ಗರಿಗರಿ 500 ರೂ ನೋಟು ಕೊಡ್ತಾರೆ; 5 ಕೋಟಿ ಲೂಟಿ ಮಾಡ್ತಾರೆ: ಗೋಕಾಕ್​ನಲ್ಲಿ ಸತೀಶ್ ಜಾರಕಿಹೊಳಿ ಎಚ್ಚರಿಕೆ

ಪ್ರವಾಹದಿಂದ ಕುಸಿದ ಮನೆಗಳ ಮಣ್ಣು ತೆಗೆದು ಸ್ವಚ್ಛತೆ ಮಾಡುವ ಕಾರ್ಯಕ್ರಮದಲ್ಲಿ ಅಂಬಿರಾವ್ ಮತ್ತು ಕೊತ್ವಾಲ್ ಗೌಡ ಲೂಟಿ ಮಾಡಿದ್ದಾರೆಂಬುದು ಸತೀಶ್ ಜಾರಕಿಹೊಳಿ ಆರೋಪ.

news18-kannada
Updated:October 9, 2019, 5:18 PM IST
ಗರಿಗರಿ 500 ರೂ ನೋಟು ಕೊಡ್ತಾರೆ; 5 ಕೋಟಿ ಲೂಟಿ ಮಾಡ್ತಾರೆ: ಗೋಕಾಕ್​ನಲ್ಲಿ ಸತೀಶ್ ಜಾರಕಿಹೊಳಿ ಎಚ್ಚರಿಕೆ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ಅ. 09): ತಮ್ಮ ಸಹೋದರ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ವಿರೋಧಿಗಳನ್ನು ಕುಟುಕಿದ್ದಾರೆ. ಕುಸಿದ ಮನೆಯ ಮಣ್ಣು ತೆಗೆದು ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದಕ್ಕೆ ಗೌರವವಾಗಿ ಸಂತ್ರಸ್ತರು ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡುತ್ತಿದ್ದರು. ಸಂತ್ರಸ್ತರಿಗೆ ನೆರವಾಗುವ ಹೆಸರಲ್ಲಿ ಅಂಬಿರಾವ್ ಪಾಟೀಲ್ ಮತ್ತು ಕೊತ್ವಾಲ್ ಗೌಡ ಲಕ್ಷಾಂತರ ಲೂಟಿ ಮಾಡಿದ್ದಾರೆಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ಧಾರೆ. ಅಂಬಿರಾವ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅವರ ಅಳಿಯರಾಗಿದ್ಧಾರೆ.

ಸತೀಶ್ ಶುಗರ್ಸ್ ಸಂಸ್ಥೆಯಿಂದ ನಾವು 50 ಲಕ್ಷ ರೂ ಖರ್ಚು ಮಾಡಿ 40 ಗ್ರಾಮಗಳಲ್ಲಿ ಸ್ವಚ್ಛತೆ ಮಾಡಿದೆವು. ನಾವು ಮಾಡಿದ್ದು ನೋಡಿ ಕೊತ್ವಾಲ ಗೌಡ, ಅಂಬಿ ಕೂಡ ತಾವೂ ಸ್ವಚ್ಛತೆ ಮಾಡುತ್ತೇವೆ ಅಂತ ಹೋದ್ರು. ಮಣ್ಣು ತೆಗೆಯಲು ಒಂದು ಟ್ರ್ಯಾಕ್ಟರ್ ಟ್ರಿಪ್​ಗೆ 300 ಅಥವಾ 500 ರೂ ಇದೆ. ಇವರು 1,200 ರೂಪಾಯಿ ಅಂತ ತೋರಿಸಿದ್ದಾರೆ. 8 ಸಾವಿರ ಟ್ರಿಪ್ ಮಾಡಿಸಿದ್ದೇವೆಂದು ಹೇಳಿ 80 ಲಕ್ಷ ರೂಪಾಯಿ ಖರ್ಚಾಯಿತೆಂದಿದ್ದಾರೆ. ಇವರು ಒಂದು ಟ್ರ್ಯಾಕ್ಟರ್ ಲೋಡ್​ಗೆ ನಿಜವಾಗಿ ಕೊಟ್ಟಿದ್ದು 400 ಮಾತ್ರ. ಉಳಿದ 800 ರುಪಾಯಿ ಇವರ ಪಾಲಾಗಿದೆ. ಅದರಲ್ಲಿ ಅರ್ಧ ಕೊತ್ವಾಲ ಗೌಡಗೆ, ಇನ್ನರ್ಧ ಅಂಬಿಗೆ ಎಂದು ಸತೀಶ್ ಜಾರಕಿಹೊಳಿ ವಿವರಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಅತೃಪ್ತರಿಗೆ 8 ನಿಗಮ-ಮಂಡಳಿ; ಶರತ್ ಬಚ್ಚೇಗೌಡಗೆ ಗೃಹ ಮಂಡಳಿ, ನಂದೀಶ್ ರೆಡ್ಡಿಗೆ ಬಿಎಂಟಿಸಿ

ಹಣ ಪಡೆದು ಬಿರಿಯಾನಿ ತಿನ್ನಿ: 

ಇನ್ನು, ಕೊತ್ವಾಲ ಗೌಡ ಮತ್ತವರ ತಂಡವು ಜನರಿಗೆ ಹಣದ ಆಮಿಷವೊಡ್ಡಿ ಮತ ಹಾಕಿಸುತ್ತಾರೆ ಎಂದು ಆರೋಪಿಸಿರುವ ಮಾಜಿ ಸಚಿವರು, ಜನರಿಗೆ ಎಚ್ಚರದಿಂದಿರಿ ಎಂದು ಮನವಿ ಮಾಡಿದ್ಧಾರೆ. ಕೊತ್ವಾಲ ನಿಮ್ಮಲ್ಲಿಗೆ ಬಂದು ಗರಿಗರಿ 500 ರೂ ನೋಟು ಕೊಡ್ತಾರೆ; ನಮ್ಮ ಆದ್ಮಿ ಬಂದ ಎಂದು ನೀವು ಹಣ ತಗೊಂಡು ವೋಟ್ ಹಾಕಿದರೆ ಮುಂದೆ ನಿಮ್ಮಿಂದ 5 ಕೋಟಿ ಹಣ ಲೂಟಿ ಮಾಡ್ತಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ಸು, ಆ ಧರ್ಮ ಈ ಧರ್ಮ ಅಂತಲ್ಲ, ಒಟ್ಟಾರೆ ನಮ್ಮ ಜನರು ಅನ್ಯಾಯಕ್ಕೊಳಗಾಗಬಾರದು. ಅವರು ನಿಮಗೆ 500 ರೂ ಕೊಡಲಿ, ಸಾವಿರ, ಎರಡು ಸಾವಿರ ಕೊಡಲಿ ಅದನ್ನು ನೀವು ತೆಗೆದುಕೊಳ್ಳೋದು ಬೇಡ ಅನ್ನಲ್ಲ. ಆ ದುಡ್ಡಲ್ಲಿ ಬಿರ್ಯಾನಿ ತಿಂದು ನಿಮ್ಮ ಪರವಾಗಿರುವವರಿಗೆ ವೋಟು ಹಾಕಿ ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಗಡಿಭಾಗದಲ್ಲಿ ದೇವರಗುಡ್ಡ ಬಡಿದಾಟ ಜಾತ್ರೆ; ಪೊಲೀಸರೆದುರೇ ಬಡಿಗೆ ಬಡಿದಾಟ, ಆದ್ರೂ ಕೇಸು ಹಾಕಲ್ಲ, ಯಾಕೆ?

ಗೋಕಾಕ್ ಫಾಲ್ಸ್ ಕಾರ್ಖಾನೆ ಕಥೆ: ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧ ವಾಗ್ದಾಳಿ  ನಡೆಸಿದ ಸತೀಶ್, ಗೋಕಾಕ್ ಫಾಲ್ಸ್ ಕಾರ್ಖಾನೆಯ ಉದಾಹರಣೆ ನೀಡಿದ್ದಾರೆ.

“ಗೋಕಾಕ್ ಫಾಲ್ಸ್​ ಕಾರ್ಖಾನೆಯಲ್ಲಿ ಹಿಂದೆ 8 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ 700ಕ್ಕೆ ಈ ಸಂಖ್ಯೆ ಇಳಿದಿದೆ. ಇಷ್ಟು ಕಾರ್ಮಿಕರನ್ನು ಕಡಿಮೆಗೊಳಿಸಿದ್ದಕ್ಕೆ ಅಂಬಿರಾವ್ ಪಾಟೀಲ್​ಗೆ ಕಾರ್ಮಿಕ ಮುಖಂಡ ಎಂಬ ಪಟ್ಟ ಕಟ್ಟಲಾಗಿದೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ವ್ಯಂಗ್ಯ ಮಾಡಿದ್ದಾರೆ. ಈ ಕಾರ್ಖಾನೆ ಮುಂದಿನ ದಿನಗಳಲ್ಲಿ ಬಾಗಿಲು ಹಾಕಿದರೆ ಆಶ್ಚರ್ಯ ಇಲ್ಲ. ಗೋಕಾಕ್​ನಲ್ಲಿ ಹೊಸ ಕಾರ್ಖಾನೆ ಬರಲು ಸಿದ್ಧ ಇಲ್ಲ. ಇದಕ್ಕೆ ಇವರೇ ಕಾರಣ ಎಂದವರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕದ್ದು ಮುಚ್ಚಿ ಬಿಜೆಪಿ ಸೇರುವುದಿಲ್ಲ, ಎಲ್ಲರಿಗೂ ತಿಳಿಸಿ ಅಧಿಕೃತವಾಗಿ ಸೇರುತ್ತೇನೆ; ಸುಮಲತಾ

ಅಳುವ ಕಾರ್ಯಕ್ರಮ: ರಮೇಶ್ ಜಾರಕಿಹೊಳಿ ಯಡಿಯೂರಪ್ಪರನ್ನು ಕರೆಸಿ ಅಳಿಸುವ ಪ್ರೋಗ್ರಾಮ್ ಇಟ್ಟುಕೊಂಡಿದ್ದಾರೆ. ರಮೇಶನೂ ಅಳುತ್ತಾನೆ. ಇವರು ಒಂದು ಸರ್ತಿ ಅತ್ತರೆ ನಿಮ್ಮನ್ನ 5 ವರ್ಷ ಅಳಿಸುತ್ತಾರೆ. ನಾವು ನಿಮ್ ಜೊತೆ ಇದೀವಿ. ಭೂಕಂಪ ಆಗಲಿ, ಏನಾದರೂ ಆಗಲಿ ನಿಮ್ ಜೊತೆ ನಾವು ಇರುತ್ತೇವೆ. ಗೋಕಾಕ್ ಕ್ಷೇತ್ರದ ಜನರು ತಮ್ಮ ಪರವಾಗಿರುವವರನ್ನು ಗೆಲ್ಲಿಸುವ ಅವಶ್ಯಕತೆ ಇದೆ ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

(ವರದಿ: ಚಂದ್ರಕಾಂತ ಸುಗಂಧಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ