೂ ಇದೇ ರೀತಿಯ ಪ್ರಯೋಗ ಮಾಡಿದ್ದ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ 24,350 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿಯೂ ಸ್ಥಾನಮಾನ ಗಿಟ್ಟಿಸಿದ್ದರು.

ಈ ಬಾರಿ ಸತೀಶ್ ಜಾರಕಿಹೊಳಿ ಕ್ಷೇತ್ರದ 5 ಜನರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಯಾವುದೇ ಮೆರವಣಿಗೆ, ಆಡಂಬರ ಮಾಡುವುದಿಲ್ಲ. ಇನ್ನು, ನಾಮಪತ್ರ ಸಲ್ಲಿಕೆ ಬಳಿಕ ಕ್ಷೇತ್ರದಲ್ಲಿ ಪ್ರಚಾರ ನಡೆಸಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಮಾಡಿದ ಅಭಿವೃದ್ಧಿ ಕೆಲಸ ನೋಡಿ ನನ್ನನ್ನು ಈ ಬಾರಿ 90 ಸಾವಿರಕ್ಕೂ ಹೆಚ್ಚು ಮತವನ್ನು ಮತದಾರರ ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಯಮಕನಮರಡಿ ಕ್ಷೇತ್ರ ಹೊರತುಪಡಿಸಿ ರಾಜ್ಯದ ಇನ್ನಿತರ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಸತೀಶ ಜಾರಕಿಹೊಳಿ ಪ್ರಚಾರ ನಡೆಸಲಿದ್ದಾರೆ.

ಈಗಾಗಲೇ ಮೂಢನಂಬಿಕೆ ವಿರುದ್ಧ ಸ್ಮಶಾನದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಜಾರಕಿಹೊಳಿ, ಇದೀಗ ಚುನಾವಣೆಯಲ್ಲಿಯೂ ಈ ರೀತಿಯ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಯಮಕನಮರಡಿ ಕ್ಷೇತ್ರದ ಮತದಾರರು ಇದಕ್ಕೆ ಯಾವ ರೀತಿ ಸ್ಪಂದನೆ ನೀಡಲಿದ್ದಾರೆ ಎಂಬುದು ಮೇ 15ಕ್ಕೆ ಗೊತ್ತಾಗಲಿದೆ.
First published: April 17, 2018, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading