ಬೆಳಗಾವಿ: ಸತೀಶ್ ಪಾಟೀಲ್ ಹತ್ಯೆ (Sathish Patil Murder) ಬಳಿಕವೂ ಗೌಂಡವಾಡ ಗ್ರಾಮವು ಬೂದಿ ಮುಚ್ಚಿದ ಕೆಂಡದಂತಿದೆ. ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಡಿಸಿ ಕಚೇರಿ (DC Office) ಮುಂದೆ ಕಣ್ಣೀರಿಟ್ಟರು. ಇತ್ತ ಸತೀಶ್ ಕುಟುಂಬಕ್ಕೆ ಡಿಸಿ ನಿತೇಶ ಪಾಟೀಲ್ ಉಳಿದವ 15 ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದ್ದಾರೆ. ಸತೀಶ್ ಪಾಟೀಲ್ ಹತ್ಯೆ ಬಳಿಕವೂ ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮವು ಇನ್ನು ಬೂದಿ ಮುಚ್ಚಿದ ಕೆಂಡದಂತಾಗಿದೆ. ಗ್ರಾಮದಲ್ಲಿ ದೇವಸ್ಥಾನ ಜಮೀನು ವಿವಾದ ಹಾಗೂ ದೇವಸ್ಥಾನ ಬಳಿ ಕಾರು ಪಾರ್ಕಿಂಗ್ ವಿಚಾರದಲ್ಲಿ ಸತೀಶ್ ಪಾಟೀಲ್ ನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸತೀಶ್ ಸಾವಿನ ಬಳಿಕ ಗ್ರಾಮದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ರಾತ್ರಿಯಿಡೀ ಗೌಂಡವಾಡ ಗ್ರಾಮವು ಧಗಧಗನೇ ಹೊತ್ತಿ ಉರಿದಿತ್ತು.. ಆದ್ರು ನ್ಯಾಯಕ್ಕಾಗಿ ಆಗ್ರಹಿಸಿ ಸತೀಶ್ ಪಾಟೀಲ್ ಕುಟುಂಬಸ್ಥರು, ಗ್ರಾಮಸ್ಥರ ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.
ಪೊಲೀಸರ ವಿರುದ್ಧ ಕಿರುಕುಳ ಆರೋಪ
ಎರಡು ಗಂಟೆಗಳ ಕಾಲ ಡಿಸಿ ಕಚೇರಿ ಮುಂದೆ ಸತೀಶ್ ಪಾಟೀಲ್ ನನ್ನ ನೆನೆಸಿಕೊಂಡು ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಪೊಲೀಸರಿಂದ ನಮಗೆ ಕಿರುಕುಳ ಆಗ್ತಿದೆ. ಅಮಾಯಕರನ್ನ ಪೊಲೀಸರು ಬಂಧಿಸುತ್ತಿದ್ದಾರೆ. ಆರೋಪಿಗಳ ಕಡೆಯಿಂದ ನಮಗೆ ರಕ್ಷಣೆ ಬೇಕಿದೆ.ಕೊಲೆ ಮಾಡಿದ ಆರೋಪಿಗಳ ಹಣವಂತರಿದ್ದಾರೆ ಎಂದು ಡಿಸಿ ಸಮ್ಮುಖದಲ್ಲಿ ಸತೀಶ್ ತಾಯಿ ಕಣ್ಣೀರಿಟ್ಟು ನ್ಯಾಯ ಕ್ಕಾಗಿ ಬೇಡಿಕೆಯಿಟ್ಟರು.
ಇದನ್ನೂ ಓದಿ: Kolara: ಮಾಲೂರಿನಲ್ಲಿ ಗರಿಗೆದರಿದ ರಾಜಕೀಯ! ಶಾಸಕ ನಂಜೇಗೌಡ, ಮಾಜಿ ಶಾಸಕ ಮಂಜುನಾಥ್ ಮಧ್ಯೆ ಮಾತಿನ ಸಮರ
ಏನಿದು ಪ್ರಕರಣ?
ಇನ್ನೂ ಗೌಂಡವಾಡ ಗ್ರಾಮದಲ್ಲಿನ ಕೊಲೆ ಮತ್ತು ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದೊರೆದಿದೆ. ಕಾಕತಿ ಪೊಲೀಸರು ಕೊಲೆ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳ ಬಂಧಿಸಿದ್ದಾರೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆ ಆಗಿದ್ದು, ಕೊಲೆ ಬಳಿಕ ನಡೆದ ಹಿಂಸಾಚಾರ ಸಂಬಂಧ 22 ಆರೋಪಿಗಳ ಬಂಧನವಾಗಿದೆ. ಎರಡೂ ಪ್ರಕರಣಗಳ ಸಂಬಂಧ ಒಟ್ಟಾರೆ ಬಂಧಿತರ ಸಂಖ್ಯೆ 32ಕ್ಕೆ ಏರಿಕೆ ಆಗಿದೆ. ಅದರಲ್ಲೂ ಆನಂದ ಕುಟ್ರೆ (60), ಜಾಯಪ್ಪ ನೀಲಜಕರ (52) ಸುರೇಖಾ ನೀಲಜಕರ (47) ಸಂಜನಾ ನೀಲಜಕರ (21) , ವೆಂಕಟೇಶ ಕುಟ್ರೆ (50) ದೌಲತ್ ಮುತಗೇಕರ (21) ಲಖನ್ ನೀಲಜಕರ (25) ,ಲಕ್ಷ್ಮಿ ಕುಟ್ರೆ (45) ಸಂಗೀತಾ ಕುಟ್ರೆ (45) ಶಶಿಕಲಾ ಕುಟ್ರೆ (50) ಬಂಧಿತ ಕೊಲೆ ಆರೋಪಿಗಳು. ಈ ಮಧ್ಯೆಯೇ ಉಳಿದ 15 ಜನ ಕೊಲೆ ಆರೋಪಿಗಳನ್ನ ಪೊಲೀಸರು ಆದಷ್ಟು ಬೇಗ ಬಂಧಿಸಲಿದ್ದು, ಆದಷ್ಟು ಬೇಗ ಗ್ರಾಮದಲ್ಲಿ ಶಾಂತಿ ಸಭೆ ನಡೆಸುವುದಾಗಿ ಡಿಸಿ ನಿತೇಶ ಪಾಟೀಲ್ ಮಾಧ್ಯಮಗಳಿಗೆ ಹೇಳಿದ್ದಾರೆ.
ನ್ಯಾಯಕ್ಕಾಗಿ ಆಗ್ರಹಿಸಿ ಸತೀಶ್ ಪಾಟೀಲ್ ಕುಟುಂಬಸ್ಥರು ಗ್ರಾಮಸ್ಥರ ಸಮ್ಮುಖದಲ್ಲಿ ಡಿಸಿ ಕಚೇರಿ ಮುಂದೆ ಕಣ್ಣೀರಿಟ್ಟು ಅಂಗಲಾಚಿದ್ದಾರೆ. ಅತ್ತ ತಲೆ ಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕಮಿಷನರ್ ಖಡಕ್ ವಾರ್ನಿಂಗ್
ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಕಳೆದ ಮೂರು ತಿಂಗಳಿಂದ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದನು. ಆರೋಪಿ ಪತ್ತೆಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮೂರು ಪ್ರತ್ಯೇಕ ತಂಡ ರಚನೆ ಮಾಡಿದ್ದರು. ನಿನ್ನೆ ತಡರಾತ್ರಿ ಆರೋಪಿಯ ಸುಳಿವು ಬೆನ್ನತ್ತಿದ ಪೊಲೀಸರು ಆತನ ಬಂಧಿಸಲು ಯತ್ನಿಸಿದ್ದರು. ಈವೇಳೆ ಚಾಕುವಿನಿಂದ ಪೊಲೀಸ್ ಸಿಬ್ಬಂದಿಯ ಮೇಲೆ ಆರೋಪಿ ದಾಳಿ ಮಾಡಿದ್ದು, ಬಳಿಕ ಕ್ರೈಂ ವಿಭಾಗದ ಎಸಿಪಿ ನಾರಾಯಣ ಬರಮನಿ ಫೈರಿಂಗ್ ಮಾಡಿದ್ದಾರೆ. ಆರೋಪಿಯ ಎಡ ಕಾಲಿಗೆ ಗಾಯವಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂಲಕ ಬೆಳಗಾವಿ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಅನೇಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ