Mangaluru Dasara: ಶಾರದೆಗೆ ಚಿನ್ನದ ಮೆರುಗು; ಈ 8 ಲಕ್ಷದ ಸ್ವರ್ಣ ಖಚಿತ ಸೀರೆ ನೇಯ್ದಿದ್ದು ಮುಸ್ಲಿಂ ಕುಟುಂಬ!

ಮಂಗಳೂರಿನಲ್ಲಿ ಶಾರದೆ ದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. 8 ಲಕ್ಷ ರು. ಮೌಲ್ಯದ ಚಿನ್ನದ ಜರಿ ಸೀರೆಯುಟ್ಟ ಶಾರದೆ ದೇವಿ ಮಿಂಚಲಿದ್ದು, ದೇವಿಯ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.

ಶಾರದೆಗೆ 8 ಲಕ್ಷದ ಚಿನ್ನದ ಸೀರೆ!

ಶಾರದೆಗೆ 8 ಲಕ್ಷದ ಚಿನ್ನದ ಸೀರೆ!

  • Share this:
ಮಂಗಳೂರು (ಸೆ.20) : ಈ ಬಾರಿ ಮಂಗಳೂರಲ್ಲಿ ಅದ್ಧೂರಿ ದಸರಾ (Mangaluru Dasara) ಮಹೋತ್ಸವ ನಡೆಯಲಿದೆ. ಸೆಪ್ಟೆಂಬರ್​ 26ರಿಂದ ಅಕ್ಟೋಬರ್​ 6ರ ರವರೆಗೆ ದಸರಾ ಸಡಗರ ಮನೆ ಮಾಡಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದೆಯ (Lord Sharada Devi) ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ತಾಯಿ ಶಾರದೆಗೆ 8 ಲಕ್ಷದ ಮೌಲ್ಯದ ಸೀರೆಯನ್ನು ಉಡಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ  (Gold and silver) ಮಿಶ್ರಿತ ಜರಿ ಸೀರೆಯೊಂದಿಗೆ (Saree) ದೇವಿ ಮಿಂಚಲಿದ್ದಾರೆ.  ಇನ್ನು ಈ ಸೀರೆಯನ್ನು ವಾರಣಾಸಿಯ ಮುಸ್ಲಿಂ ಕುಟುಂಬದವರು (Muslim family) ತಯಾರು ಮಾಡುವುದು ಮತ್ತೊಂದು ವಿಶೇಷವಾಗಿದೆ. 

 ಶಾರದೆ ಅದ್ಧೂರಿ ಮೆರವಣಿಗೆ 

ರಾಜ್ಯದಲ್ಲಿ ದಸರಾ ಹಬ್ಬವನ್ನು ಮೈಸೂರು, ಮಡಿಕೇರಿ ಹಾಗೂ ಮಂಗಳೂರಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಂಗಳೂರಿನಲ್ಲಿ ಶಾರದೆ ದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. 8 ಲಕ್ಷ ರು. ಮೌಲ್ಯದ ಚಿನ್ನದ ಜರಿ ಸೀರೆಯುಟ್ಟ ಶಾರದೆ ದೇವಿ ಮಿಂಚಲಿದ್ದು, ದೇವಿಯ ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.ಮುಸ್ಲಿಂ ಕುಟುಂಬದಿಂದ ಸಿದ್ಧವಾಗ್ತಿದೆ ಸೀರೆ

ದೇವಿ ಧರಿಸೋ ಈ 8 ಲಕ್ಷದ ಸೀರೆಯನ್ನು 6 ತಿಂಗಳಿಂದ ಸಿದ್ಧಪಡಿಸಲಾಗ್ತಿದೆ. ಈ ಸೀರೆಯನ್ನು ವಾರಣಾಸಿ ಜ್ಞಾನವ್ಯಾಪಿ ದೇಗುಲ ಬಳಿಯ ಮುಸ್ಲಿಂ ಕುಟುಂಬವೊಂದು ಕಳೆದ 6 ತಿಂಗಳಿನಿಂದ ತಯಾರಿಸುತ್ತಿದೆ.  ಹಲವು ವರ್ಷಗಳಿಂದ ಉಸ್ತಾದ್​ ಬಿಸ್ಮಿಲ್ಲಾಖಾನ್ ಕುಟುಂಬವೇ ಈ ಸೀರೆಯನ್ನು ತಯಾರಿಸುತ್ತಿದ್ದು, ಈ ಬಾರಿ ಶಾರದೆಯ ಸೀರೆ ತಯಾರಿಸುವವರು ಆ ಕುಟುಂಬದ 5ನೇ ತಲೆಮಾರಿನವರಾಗಿದ್ದಾರೆ. ಬಿಸ್ಮಿಲ್ಲಾಖಾನ್​ ಅವರು ಕಾಶಿಯ ಪ್ರಸಿದ್ಧ ಶೆಹನಾಯಿ ವಾದಕರಾಗಿದ್ದಾರೆ.

ಸ್ವರ್ಣ ಖಚಿತ ಸೀರೆ ನೀಡಿದ ದಾನಿ

ಪ್ರತಿವರ್ಷ ಶಾರದೆಯ ಶೋಭಾಯಾತ್ರೆ ಸಂದರ್ಭ ಬೆಳ್ಳಿಯ ಜರಿಯಿರುವ ರೇಷ್ಮೆ ಸೀರೆಯನ್ನು ಶಾರದಾ ದೇವಿಗೆ ಉಡಿಸಲಾಗುತ್ತಿದ್ದು, ಈ ಬಾರಿ ಮಂಗಳೂರು ನಗರದ ದಾನಿಯೊಬ್ಬರು 8 ಲಕ್ಷ ಮೌಲ್ಯದ ಚಿನ್ನದ ಜರಿಯುಳ್ಳ ಸೀರೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಶಾರದೆಗೆ ಚಿನ್ನದ ವೀಣೆ, ನವಿಲು

ಮಂಗಳೂರು ಶಾರದಾ ಮಹೋತ್ಸವದ ಶತಮಾನೋತ್ಸವದ ಈ ಪರ್ವಕಾಲದಲ್ಲಿ ಶಾರದಾ ಮಹೋತ್ಸವ ಸಮಿತಿ ಮತ್ತು ಭಕ್ತಾದಿಗಳು ಒಟ್ಟು ಸೇರಿ 200 ಪವನ್‌ ತೂಕದ ಸ್ವರ್ಣಾಭರಣಗಳನ್ನು ಸಮರ್ಪಿಸಲಿದ್ದಾರೆ. ಅದರಲ್ಲಿ ಶಾರದೆಗೆ ಚಿನ್ನದ ವೀಣೆ, ನವಿಲೂ ಸೇರಿದೆ. ಇದು ಮಾತ್ರವಲ್ಲದೆ ಶಾರದೆಗೆ  ಬೆಳ್ಳಿ ದೀಪಗಳನ್ನು ದಾನಿಗಳು ನೀಡುತ್ತಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.  ಸೆ.26ರಿಂದ ಅ.6ರವರೆಗೆ ನಡೆಯಲಿದ್ದು, ದಸರಾ ಮಹೋತ್ಸವ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನಿಸಲಾಗುತ್ತದೆ.

ದಸರಾದ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿಕೊಟ್ಟು, ಸ್ವತಃ ನಾನೇ ಆಹ್ವಾನಿಸುತ್ತೇನೆ. ಮುಖ್ಯಮಂತ್ರಿಗಳ ಸಮಯವನ್ನು ಗೊತ್ತುಪಡಿಸಿ ದಸರಾ ಉದ್ಘಾಟನೆ ದಿನ, ಸಮಯ ನಿಗದಿಪಡಿಸಲಾಗುವುದು. ಕ್ಷೇತ್ರದ ಭಕ್ತಾದಿಗಳ ಅಭಿಲಾಷೆಯಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ಮತ್ತಷ್ಟುವೈಭವಪೂರ್ಣವಾಗಿ ನಡೆಯಲಿದೆ ಎಂದು  ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.ಮಂಗಳೂರು ದಸರಾಗೆ 10 ಲಕ್ಷ ಪ್ರವಾಸಿಗರ ನಿರೀಕ್ಷೆ

ಮಂಗಳೂರು ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಮೈಸೂರು, ಮಡಿಕೇರಿ ಬಿಟ್ಟರೆ ಮಂಗಳೂರಲ್ಲೇ ವಿಜೃಭಣೆಯ ದಸರಾ ನಡೆಯಲಿದೆ.  ಭಕ್ತರ ಅನುಕೂಲದ ದೃಷ್ಟಿಯಿಂದ ಈ ಬಾರಿ ಚಂಡಿಕಾಯಾಗವನ್ನು ಕ್ಷೇತ್ರದಲ್ಲಿರುವ ಗಾಜಿನ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ದಸರಾ ಮಹೋತ್ಸವಕ್ಕೆ ವಿವಿಧೆಡೆಗಳಿಂದ 10 ಲಕ್ಷಕ್ಕೂ ಅಧಿಕ ಮಂದಿ ಪ್ರವಾಸಿಗರ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿದೆ.
Published by:ಪಾವನ ಎಚ್ ಎಸ್
First published: