ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಇರುವ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿದ್ದ ಎ1 ಆರೋಪಿ ಶಿವಪ್ರಕಾಶ್ ಇದೇ ಮೊದಲ ಬಾರಿ ಪ್ರತ್ಯೇಕ್ಷರಾಗಿದ್ದಾರೆ. ಸಿಸಿಬಿ ತನಿಖಾಧಿಕಾರಿಗಳ ಮುಂದೆ ನಿನ್ನೆ ಸುಮಾರು 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಇಂದೂ ಕೂಡ ಅವರ ವಿಚಾರಣೆ ಮುಂದುವರಿಯಲಿದೆ. ನಿನ್ನೆ ಸಿಸಿಬಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಮಾಧ್ಯಮದ ಮುಂದೆಯೂ ಮೊದಲ ಬಾರಿ ಮಾತನಾಡಿದ ಶಿವಪ್ರಕಾಶ್, ತನ್ನನ್ನು ಬೇಕಂತಲೇ ಡ್ರಗ್ಸ್ ಕೇಸ್ನಲ್ಲಿ ಸಿಲುಕಿಸಿದ್ದಾರೆ ಎಂದು ದೂರಿದರು.
ಮಾದಕ ವಸ್ತು ಜಾಲ ಪ್ರಕರಣದಲ್ಲಿ ನನ್ನನ್ನು ಯಾಕೆ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂಬುವುದು ಗೊತ್ತಿಲ್ಲ. ರಾಗಿಣಿ ಹಾಗೂ ನನ್ನ ಸಂಬಂಧ ಮುಗಿದು ಮೂರು ವರ್ಷ ಆಗಿದೆ. ನಾನು ರಾಗಿಣಿಯನ್ನು ಇಷ್ಟ ಪಟ್ಟಿದ್ದು ನಿಜ. ಪ್ರಪೋಸ್ ಮಾಡಿದ್ದು ನಿಜ. ರಾಗಿಣಿಯನ್ನು ಮದುವೆ ಆಗಬೇಕು ಅಂತ ನಿರ್ಧಾರ ಸಹ ಮಾಡಿದ್ದೆ. 2017 ರಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ ಕೆರಿಯರ್ ಬಗ್ಗೆ ಯೋಚನೆ ಮಾಡ್ತಿದ್ದೀನಿ, ಹಾಗಾಗಿ ಮದ್ವೆ ಬೇಡ ಅಂದಿದ್ದಳು. ಆಗ ಇಬ್ಬರೂ ಪರಸ್ಪರ ಒಪ್ಪಂದದ ಮೇಲೆಯೇ ದೂರ ಅಹ ಆಗಿದ್ದೆವು. ಆಗಿನಿಂದ ನನ್ನ ಸಂಪರ್ಕದಲ್ಲಿ ರಾಗಿಣಿ ಇಲ್ಲ ಸಹ ಇಲ್ಲ ಎಂದು ಶಿವಪ್ರಕಾಶ್ ಮಾಹಿತಿ ನೀಡಿದರು.
ಇದಾದ ಬಳಿಕ ಖಾಸಗಿ ಹೋಟೆಲ್ನಲ್ಲಿ ನಡೆದ ಗಲಾಟೆಯಲ್ಲಿಯೂ ರವಿಶಂಕರ್ (ಪ್ರಕರಣದ ಮತ್ತೊಬ್ಬ ಆರೋಪಿ) ನನ್ನ ಮೇಲೆ ಸುಳ್ಳು ಕೇಸ್ ನೀಡಿದ್ದ. ಪೊಲೀಸರ ವಿಚಾರಣೆಯಲ್ಲಿ ನಮ್ಮ ಮೇಲಿನ ಆರೋಪ ಸುಳ್ಳು ಅಂತ ತೀರ್ಮಾನ ಸಹ ಆಯ್ತು. ಈಗ ಮತ್ತೆ ಅದೇ ರವಿಶಂಕರ್ ಬೇಕಾಂತಲೇ ಡ್ರಗ್ ಕೇಸ್ನಲ್ಲಿ ನನ್ನ ಎ 1 ಆರೋಪಿ ಅಂತ ಸಿಲುಕಿಸಿದ್ದಾನೆ. ಇದುವರೆಗೂ ನಾನು ಯಾವುದೇ ಡ್ರಗ್ಸ್ ಸಹ ಸೇವನೆ ಮಾಡಿಲ್ಲ. ನನಗೂ ಡ್ರಗ್ಸ್ಗೂ ದೂರದ ಮಾತು. ನಾನು ಡ್ರಗ್ಸ್ ಇದುವರೆಗೂ ಸೇವಿಸಿಲ್ಲ. ತನಿಖಾಧಿಕಾರಿಗಳ ಎಲ್ಲಾ ಮಾಹಿತಿಗೂ ನಾನು ಉತ್ತರ ನೀಡಿದ್ದೇನೆ. ಅವರಿಗೆ ಬೇಕಾದ ಮಾಹಿತಿ ಎಲ್ಲವನ್ನೂ ನಾನು ನೀಡಿದ್ದೇನೆ. ತನಿಖಾಧಿಕಾರಿಗಳು ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರ ನೀಡಿದ್ದೇನೆ. ತನಿಖಾಧಿಕಾರಿಗಳು ಸಹ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಅದನ್ನ ನಾನು ಒದಗಿಸಲು ಕೆಲಕಾಲ ಸಮಯಾವಕಾಶ ಸಹ ಕೇಳಿದ್ದೇನೆ. ಈ ಪ್ರಕರಣದಲ್ಲಿ ನನ್ನ ಪಾತ್ರ ಏನು ಇಲ್ಲ ಅನ್ನೋದನ್ನು ತನಿಖಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಡ್ರಗ್ಸ್ ಕೇಸ್ನ ಪ್ರಮುಖ ಆರೋಪಿ ತಿಳಿಸಿದರು.
ಇದನ್ನೂ ಓದಿ: ಯುವರಾಜ್ ವಂಚನೆ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್
ಪ್ರಕರಣದಲ್ಲಿ ನಾನು ತಪ್ಪು ಮಾಡಿರುವುದರಿಂದ ನಾಪತ್ತೆಯಾಗಿದ್ದೇನೆ ಅಂತ ಹೇಳಲಾಗಿತ್ತು. ಆದ್ರೆ ಇನ್ನು ಇಷ್ಟು ದಿನ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕಾಗಿ ಕಾಯುತ್ತಿದ್ದೆ. ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ನಾನು ಈಗ ಹೆಚ್ಚಿಗೆ ಏನು ಮಾತನಾಡಲ್ಲ. ನಾಳೆ (ಜ. 8) ತನಿಖಾಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದಾರೆ. ಅದರಂತೆ ವಿಚಾರಣೆಗೆ ಹಾಜರಾಗುತ್ತೇನೆ. ತನಿಖಾಧಿಕಾರಿಗಳ ಎಲ್ಲಾ ಪ್ರಶ್ನೆಗೆ ಉತ್ತರಿಸಲು ಸಿದ್ದ ಅಂತ ಶಿವಪ್ರಕಾಶ್ ಸ್ಪಷ್ಟಪಡಿಸಿದರು.
ವರದಿ: ಮಂಜುನಾಥ್ ಎನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ