ಬೆಂಗಳೂರು: ಅತ್ಯಾಚಾರ, ವೇಶ್ಯವಾಟಿಕೆ, ವಂಚನೆ ಹಾಗೂ ಅಕ್ರಮ ದಂದೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಯಾಂಟ್ರೋ ರವಿ (Santro Ravi ) ಆರೋಗ್ಯದಲ್ಲಿ ಏರುಪೇರಾಗಿದ್ದು, ಸಿಐಡಿ (CID) ಅಧಿಕಾರಿಗಳು ಆತನನ್ನು ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸದ್ದಾರೆ. ಆರೋಪಿ ಮಧುಮೇಹ (Diabetes) ಸಮಸ್ಯೆಯಿಂದ ಬಳಲುತ್ತಿದ್ದು ನಿನ್ನ ಸಂಜೆ ಶುಗರ್ ಲೆವೆಲ್ 400 ಕ್ಕೂ ಅಧಿಕವಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ವಿಕ್ಟೋರಿಯಾ (Victoria) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸ್ಯಾಂಟ್ರೋ ರವಿ ಶುಗರ್, ಬಿಪಿ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಆದರೆ ನಿಯಮಿತವಾಗಿ ತೆಗೆದುಕೊಳ್ಳುವ ಮಾತ್ರೆಗಳಿಂದ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ್ದು, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ? ಎನ್ನುವ ಶಂಕೆ ಅಧಿಕಾರಿಗಳಲ್ಲಿ ಮೂಡಿದೆ. ಈ ಬಗ್ಗೆ ಅಧಿಕಾರಿಗಳು ವೈದ್ಯರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ಎರಡನೇ ಪತ್ನಿ ನೀಡಿರುವ ದೂರಿನ ಮೇಲೆ ಬಂಧಿಸಲಾಗಿದೆ. ಇದೀಗ ಆನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದಾನೆ. ಅಲ್ಲದೆ ವರ್ಗಾವಣೆ ದಂದೆಯಲ್ಲಿ ಈತನ ಕೈವಾಡವಿದೆ ಎನ್ನಲಾಗುತ್ತಿದ್ದು, ಆತನ ರಕ್ಷಣೆಗಾಗಿ ವಿಕ್ಟೋರಿಯಾ ಆಸ್ಪತ್ರೆ ಬಳಿ ಕೆಎಸ್ಆರ್ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು ಮೊಖಂ ಹೂಡಿದ್ದಾರೆ. ಸ್ಯಾಂಟ್ರೋ ರವಿ ಯನ್ನ ಜನವರಿ 30ರವರೆಗೆ ಸಿಐಡಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ನೀಡಿತ್ತು.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಮುಗಿಯದ ಸಂಕಷ್ಟ, ಪತ್ನಿಯಿಂದ ಮತ್ತೊಂದು ದೂರು ದಾಖಲು
ಇವತ್ತು ಅಥವಾ ನಾಳೆ ಡಿಶ್ಚಾರ್ಜ್
ಸಿಐಡಿ ಅಧಿಕಾರಿಗಳ ವಿಚಾರಣೆ ಎದುರಿಸಲು ಇಷ್ಟವಿಲ್ಲದ ಸ್ಯಾಂಟ್ರೋ ರವಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಪ್ರತಿದಿನ 12 ರಿಂದ 14 ಮಾತ್ರೆ, ಎರಡು ಶಾಟ್ ಇನ್ಸುಲಿನ್ ತೆಗದುಕೊಳ್ಳುತ್ತಾನೆ. ಶುಗರ್, ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಸರಿಯಾದ ಊಟ ಮಾಡದೇ ಮಾತ್ರೆ ತೆಗೆದುಕೊಳ್ಳುತ್ತಿರುವುದರಿಂದ ಲೋ ಬಿಪಿ, ಸುಸ್ತಿನಿಂದ ಕುಸಿದು ಬಿದ್ದಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸ್ಯಾಂಟ್ರೋ ರವಿ ವಿರುದ್ಧ ಕೇಳಿ ಬಂದಿರುವ ಆರೋಪಗಳೇನು?
ಮೈಸೂರು ಮೂಲದ ಸ್ಯಾಂಟ್ರೋ ರವಿ ವಿರುದ್ಧ ಆತನ 2ನೇ ಪತ್ನಿಎನ್ನಲಾದ ಮಹಿಳೆಯೊಬ್ಬರು ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ, ವಂಚನೆ, ಜಾತಿನಿಂದನೆ ಆರೋಪ ಹೊರಿಸಿ ಮೈಸೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದಾಗ ಆತನ ವಿರುದ್ಧ ಹಲವು ಹೆಣ್ಣಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಜೊತೆಗೆ ವಿದೇಶದಿಂದಲೂ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಆರೋಪ ಕೂಡ ಇದೆ. ಆತನನ್ನು ದೂರು ದಾಖಲಾದ 11 ದಿನಗಳ ಬಳಿಕ ಗುಜರಾತ್ನಲ್ಲಿ ಬಂಧಿಸಿ ಕರೆತಲಾಗಿತ್ತು.
ಕಾಂಗ್ರೆಸ್ ಟೀಕೆ?
ಜೈಲಿನಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಬಿಜೆಪಿ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಸ್ಯಾಂಟ್ರೋ ರವಿ ಆಸ್ಪತ್ರೆಗೆ ದಾಖಲಾಗಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸ್ಯಾಂಟ್ರೋ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರ್ಕಾರ? ಸಿಐಡಿ ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ. ಇದು ಆತ್ಮಹತ್ಯೆ ಯತ್ನವೋ, ಅಥವಾ ಕೊಲೆ ಯತ್ನವೋ... ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರ್ಕಾರದ ರಹಸ್ಯಗಳನ್ನು ಮುಗಿಸುವ ಹುನ್ನಾರ ನಡೆದಿದಿಯೇ ಬೊಮ್ಮಾಯಿಯವರೇ ? ಎಂದು ಟ್ವೀಟ್ನಲ್ಲಿ ಪ್ರಶ್ನಿಸಿದೆ.
ಇನ್ಸ್ಪೆಕ್ಟರ್ ಪ್ರವೀಣ್ ಹೇಳಿಕೆ ದಾಖಲು
ಸ್ಯಾಂಟ್ರೋ ರವಿ ಪ್ರೇರಣೆಯಿಂದ ಆತನ 2ನೇ ಪತ್ನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದ ಆರೋಪ ಹಿನ್ನೆಲೆ ಅಮಾನತುಗೊಂಡಿರುವ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ವರದಿ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಸಿಐಡಿ ವಶದಲ್ಲಿರುವ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಹಿನ್ನೆಲೆ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸ್ಯಾಂಟ್ರೋ ರವಿ ಪತ್ನಿ ಹಾಗೂ ಅಮಾನತುಗೊಂಡಿರುವ ಇನ್ಸ್ಪೆಕ್ಟರ್ ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲೇ ಅಂತಿಮ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ