ಸ್ಯಾಂಡಲ್ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಕಾಟನ್ ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. 140 ದಿನಗಳ ಬಳಿಕ ನಟಿ ರಾಗಿಣಿ ಜೈಲಿನಿಂದ ಹೊರ ಬರಲಿದ್ದಾರೆ. ಇನ್ನು ಇದೇ ಮಾದಕ ವಸ್ತು ಪ್ರಕರಣದ ಮತ್ತೋರ್ವ ಆರೋಪಿ ಶಿವಪ್ರಕಾಶ್ಗೂ ಜಾಮೀನು ಮಂಜೂರು ಆಗಿದೆ. ಕಳೆದ ಸೆ.4 ರಂದು ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಅಂದೇ ನಟಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಸೆ. 14ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದರು. ನಂತರ ಸೆ. 15ರಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಸೆ. 29 ರಂದು ನಟಿ ರಾಗಿಣಿ ಜಾಮೀನು ಕೋರಿ ಅರ್ಜಿ ಸಲ್ಲಿದ್ದರು. ಆದರೆ ಜಾಮೀನು ಮಂಜೂರು ಆಗಲಿಲ್ಲ. ಅಲ್ಲಿಂದ ಜಾಮೀನಿಗಾಗಿ ರಾಗಿಣಿ ಪ್ರತ್ನಿಸಿದರೂ ಯಾವ ಪ್ರಯೋಜನ ಆಗಿರಲಿಲ್ಲ. ಹೈಕೋರ್ಟ್ನಿಂದ ಜಾಮೀನು ಅರ್ಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈಗ ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.
ರಾಗಿಣಿಗೆ ಜಾಮೀನು ಸಿಕ್ಕರೂ ಇವತ್ತು ಬಿಡುಗಡೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಕಾರಣ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪ್ರತಿ ಪಡೆದುಕೊಂಡು ತರಬೇಕು. ಸರ್ಟಿಫೈಡ್ ಪ್ರತಿಯನ್ನು ತಂದರಷ್ಟೆ ಬಿಡುಗಡೆ ಮಾಡಲಾಗುತ್ತದೆಯಂತೆ. ಹೀಗಾಗಿ ಇಂದೇ ಜಾಮೀನು ಪ್ರತಿ ದೆಹಲಿಯಿಂದ ತಂದು ಬಿಡುಗಡೆಗೊಳ್ಳುವುದು ಕಷ್ಟ. ಸರ್ಟಿಫೈಡ್ ಪ್ರತಿ ತಂದ ನಂತರ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಷರತ್ತುಗಳನ್ನ ಪೂರೈಸಬೇಕು. ಹೀಗಾಗಿ ಇಂದು ರಾಗಿಣಿ ಬಿಡುಗಡೆ ಬಹುತೇಕ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
ಸ್ಯಾಂಡಲ್ವುಡ್ ಮಾದಕ ವಸ್ತು ಪ್ರಕಣದಲ್ಲಿ ಮೊಲದು ರಾಗಿಣಿ ಅವರನ್ನು ಬಂಧಿಸಲಾಗಿತ್ತು. ನಂತರ ನಟಿ ಸಂಜನಾ ಅವರ ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಈ ಇಬ್ಬರೂ ನಟಿಯರನ್ನು ಒಂದೇ ಕಡೆ ಇರಿಸಲಾಗಿತ್ತು. ಈ ಇಬ್ಬರೂ ನಟಿಯರು ಒಂದೇ ಕೋಣೆಯಲ್ಲಿ ಇರುವುದಿಲ್ಲ ಎಂದು ಮೊದಲ ದಿನದಿಂದಲೇ ಜಗಳ ಆಡಲು ಆರಂಭಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿರುವಾಗ ಇವರ ಜೊತೆ ಮಹಿಳಾ ಪೊಲೀಸರನ್ನು ಇರಿಸಲಾಗಿತ್ತು.
ಇನ್ನು ನ್ಯಾಯಾಲಯದಲ್ಲಿ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದಾಗಂತೂ ಈ ನಟಿಯರ ಜಗಳ ಪರಪ್ಪನ ಅಗ್ರಹಾರದಲ್ಲಿ ತಾರಕಕ್ಕೇರಿತ್ತು. ಅಲ್ಲಿ ಇವರ ಜಗಳದ ಜೊತೆಗೆ ಜೈಲಿನಲ್ಲಿ ಕೊಡುತ್ತಿದ್ದ ಊಟದ ವಿಷಯಕ್ಕೂ ಸಾಕಷ್ಟು ಡ್ರಾಮ ನಡೆದಿತ್ತು ಎನ್ನಲಾಗಿತ್ತು.
ನಟಿ ರಾಗಿಣಿ ದ್ವಿವೇದಿ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕಾರಣಕ್ಕೆ ಈ ಮಾದಕ ವಸ್ತು ಪ್ರಕರಣದಲ್ಲಿ ನಟ ದಿಗಂತ್ ಹಾಗೂ ಐಂದ್ರಿತಾ ಅವರನ್ನೂ ಎರಡು ಸಲ ಕರೆಸಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ: 777 ಚಾರ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಆರಂಭ
ಶಿವಪ್ರಕಾಶ್, ನಟಿ ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವ, ಲೂಮ್ ಪೆಪ್ಪಾರ್, ಸೈಮನ್, ಪ್ರಶಾಂತ್ ಬಾಬು, ಅಶ್ವಿನಿ, ರಾಹುಲ್, ವಿನಯ್ ಅವರ ವಿರುದ್ಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೆಕ್ಷನ್ 120ಬಿ ಹಾಗೂ ಎನ್ಡಿಪಿಎಸ್ ಕಾಯ್ದೆಯ 21, 21ಸಿ, 27ಎ, 27ಬಿ, 29 ಸೆಕ್ಷನ್ ಅಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ