ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ; ಸತೀಶ್​ ಜಾರಕಿಹೊಳಿ


Updated:September 11, 2018, 1:12 PM IST
ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ; ಸತೀಶ್​ ಜಾರಕಿಹೊಳಿ
ಸತೀಶ್​ ಜಾರಕಿಹೊಳಿ
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.11): ಜಾರಕಿಹೊಳಿ ಸಹೋದರರ ಅಸಮಾಧಾನದ ಲಾಭ ಪಡೆಯಲು ಮುಂದಾಗಿರುವ ಬಿಜೆಪಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. "ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವುದಿಲ್ಲ, ನನ್ನ ಸಿದ್ದಾಂತವೇ ಬೇರೆ, ಬಿಜೆಪಿ ಸಿದ್ಧಾಂತವೇ ಬೇರೆ, ಇವೆರಡು ಒಂದಾಗಲು ಸಾಧ್ಯವಿಲ್ಲ," ಎಂದು ಸತೀಶ್​ ಜಾರಕಿಹೊಳಿ ಹೇಳುವ ಮೂಲಕ ಬಿಜೆಪಿ ಆಸೆಗೆ ತಣ್ಣೀರು ಎರಚಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಬಿಟ್ಟು, ಬಿಜೆಪಿ ಸೇರುವುದಿಲ್ಲ. ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ. ರಾಜ್ಯಾದ್ಯಾಂತ ಮೌಢ್ಯದ ವಿರುದ್ಧ ಸಂಘಟನೆ ಮಾಡಿದ್ದೇನೆ. ಪ್ರಗತಿಪರರ ನಿಲುವಿನ ನನಗೆ ಒಂದು ಧರ್ಮವನ್ನು ಪ್ರತಿಪಾದಿಸುವ ಬಿಜೆಪಿ ಆಗಿಬರುವುದಿಲ್ಲ. ನಾನು ಕಾಂಗ್ರೆಸ್​ನಲ್ಲೇ ಇರುತ್ತೇನೆ. ಯಾರು ಯಾವುದೇ ನಿರ್ಧಾರ ತೆಗೆದುಕೊಂಡರು ಅದು ಅವರ ವೈಯಕ್ತಿಕ ಮತ್ತು ಸ್ವತಂತ್ರರು ಕೂಡ. ಪಕ್ಷ ಬಿಡುವವರನ್ನು ನಾನು ಬೆಂಬಲಿಸುವುದೂ ಇಲ್ಲ. ಪ್ರತಿಕ್ರಿಯಿಸುವುದೂ ಇಲ್ಲ. ನನ್ನ ಅಭಿಪ್ರಾಯವನ್ನು ರಮೇಶ್​ ಜಾರಕಿಹೊಳಿಗೂ ತಿಳಿಸಿದ್ದೇನೆ," ಎಂದು ಸತೀಶ್​ ಸ್ಪಷ್ಟಪಡಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರವಾಗಿ ಜಾರಕಿಹೊಳಿ ಸಹೋದರರಿಗೆ ಪಕ್ಷದಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ರಮೇಶ್​ ಜಾರಕಿಹೊಳಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮ್ಮ ಬೆಂಬಲಿತ ಶಾಸಕರೊಂದಿಗೆ ಕಾಂಗ್ರೆಸ್​ ತೊರೆದು, ಬಿಜೆಪಿ ಸೇರುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್​ ಅವರೊಂದಿಗೆ ಬಿಜೆಪಿಯ ಯಡಿಯೂರಪ್ಪ, ಶ್ರೀರಾಮುಲು ನಿರಂತರ ಸಂಪರ್ಕದಲ್ಲಿ ಇದ್ದರು. ಬಿಜೆಪಿ ಹೈಕಮಾಂಡ್​ ಕೂಡ ಈ ಸಂದರ್ಭವನ್ನು ಬಳಸಿಕೊಂಡು, ಮೈತ್ರಿ ಸರ್ಕಾರ ಕೊಡವಲು ಸೂಚನೆ ನೀಡಿದ ಬೆನ್ನಲ್ಲೇ, ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚೆಯನ್ನು ನಡೆಸಿದ್ದಾರೆ.

ಇತ್ತ ರಮೇಶ್​ ಜಾರಕಿಹೊಳಿ ಜೊತೆಗೆ ಡಿಸಿಎಂ ಪರಮೇಶ್ವರ್​ ಕೂಡ ಸಭೆ ನಡೆಸಿದ್ದು, ಸಭೆಯ ನಂತರವೂ ರಮೇಶ್​ ತಮ್ಮ ಹಿಂದಿನ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ.ಇದರ ನಡುವೆಯೇ ಸತೀಶ್​ ಜಾರಕಿಹೊಳಿ ಈ ಹೇಳಿಕೆ ನೀಡಿದ್ದು, ಮತ್ತಷ್ಟು ರಾಜಕೀಯ ಹೊಸ ತಿರುವುಗಳಿಗೆ ಕಾರಣವಾಗಿದೆ. ಸತೀಶ್​ ಅವರ ಈ ಹೇಳಿಕೆಯಿಂದಾಗಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾದಂತೆ ಆಗಿದೆ.

ಅಲ್ಲದೇ, ರಮೇಶ್​ ಜಾರಕಿಹೊಳಿ ಅವರನ್ನು ಮಂಗಳವಾರ ಅವರ ನಿವಾಸದಲ್ಲಿ ಭೇಟಿಯಾದ ಶಾಸಕ ಬಿ. ನಾಗೇಂದ್ರ ಅವರು ಕೂಡ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಬಿಟ್ಟು, ಬಿಜೆಪಿ ಸೇರುವುದಿಲ್ಲ. ಬಿಜೆಪಿ ಸೇರುತ್ತೇನೆ ಎಂಬುದು ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.

ಸತೀಶ್​ ಜಾರಕಿಹೊಳಿ ಪ್ರಗತಿಪರರ ಜೊತೆಗೆ ಹೆಚ್ಚು ಒಡನಾಟ ಇಟ್ಟುಕೊಂಡವರು. ಮೌಢ್ಯದ ವಿರುದ್ಧ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದವರು. ಅಮಾವಾಸ್ಯೆ, ಚಂದ್ರಗ್ರಹಣ ಅಂತಹ ದಿನಗಳಂದು ಸ್ಮಶಾನದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದವರು. ಅಂತಹವರು ಏಕಧರ್ಮ ಸಿದ್ಧಾಂತದ ಬಿಜೆಪಿಯೊಂದಿಗೆ ಕೈ ಜೋಡಿಸಲಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ನನ್ನ ಸಿದ್ಧಾಂತವೇ ಬೇರೆ, ಬಿಜೆಪಿ ಸಿದ್ಧಾಂತವೇ ಬೇರೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಉತ್ತರ ನೀಡಿದ್ದಾರೆ.
First published: September 11, 2018, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading