ಸರ್ಕಾರಿ ಶಾಲೆಗಳಲ್ಲೂ ಉನ್ನತ ಮಟ್ಟದ ಶಿಕ್ಷಣ (Higher Education) ದೊರೆಯಬೇಕು ಅಂತೆಯೇ ಮಕ್ಕಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಈ ಶಾಲೆಗಳಲ್ಲೂ ಪಡೆಯಬೇಕು ಎಂಬುದು ಹಲವಾರು ವರ್ಷಗಳಿಂದ ಕೇಳಿಬರುತ್ತಿರುವ ಕೂಗಾಗಿದೆ. ಸರ್ಕಾರ ಶಾಲೆ (Government School) ಎಂದರೆ ಮೂಗುಮುರಿಯುವವರೇ ಇಂದಿನ ಕಾಲದಲ್ಲಿ ಹೆಚ್ಚು ಏಕೆಂದರೆ ಅಲ್ಲಿ ಉತ್ತಮ ಶಿಕ್ಷಣ (Good Education) ದೊರೆಯುವುದಿಲ್ಲ ಹಾಗೂ ಮಕ್ಕಳಿಗೆ ಮೂಲಭೂತ ಸೌಲಭ್ಯಗಳಿರುವುದಿಲ್ಲ ಎಂಬುದು ಪೋಷಕರ ಹೇಳಿಕೆಯಾಗಿದೆ. ಈ ದಿಸೆಯಲ್ಲಿ ಸರ್ಕಾರ ಶಾಲಾ ಅಭಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಸೇತುಬಂಧ ಕಾರ್ಯಕ್ರಮ, ವಿದ್ಯಾಗಮ (Vidyagama) ಮೊದಲಾದ ಕಾರ್ಯಕ್ರಮಗಳನ್ನು ಸರಕಾರಿ ಶಾಲೆಯ ಮಕ್ಕಳಿಗಾಗಿ ರೂಪಿಸಿದೆ.
ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳೂ ಸರಕಾರಿ ಶಾಲೆಗಳಲ್ಲಿ ದೊರೆಯಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಆದರೂ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಇಂದಿಗೂ ಸರಕಾರಿ ಶಾಲೆಗಳ ದುಃಸ್ಥಿತಿ ಇದ್ದಂತೆಯೇ ಇದ್ದು ಮಕ್ಕಳಿಗೆ ಮೂಲಸೌಕರ್ಯಗಳ ಕೊರತೆಯಿಂದ ಹಿಡಿದು ಭರವಸೆಯ ಶಿಕ್ಷಣದ ಕೊರತೆ ಕೂಡ ಎದ್ದುಗಾಣುತ್ತಿದೆ.
ವೈರಲ್ ಆಗಿರುವ ಹಳ್ಳಿಯ ಶಾಲೆಯ ಸ್ಥಿತಿ
ಕರ್ನಾಟಕದ ಕೆಲವು ಹಳ್ಳಿಗಳು ಇಂದಿಗೂ ಮೂಲಸೌಕರ್ಯಗಳಿಲ್ಲದೇ ಬಳಲುತ್ತಿದ್ದು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪರಿಸ್ಥಿತಿ ದುಸ್ಥರವಾಗಿದೆ. ಇದೇ ರೀತಿ ಹಳ್ಳಿಯೊಂದರ ಶಾಲೆಯ ದುರವಸ್ಥೆ ವೈರಲ್ ಆಗಿದ್ದು ಇಂತಹ ಪರಿಸ್ಥಿತಿ ಯಾವ ಶಾಲೆಗೂ ಹಾಗೂ ಶಾಲೆಯಲ್ಲಿರುವ ಮಕ್ಕಳಿಗೂ ಬರಬಾರದು ಎಂಬುದು ಹಳ್ಳಿಗರ ಕಾಳಜಿಯಾಗಿದೆ.
ಆಟದ ಮೈದಾನವೇ ತೆರೆದ ಶೌಚಾಲಯ
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಬರುವೆ ಗ್ರಾಮದ ಎಲಿಗೆ ಹೆಸರಿನ ಕುಗ್ರಾಮದಲ್ಲಿರುವ ಸರಕಾರಿ ಶಾಲೆಯ ಕಥೆ ಇದೀಗ ವ್ಯಥೆಯಾಗಿ ವೈರಲ್ ಆಗಿಬಿಟ್ಟಿದೆ.
ಶೌಚಾಲಯದ ಕಟ್ಟಡ ಮುರಿದು ಬಿದ್ದ ಕಾರಣ ಉದ್ದನೆಯ ಸೀರೆಯನ್ನು ಕಟ್ಟಿ ಆಟದ ಮೈದಾನವನ್ನೇ ಬಯಲು ಶೌಚಾಲಯವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಶಾಲಾ ಮಕ್ಕಳು ಶೌಚಾಲಯಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ.
ಶಾಲೆಯ ಶೌಚಾಲಯದ ಕಟ್ಟಡ ಪಾಳುಬಿದ್ದಿದೆ
ಶೌಚಾಲಯದ ಕಟ್ಟಡ ಹಲವು ವರ್ಷಗಳಿಂದ ಪಾಳುಬಿದ್ದಿದೆ. ಇದು ಯಾವುದೇ ಶಿಕ್ಷಣ ಅಧಿಕಾರಿಗಳ ಅಂತೆಯೇ ಸಂಬಂಧಪಟ್ಟ ಸಚಿವರ ಗಮನಕ್ಕೆ ಬಾರದಿರುವುದು ಸೋಜಿಗವಾಗಿದೆ.
ಈ ಶಾಲೆಯಲ್ಲಿರುವ ಏಳು ಹುಡುಗಿಯರು ಹಾಗೂ ಆರು ಹುಡುಗರು ಸೀರೆಯನ್ನೇ ಶೌಚಾಲಯದ ಗೋಡೆ ರೀತಿಯಂತೆ ಕಟ್ಟಿ ಮೈದಾನವನ್ನು ಶೌಚಾಲಯವನ್ನಾಗಿ ಬಳಸುತ್ತಿದ್ದಾರೆ.
ಇದನ್ನೂ ಓದಿ: Bengaluru News: ವಿಮಾನ ಟಿಕೆಟ್ ಬುಕ್ ಮಾಡುವ ಮುನ್ನ ಎಚ್ಚರ! ಶಾಕಿಂಗ್ ಘಟನೆ ಬಹಿರಂಗ
ನೀರಿಗಾಗಿ ತೆರೆದ ಟ್ಯಾಂಕ್ನ ವ್ಯವಸ್ಥೆ ಇದ್ದು ಬಕೆಟ್ ಹಾಗೂ ಮಗ್ ಅನ್ನು ಹೊಂದಿದ್ದಾರೆ. ತೆರೆದ ಶೌಚಾಲಯವನ್ನೇ ಶಾಲೆಯ ಮಕ್ಕಳು ಬಳಸಿಕೊಳ್ಳುತ್ತಿದ್ದು ಶಾಲೆಯ ಆಟದ ಮೈದಾನವೇ ಅವರ ಶೌಚಾಲಯವಾಗಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.
ಸೀರೆ ಕಟ್ಟಿ ತಡೆಗೋಡೆ ಮಾಡಿಕೊಂಡಿರುವ ಶಾಲಾ ಮಕ್ಕಳು
ಇಂಟರ್ನೆಟ್ನಲ್ಲಿ ಶಾಲೆ ಹಾಗೂ ಶಾಲೆಯ ಮುರಿದು ಬಿದ್ದಿರುವ ಶೌಚಾಲಯದ ಕಟ್ಟಡಗಳು ಅಂತೆಯೇ ಮಕ್ಕಳು ಸೀರೆ ಕಟ್ಟಿ ಬಯಲು ಶೌಚಾಲಯವನ್ನು ಬಳಸಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ, ಶಾಲೆಯ ಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಶಾಲೆಗೆ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಯಲು ಶೌಚಾಲಯವನ್ನು ಬಳಸಲು ಶಾಲಾ ಅಧಿಕಾರಿಗಳ ಸೂಚನೆ
ಹಾಳಾಗಿರುವ ಶಾಲಾ ಶೌಚಾಲಯವನ್ನು ದುರಸ್ತಿಪಡಿಸದೇ ಹಲವಾರು ವರ್ಷಗಳೇ ಆಗಿರುವುದರಿಂದ ಬಯಲು ಶೌಚಾಲಯವನ್ನು ಬಳಸುವಂತೆ ಶಾಲೆಯ ಅಧಿಕಾರಿಗಳೇ ಮಕ್ಕಳಿಗೆ ಸೂಚಿಸಿದ್ದಾರೆ ಎಂಬುದು ವರದಿಯಾಗಿದೆ.
ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ
ಗ್ರಾಮದ ಗ್ರಾಮಸ್ಥರು ಕೂಡ ಮಕ್ಕಳು ಪಡುತ್ತಿರುವ ಕಷ್ಟವನ್ನು ನೋಡಿ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಗಮನಕ್ಕೆ ಈ ವಿಷಯವನ್ನು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: DK Shivakumar: ಒಬ್ಬ ಮಂಚಕ್ಕೆ, ಮತ್ತೊಬ್ಬ ಲಂಚಕ್ಕೆ ತಲೆದಂಡ; ಡಿಕೆಶಿ ವಾಗ್ದಾಳಿ
ಅಂತೆಯೇ ಮಕ್ಕಳ ಹಾಗೂ ಶಾಲೆಯ ಪರಿಸ್ಥಿತಿ ಇದ್ದಂತೆಯೇ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ. ಚಿತ್ರಗಳು ವೈರಲ್ ಆದ ನಂತರವಾದರೂ ಪರಿಸ್ಥಿತಿ ಸುಧಾರಣೆಗೊಳ್ಳಬಹುದು ಎಂಬುದು ಶಾಲಾ ಅಧಿಕಾರಿ ಹಾಗೂ ಗ್ರಾಮಸ್ಥರ ನಂಬಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ