ರಮೇಶ್ ಜಾರಕಿಹೊಳಿ ರೆಬೆಲ್ ಆಗಲು ಏನು ಕಾರಣ? ಕೌಟುಂಬಿಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಅವರ ಕುಟುಂಬದ ಸಂಪೂರ್ಣ ನಿಯಂತ್ರಣ ಮಾಡುವ ಶಕ್ತಿ ಮತ್ತು ಅಧಿಕಾರ ಅವರ ಅಳಿಯ ಅಂಬಿರಾವ್ ಪಾಟೀಲ್ ಅವರಲ್ಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ.

news18
Updated:April 23, 2019, 9:57 PM IST
ರಮೇಶ್ ಜಾರಕಿಹೊಳಿ ರೆಬೆಲ್ ಆಗಲು ಏನು ಕಾರಣ? ಕೌಟುಂಬಿಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • News18
  • Last Updated: April 23, 2019, 9:57 PM IST
  • Share this:
ಬೆಳಗಾವಿ(ಏ. 23): ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಮುಂಬೈ-ಕರ್ನಾಟಕ ಭಾಗದಲ್ಲಿ ಜಾರಕಿಹೊಳಿ ಸಹೋದರರ ಪ್ರಭಾವ ಬಹಳ ಆಳವಾದದ್ದು. ಈ ಸಹೋದರರು ವಿವಿಧ ಪಕ್ಷಗಳಲ್ಲಿದ್ದರೂ ವೈಯಕ್ತಿಕವಾಗಿ ಯಾವತ್ತೂ ಕಚ್ಚಾಡಿದವರಲ್ಲ. ಆದರೆ, ವರ್ಷದ ಹಿಂದೆ ರಮೇಶ್ ಜಾರಕಿಹೊಳಿ ಅವರು ಆಪರೇಷನ್ ಕಮಲದ ದಾರಿ ಹಿಡಿದ ನಂತರದಿಂದ ಸಹೋದರರ ಸವಾಲುಗಳು ಹೆಚ್ಚಾಗಿವೆ. ರಾಜಕೀಯವಾಗಿ ಮತ್ತು ವೈಯಕ್ತಿವಾಗಿ ಸಂಬಂಧಗಳು ಬಿರುಕುಬಿಟ್ಟಿವೆ. ಸತೀಶ್ ಜಾರಕಿಹೊಳಿ ಎಷ್ಟೇ ಮನವಿ ಮಾಡಿದರೂ ಆಪರೇಷನ್​ನ ಪ್ರಯತ್ನವನ್ನು ರಮೇಶ್ ಕೈಬಿಟ್ಟಿಲ್ಲ. ಕಾಂಗ್ರೆಸ್ಸನ್ನೂ ತ್ಯಜಿಸದೇ ಕಾಂಗ್ರೆಸ್ ಶಾಸಕರನ್ನೂ ಬಿಡದೇ ಕಾಡುತ್ತಿರುವ ರಮೇಶ್ ಅವರಿಗೆ ಸತೀಶ್ ಜಾರಕಿಹೊಳಿ ಬುದ್ಧಿ ಹೇಳಲು ಸಾಕಷ್ಟು ವಿಫಲ ಯತ್ನ ಕೂಡ ಮಾಡಿದ್ಧಾರೆ. ರಮೇಶ್ ಅವರಿಗೆ ಅತ್ಯಾಪ್ತರಾಗಿದ್ದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದು ಪರಿಸ್ಥಿತಿ ನಿಭಾಯಿಸುವ ಪ್ರಯತ್ನವನ್ನೂ ಸತೀಶ್ ಜಾರಕಿಹೊಳಿ ಮಾಡಿದರು. ಇದ್ಯಾವುದೂ ಫಲಪ್ರದವಾಗಿಲ್ಲ.

ಇದನ್ನೂ ಓದಿ: 'ಸತೀಶ್​ ಜಾರಕಿಹೊಳಿಗೆ ತಲೆ ಕೆಟ್ಟಿದೆ, ಶೀಘ್ರವೇ ರಾಜೀನಾಮೆ ಕೊಡ್ತೇನೆ'; ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಟ್ಟ ರಮೇಶ್​ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಅವರು ಕತ್ತಲಲ್ಲಿ ಕುಳಿತು ಕಲ್ಲು ಹೊಡೆಯುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಹೋಗಿ ನೋಡಲಿ ಎಂದು ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಅದಾದ ಬೆನ್ನಲ್ಲೇ ರಮೇಶ್ ಅವರು ಸತೀಶ್ ಅವರ ಯಮಕನಮರಡಿ ಕ್ಷೇತ್ರದಲ್ಲಿ ರಾಜಾರೋಷವಾಗಿಯೇ ಹೋಗಿ ಕೈ ಕಾರ್ಯಕರ್ತರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು. ಇದರೊಂದಿಗೆ ಜಾರಕಿಹೊಳಿ ಸಹೋದರರ ಕಚ್ಚಾಟ ಬೀದಿಗೆ ಬಂದಂತಾಯಿತು.

ಅಳಿಯ ಅಂಬಿರಾವ್ ಎಂಬ ಶಕ್ತಿ:

ಇವತ್ತು ಸತೀಶ್ ಜಾರಕಿಹೊಳಿ ಅವರು ಕಹಿ ಸತ್ಯವೊಂದನ್ನು ಹೊರಹಾಕಿದ್ದಾರೆ. ತಮ್ಮ ಸಹೋದರ ರಮೇಶ್ ಅವರು ರೆಬೆಲ್ ಯಾಕಾಗಿದ್ದಾರೆ? ಅವರ ಹಿಂದೆ ಯಾರಿದ್ಧಾರೆ? ಎಂಬಿತ್ಯಾದಿ ವಿವರವನ್ನು ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ರೀತಿಯ ವರ್ತನೆಗೆ ಅವರ ಅಳಿಯ ಅಂಬಿರಾವ್ ಪಾಟೀಲ್ ಅವರು ಕಾರಣರೆಂದು ಸತೀಶ್ ಜಾರಕಿಹೊಳಿ ಹೇಳುತ್ತಾರೆ.

“ನಮ್ಮ ಕುಟುಂಬವನ್ನು ನಿಯಂತ್ರಣ ಮಾಡುವ ಶಕ್ತಿ ಅಂಬಿರಾವ್​ಗೆ ಇದೆ. ಅವರಿಗೆ ರಮೇಶ್ ಅವರೇ ಸಂಪೂರ್ಣ ಅಧಿಕಾರ ಕೊಟ್ಟಿದ್ಧಾರೆ. ಲಖನ್ ಹೊರಗೆ ಬರೋದಕ್ಕೂ ಆತನೇ ಕಾರಣ” ಎಂದು ಸತೀಶ್ ಜಾರಕಿಹೊಳಿ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.

ಈ ವಿಡಿಯೋ ನೋಡಿ: ರಮೇಶ್ ಜಾರಕಿಹೊಳಿ ಬಗ್ಗೆ ಕೌಟುಂಬಿಕ ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಕಠಿಣ ಕ್ರಮಕ್ಕೆ ಸತೀಶ್ ಆಗ್ರಹ:

ರಮೇಶ್ ಜಾರಕಿಹೊಳಿ ತಾನು ತಾಂತ್ರಿಕವಾಗಿ ಕಾಂಗ್ರೆಸ್​ನಲ್ಲಿದ್ದೇನಷ್ಟೇ ಎಂಬ ಅಭಿಪ್ರಾಯವನ್ನು ಸತೀಶ್ ಒಪ್ಪಿಕೊಳ್ಳುತ್ತಾರೆ. ರಮೇಶ್ ಅವರು ಒಂದು ವರ್ಷದಿಂದ ತಾಂತ್ರಿಕವಾಗಿಯಷ್ಟೇ ಕಾಂಗ್ರೆಸ್​ನಲ್ಲಿದ್ದಾರೆ. ಸರಕಾರ ಬೀಳಿಸೋಕೆ ಅವರು ಸಾಕಷ್ಟು ಪ್ರಯತ್ನ ಪಟ್ಟರು. ಹಲವು ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋದರು. ಈಗಲೂ ಕೂಡ ರಮೇಶ್ ಸುಮ್ಮನೆ ಕೂರುವವರಲ್ಲ. ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅವರು ಸೋಲುವವರೆಗೂ ಅಥವಾ ಅವರ ಎದುರಾಳಿ ಸೋಲುವವರೆಗೂ ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಇವರ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುತ್ತದೆ ಎಂದು ಸತೀಶ್ ಜಾರಕಿಹೊಳಿ ಎಚ್ಚರಿಸಿದ್ದಾರೆ.

ಹುತ್ತಕ್ಕೆ ಬಂದು ಸೇರಿದ ಹಾವು ರಮೇಶ್:

ತಮ್ಮ ಸೋದರ ರಮೇಶ್ ಜಾರಕಿಹೊಳಿ ವಿರುದ್ಧ ಟೀಕೆ ತೀವ್ರಗೊಳಿಸಿದ ಸತೀಶ್ ಜಾರಕಿಹೊಳಿ, ಹುತ್ತದ ಹಾವಿಗೆ ಹೋಲಿಕೆ ಮಾಡಿದ್ಧಾರೆ.

“ರಮೇಶ್ ಮನೆಯಲ್ಲಿ ಮಲಗಿದ್ದಾಗ ನಾವು ಅವರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಈ ಬಿಸಿಲಲ್ಲಿ ಓಡಾಡಿ ಜನರನ್ನೆಲ್ಲಾ ಸಂಘಟನೆ ಮಾಡಿದ್ದು ನಾವು. ಇರುವೆಗಳು ಕಟ್ಟಿದ ಹುತ್ತಕ್ಕೆ ಹಾವು ಬಂದು ಸೇರಿಕೊಂಡಂತೆ ಇವರು ಇದ್ದಾರೆ. ಇವರಿಗೆ ಹುತ್ತ ಕಟ್ಟೋಕೆ ಬರಲ್ಲ. ಕಟ್ಟಿರೋ ಗೂಡಲ್ಲಿ ಬಂದು ಸೇರಿಕೊಂಡು ಮಜಾ ಮಾಡುತ್ತಾರೆ” ಎಂದು ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ರಾಜೀನಾಮೆ ಹೇಳಿಕೆ, ಮೈತ್ರಿ ನಾಯಕರಲ್ಲಿ ಹೆಚ್ಚಿದ ಆತಂಕ​; ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ದೋಸ್ತಿ ಮುಖಂಡರ ಉಪಾಯವೇನು?

ಈ ಜಾರಕಿಹೊಳಿ ಬ್ರದರ್ಸ್ ಯಾರ್ಯಾರು?

ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದಲ್ಲಿ ಐವರು ಸಹೋದರರಿದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ-ನಾಯಕ ಸಮುದಾಯಕ್ಕೆ ಸೇರಿದ ಈ ಕುಟುಂಬದವರು ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮೂಲಕ ಪ್ರಭಾವಿಗಳಾಗಿ ಪೊಡಮೂಡಿದ್ದಾರೆ. ಈ ಸಹೋದರರು ಮುಂಬೈ-ಕರ್ನಾಟಕ ಭಾಗದಲ್ಲಿ ಕೆಲ ಡಿಸ್ಟಿಲರಿಗಳು, ಶಿಕ್ಷಣ ಸಂಸ್ಥೆಗಳ ಮಾಲೀಕರೂ ಆಗಿದ್ದಾರೆ. ಈ ಭಾಗದ ಅನೇಕ ಜಿಲ್ಲೆಗಳಲ್ಲಿ ಇವರ ಪ್ರಭಾವವಿದೆ. ರಮೇಶ್ ಹಿರಿಯಣ್ಣನಾದರೆ, ಸತೀಶ್ ಜಾರಕಿಹೊಳಿ ಎರಡು ವರ್ಷ ಕಿರಿಯವರು. ಅವರ ನಂತರ ಬಾಲಚಂದ್ರ, ಭೀಮಶಿ ಮತ್ತು ಲಖನ್ ಜಾರಕಿಹೊಳಿ ಈ ಕುಟುಂಬದ ಇತರ ಸದಸ್ಯರು.

ಒಂದೇ ಪಕ್ಷದಲ್ಲಿರದ ಈ ಸಹೋದರರು ಬೇರೆ ಬೇರೆ ಪಕ್ಷಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿರುತ್ತಾರೆ. ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿಯಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಆದರೆ, ಈ ಕುಟುಂಬದ ಸದಸ್ಯರು ರಾಜಕೀಯವಾಗಿ ವಿರೋಧಿಗಳಾದರೂ ಕೌಟುಂಬಿಕವಾಗಿ ಒಗ್ಗಟ್ಟಿನಿಂದಿದ್ದವರು.

ಇದನ್ನೂ ಓದಿ: ತಪ್ಪಾಯಿತೆಂದರೂ ಬಿಡದ ನ್ಯಾಯಾಲಯ; ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟೀಸ್

ಮಾನವ ಬಂಧುತ್ವ ವೇದಿಕೆ ಸಂಘಟನೆ ಮೊದಲಾದವುಗಳ ಮೂಲಕ ಜನರನ್ನು ಸಂಘಟಿಸಿ ಸೆಳೆಯುವ ಹಂತಕ್ಕೆ ಹೋಗಿದ್ದು ಸತೀಶ್ ಜಾರಕಿಹೊಳಿ ಅವರು ಮಾತ್ರವೇ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ರೆಬೆಲ್ ಆಗಿರುವುದು ಕುಟುಂಬದಲ್ಲಿ ಪವರ್ ಸ್ಟ್ರಗಲ್ ನಡೆಯುತ್ತಿರುವುದರ ಸೂಚನೆ ಇರಬಹುದೆಂದು ಅಂದಾಜಿಸಬಹುದು.

ಮಧ್ಯಸ್ಥಿಕೆಗೆ ಬಾಲಚಂದ್ರ ಸಿದ್ಧ:

ಇದೇ ವೇಳೆ, ಬಿಜೆಪಿಯಲ್ಲಿರುವ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಕುಟುಂಬದಲ್ಲಾಗಿರುವ ಭಿನ್ನಮತ ಶೀಘ್ರದಲ್ಲೇ ಶಮನ ಆಗಲಿದೆ ಎಂದು ವಿಶ್ವಾಸಪಟ್ಟಿದ್ದಾರೆ. ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಇಬ್ಬರೂ ಹಿರಿಯರಾಗಿದ್ದು, ಕೂತು ಮಾತಾಡಿ ಭಿನ್ನಮತದ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಅವರಿಬ್ಬರ ವಿವಾದ ಬಗೆಹರಿಸಲು ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ಇಬ್ಬರೂ ಒಂದಾದರೆ ರಾಜ್ಯದಲ್ಲಿ ಉತ್ತಮ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬಹುದು ಎಂದು ಬಾಲಚಂದ್ರ ಅಭಿಪ್ರಾಯಪಟ್ಟಿದ್ಧಾರೆ.

ರಮೇಶ್ ಜಾರಕಿಹೊಳಿ ಯಾರ ಬಳಿ ಒಂದು ರೂಪಾಯಿಯನ್ನೂ ಪಡೆದಿಲ್ಲ. ಬೇರೆ ಬೇರೆ ಕಾರಣದಿಂದ ಕಾಂಗ್ರೆಸ್ ಬಿಡಲು ಅವರು ನಿರ್ಧರಿಸಿದ್ಧಾರೆ. ಈಗಾಗಲೇ ಅವರು ಆ ಪಕ್ಷದಿಂದ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ಧಾರೆ.

ಜಾರಕಿಹೊಳಿ ಕುಟುಂಬದಲ್ಲಿ ಆಗುತ್ತಿರುವ ಈ ಬೆಳವಣಿಗೆಯು ಯಾವ ಸ್ವರೂಪಕ್ಕೆ ತಿರುಗಬಹುದು? ಇದು ಆ ಕುಟುಂಬವನ್ನು ರಾಜಕೀಯವಾಗಿ ಇನ್ನಷ್ಟು ಗಟ್ಟಿಗೊಳಿಸುತ್ತದಾ? ಅಥವಾ ದುರ್ಬಲಗೊಳಿಸುತ್ತದಾ? ಎಂಬ ಪ್ರಶ್ನೆಗಳು ಮೂಡಿವೆ.

(ವರದಿ: ಚಂದ್ರಕಾಂತ ಸುಗಂಧಿ)

ಈ ವಿಡಿಯೋ ನೋಡಿ: ಕುಟುಂಬವನ್ನು ಒಗ್ಗೂಡಿಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದು:
First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading