ಮುಂಬೈ (ಮಾ. 13) : ಬೆಳಗಾವಿ ವಿಷಯದಲ್ಲಿ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಶಿವಸೇನೆ ಈಗ ಹೊಸ ತಗಾದೆ ತೆಗೆದಿದೆ. ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠಿ ಕಚೇರಿಯ ತೆರವುಗೊಳಿಸಿರುವುದರಿಂದ ಅಲ್ಲಿನ ಮರಾಠಿಗರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದುದರಿಂದ ಅವರಿಗೆ ಧೈರ್ಯ ತುಂಬಲು ಬೆಳಗಾವಿಗೆ ಸರ್ವಪಕ್ಷ ನಿಯೋಗ ಕಳಿಸಿ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಆಗ್ರಹಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ ನಾಯಕ ಸಂಜಯ್ ರಾವತ್, ಬೆಳಗಾವಿಯಲ್ಲಿರುವ ಮರಾಠಿಗರಿಗೆ ಧೈರ್ಯ ತುಂಬಲು ಕೂಡಲೇ ಅಲ್ಲಿಗೆ ಸರ್ವಪಕ್ಷಗಳ ಸಭೆ ಕರೆದೊಯ್ಯಬೇಕು ಎಂದು ಹೇಳಿದರು. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರಕರಣಗಳಿಂದ ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಆಗ ಎಲ್ಲರೂ ಶಿವಸೇನೆಯ ಮೇಲೆ ಆಪಾದನೆ ಮಾಡುತ್ತಾರೆ. ಆದುದರಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಲೇ ಸರ್ವ ಪಕ್ಷಗಳ ನಿಯೋಗವನ್ನು ಬೆಳಗಾವಿಗೆ ಕೊಂಡೊಯ್ಯಬೇಕು ಎಂದಿದ್ದಾರೆ.
ಇದಲ್ಲದೆ ಬೆಳಗಾವಿಯಲ್ಲಿ ಇರುವ ಮರಾಠಿಗರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಂಜಯ್ ರಾವತ್ ಗುರುತರ ಆರೋಪ ಮಾಡಿದ್ದಾರೆ. ದೇಶದ ಬೇರೆ ಭಾಗಗಳಲ್ಲಿ ಮಾಡುವಂತೆ ಬಿಜೆಪಿ ಇಲ್ಲೂ ಕೂಡ ಕನ್ನಡಿಗರು ಮತ್ತು ಮರಾಠಿಗರ ನಡುವೆ ಜಗಳ ಮಾಡಿಸುತ್ತಿದೆ. ಇದರಿಂದಾಗಿಯೇ ಅಲ್ಲಿ ಪರಿಸ್ಥಿತಿ ಕೈಮೀರಲಿದೆ. ಬೆಳಗಾವಿಯಲ್ಲಿ ಈಗ ಕರ್ನಾಟಕ ರಕ್ಷಣಾ ವೇದಿಕೆಗೆ ಬಿಜೆಪಿ ಕುಮ್ಮಕ್ಕು ನೀಡಿ ಸೌಹಾರ್ದತೆಗೆ ಭಂಗ ತರುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ನಾಯಕರು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಚುನಾವಣೆ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ದೂರಿದರು. ಅಲ್ಲದೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡೂ ರಾಜ್ಯಗಳ ನಡುವೆ ಇರುವ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ವಿಷಯಾಂತರಕ್ಕೆ ಬಿಜೆಪಿ ಷಡ್ಯಂತ್ರ.
ಇದನ್ನು ಓದಿ: ಸಿಡಿ ಪ್ರಕರಣ ಕುರಿತು ಅಧಿಕೃತ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ
ಸದ್ಯ ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಸಿಡಿ ಪ್ರಕರಣದ ವಿಷಯದಿಂದ ಜನರ ಗಮನವನ್ನು ಗಡಿ ಭಾಗದಲ್ಲಿ ಬೇರೆಡೆಗೆ ಸೆಳೆಯಲು ಬಿಜೆಪಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಗಲಾಟೆ ಸೃಷ್ಟಿಸುತ್ತಿದೆ ಎಂದು ವಿವರಿಸಿದರು.
ಇಷ್ಟು ದಿನ ಬೆಳಗಾವಿ ಮಹಾರಾಷ್ಟ್ರದ ಭಾಗ ಎಂದು ಹೇಳುತ್ತಿದ್ದ ಶಿವಸೇನೆಯ ನಾಯಕ ಸಂಜಯ್ ರಾವತ್ ಇದೇ ಮೊದಲ ಬಾರಿಗೆ ಬೆಳಗಾವಿ ಭಾರತದ ಭಾಗ ಎಂದು ಹೇಳಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಇರುವ ಭಾಷಾ ವಿವಾದವನ್ನು ವಿಸ್ತರಿಸಬಾರದು. ಇದು ಕರ್ನಾಟಕ ಸರ್ಕಾರದ ಜವಾಬ್ದಾರಿ ಕೂಡ ಆಗಿದೆ ಎಂದಿದ್ದಾರೆ. ಒಂದೊಮ್ಮೆ ಕರ್ನಾಟಕದ ಬಿಜೆಪಿ ಬೆಳಗಾವಿಯಲ್ಲಿ ತನ್ನ 'ಪ್ರಾಯೋಜಿತ ಕಾರ್ಯಗಳನ್ನು' ಮುಂದುವರೆಸಿದರೆ ಶಿವಸೇನೆ ಕೂಡ ಅದಕ್ಕೆ ತಕ್ಕದಾದ ಪ್ರತಿಕ್ರಿಯೆ ನೀಡಲಿದೆ. ಆದರೆ ನಾವು ಎರಡು ರಾಜ್ಯಗಳ ನಡುವೆ ಬಿರುಕು ಸೃಷ್ಟಿ ಆಗಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ