ಬೆಂಗಳೂರು: ರಾಜ್ಯ ರಾಜಕಾರಣದಲ್ಲೇ (Karnataka Politics) ತಲ್ಲಣ ಎಬ್ಬಿಸಿದ್ದ ಖತರ್ನಾಕ್ ಖದೀಮ, ನಟೋರಿಯಸ್ ಕಳ್ಳ, ಹೈಟೆಕ್ ವೇಶ್ಯಾವಾಟಿಕೆಯ ಸೂತ್ರಧಾರ, ತಾಳಿಕಟ್ಟಿದ ಹೆಂಡತಿಯನ್ನೇ ದಂಧೆಗೆ ತಳ್ಳಿದ್ದ ಕಾಮುಕ ಮಂಜುನಾಥ್ ಅಲಿಯಾಸ್ ರವಿ, ಅಲಿಯಾಸ್ ಕಿರಣ, ಅಲಿಯಾಸ್ ಸ್ಯಾಂಟ್ರೋ ರವಿ ಅಂದರ್ (Santro Ravi Arrest) ಆಗಿದ್ದಾನೆ. ನಿನ್ನೆ ಬೆಳಗ್ಗೆ ಆರೋಪಿಯನ್ನು ಅರೆಸ್ಟ್ ಮಾಡೇ ತೀರುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದ ಎಡಿಜಿಪಿ ಅಲೋಕ್ಕುಮಾರ್ (ADGP Alok Kumar), ಸಂಜೆ ಅರೆಸ್ಟ್ ಆಗಿರೋದನ್ನ ಖಚಿತಪಡಿಸಿದ್ದರು. ಅಲ್ಲದೇ ರಾತ್ರಿ ಆತನನ್ನು ವಿಮಾನ ಮೂಲಕ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore Airport) ರಹಸ್ಯವಾಗಿ ಆರೋಪಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಮಾಧ್ಯಮಗಳ ಕಣ್ ತಪ್ಪಿಸಿ ವಿಐಪಿ ಗೇಟ್ ಮುಖಾಂತರ ಕರೆ ತಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಆರೋಪಿ ಸ್ಯಾಂಟ್ರೋ ರವಿಗೆ ರಾಜಾತಿಥ್ಯ
ಈ ಕುರಿತು ಕೆಐಎಎಲ್ ಬಳಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಪ್ರಧಾನಿಗಳು, ಮುಖ್ಯಮಂತ್ರಿ ಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ? ಕರೆದುಕೊಂಡು ಹೋದರು. ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ? ಇದನ್ನ ನೋಡುತ್ತಿದ್ದರೆ ಈಗಲೂ ಪೊಲೀಸರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡುತ್ತಿದ್ದಾರೆ.
ಗೃಹ ಮಂತ್ರಿಗಳು ಆಹಮದಾಬಾದ್ಗೆ ಹೋಗ್ತಾರೆ, ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನವಾಗುತ್ತದೆ. ಅಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಾಗಿ ಮೊದಲೇ ರವಿಯನ್ನು ಬಂಧನ ಮಾಡಿದ್ದಾರೆ. ಅವನಿಂದ ಇರುವ ದಾಖಲೆಗಳನ್ನ ತೆಗೆದುಕೊಂಡು ಈಗ ಬಂಧನದ ನಾಟಕ ಮಾಡುತ್ತಿದ್ದಾರೆ.
ಇರುವ ಸಾಕ್ಷಿಗಳನ್ನ ಈಗಾಗಲೇ ನಾಶ ಮಾಡಿರುತ್ತಾರೆ. ಪಿಎಸ್ಐ ಅಕ್ರಮ ನೇಮಕಾತಿ ಮತ್ತು ಡ್ರಗ್ಸ್ ಕೇಸ್ ಗಳಂತೆ ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಾರೆ ಅಷ್ಟೇ ಆಗೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಪೊಲೀಸರು ಆರೋಪಿಯನ್ನೇ ಬಂಧಿಸಿದ್ದೇ ರೋಚಕ
ಗುಜರಾತ್ನಲ್ಲಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದೇ ರೋಚಕ. ಏಕೆಂದರೆ ಸ್ಯಾಂಟ್ರೋ ರವಿ ದಿನಕ್ಕೊಂದು ವೇಷ ಹಾಕಿದ್ದ. ದಿನಕ್ಕೊಂದು ವೇಷ ಬದಲಾಯಿಸ್ತಿದ್ದ. ಪೊಲೀಸ್ ಕಣ್ತಪ್ಪಿಸಲು ಖತರ್ನಾಕ್ ಸ್ಯಾಂಟ್ರೋ ರವಿ, ವಿಗ್ ಮತ್ತು ಕನ್ನಡಕ ತೆಗೆದಿದ್ದ. ಅಲ್ಲದೇ ಜಾಗ, ಕಾರ್, ಮೊಬೈಲ್, ಸಿಮ್ ಎಲ್ಲವನ್ನೂ ಬದಲಿಸುತ್ತಿದ್ದ.
ಪೊಲೀಸರಿಗೆ ಒಂದಿಂಚೂ ಸುಳಿವು ಸಿಗದಂತೆ ವಿವಿಧ ರಾಜ್ಯಗಳಲ್ಲಿ ಸುತ್ತಾಡ್ತಿದ್ದ. ಸ್ಯಾಂಟ್ರೋ ರವಿ ಸ್ನೇಹಿತರ ಮೂಲಕ ಪೊಲೀಸರಿಗೆ ಆತ ವಿಗ್ ಮತ್ತು ಕನ್ನಡಕ ತೆಗೆದು ಟ್ರಾವೆಲ್ ಮಾಡಿರೋ ಮಾಹಿತಿ ಸಿಕ್ಕಿದೆ. ತಕ್ಷಣವೇ ಅಲರ್ಟ್ ಆದ ಮೈಸೂರು ಪೊಲೀಸರ ವಿಶೇಷ ತಂಡ ಗುಜರಾತ್ಗೆ ತೆರಳಿತು. ಗುಜರಾತ್ನಲ್ಲಿ ಆತ್ಮೀಯರ ಸಹಾಯದಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಸ್ಯಾಂಟ್ರೋ ಬಂಧನ ಹೆಂಡ್ತಿ ದೂರಿನ ಮೇಲಷ್ಟೇ
ಇನ್ನು, ನಿಮಗೆ ಅಚ್ಚರಿ ಅನಿಸಬಹುದು. ಸ್ಯಾಂಟ್ರೋ ರವಿ ಬಂಧನ ಈಗ ಆಗಿರುವುದು ಆರೋಪಿ 2ನೇ ಹೆಂಡತಿ ಹಾಗೂ ಮೈಸೂರಿನ ಒಡನಾಡಿ ಸಂಸ್ಥೆ ನೀಡಿದ ದೂರಿನ ಮೇಲೆ ಮಾತ್ರ ಬಂಧನ ಮಾಡಲಾಗಿದೆ. ಅತ್ಯಾಚಾರ ಮಾಡಿ ನನ್ನನ್ನು ಬಲವಂತವಾಗಿ ಮದುವೆ ಆದ. ಅಲ್ಲದೇ ಬಲವಂತವಾಗಿ ಎರಡು ಬಾರಿ ಗರ್ಭಪಾತ ಮಾಡಿಸಿದ್ದ.
ದುಡ್ಡಿಗಾಗಿ ಪರ ಪುರುಷರ ಜೊತೆ ಮಲಗು ಅಂತಿದ್ದ. ಒಪ್ಪದಿದ್ದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಮಾನಸಿಕ ಹಿಂಸೆ ನೀಡಿದ್ದ. ಅತ್ಯಾಚಾರ ನಡೆಸಿ ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ. ಆತನ ಕೃತ್ಯದಿಂದ ನಾನು ಮಾರಕ ರೋಗಕ್ಕೆ ತುತ್ತಾಗಿದ್ದೇನೆ ಎಂದು ಆರೋಪಿ ಸ್ಯಾಂಟ್ರೋ ರವಿ ಎರಡನೇ ಪತ್ನಿ ದೂರು ನೀಡಿದ್ದರು. ಇದೇ ಕೇಸ್ನಲ್ಲಷ್ಟೇ ಸ್ಯಾಂಟ್ರೋ ರವಿಯನ್ನ ಬಂಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ