ಬೆಂಗಳೂರು (ಫೆಬ್ರವರಿ 05); ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಅವರಿಗೆ ಕೆಲ ದಿನಗಳ ಹಿಂದೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಈ ಬೆಳವಣಿಗೆಯ ಬೆನ್ನಿಗೆ ಡ್ರಗ್ಸ್ ಜಾಲದ ಪ್ರಮುಖ ಆರೋಪಿ ರಾಜಕಾರಣಿಯ ಮಗ ಆದಿತ್ಯ ಆಳ್ವಾ ಸೇರಿದಂತೆ ವಿರೇನ್ ಖನ್ನಾ, ರಾಹುಲ್ ತೋನ್ಸೆ, ಆದಿತ್ಯ ಅಗರವಾಲ್, ಬಿ.ಆರ್.ರವಿಶಂಕರ್ಗೂ ಜಾಮೀನು ಮಂಜೂರು ಮಾಡಿದೆ. NDPS ವಿಶೇಷ ನ್ಯಾಯಾಲಯ ಎಲ್ಲಾ ಐದು ಆರೋಪಿಗಳೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ, ತಲಾ ಮೂರು ಲಕ್ಷ ಬಾಂಡ್, 2 ಶ್ಯೂರಿಟಿ ನೀಡುವಂತೆ ತಾಕೀತು ಮಾಡಿದೆ.
ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಮೊದಲು ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಿಕ್ಕಿಹಾಕಿಕೊಂಡಿದ್ದರು. ಬಳಿಕ, ಸಂಜನಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಗಿಣಿಗೆ ಇತ್ತೀಚೆಗೆ ಜಾಮೀನು ಲಭಿಸಿತ್ತು. ಆದರೆ, ಇದೇ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದು ಕೊನೆಗೆ ಜನವರಿ 11 ರಂದು ಬಂಧಿಯಾಗಿದ್ದ ಮಾಜಿ ಸಚಿವ ಜೀವರಾಜ್ ಆಳ್ವರ ಮಗ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಬಾಮೈದನಾಗಿರುವ ಆದಿತ್ಯಾ ಆಳ್ವ ಅವರನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ವಿಚಾರಣೆ ವೇಳೆ ಆದಿತ್ಯ ಆಳ್ವ ಅವರ ರೆಸಾರ್ಟ್ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು ಪಾರ್ಟಿ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ, ಆದಿತ್ಯ ಆಳ್ವ ಅವರ ಬಂಧನದಿಂದ ಇನ್ನಷ್ಟು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಹೀಗಾಗಿ ಸ್ಯಾಂಡಲ್ವುಡ್ ಡ್ರಗ್ ಕೇಸ್ನ ಎ6 ಆರೋಪಿಯಾಗಿದ್ದ ಆದಿತ್ಯಾ ಆಳ್ವ ವಿರುದ್ಧ ಸೆಪ್ಟೆಂಬರ್ 4ರಂದು ಎಫ್ಐಆರ್ ದಾಖಲಿಸಲಾಗಿತ್ತು. ಎಫ್ಐಆರ್ ದಾಖಲು ಬಳಿಕ ಆದಿತ್ಯ ಆಳ್ವ ಅವರ ಮನೆ ಮೇಲೆ ಸಿಸಿಬಿ ದಾಳಿ ನಡೆಸಲಾಗಿತ್ತು. ಹೆಬ್ಬಾಳದ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಲಾಗಿತ್ತು.
ಒಂದುವೇಳೆ ಆದಿತ್ಯ ಅಳ್ವ ಬಾಯಿ ಬಿಟ್ಟರೆ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಕೇಸ್ನ ಬಿಸಿ ತಟ್ಟುವ ಸಾಧ್ಯತೆಯಿದೆ. ಆದಿತ್ಯ ಆಳ್ವನ ಹೌಸ್ ಆಫ್ ಲೈಫ್ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ನಟ ನಟಿಯರಲ್ಲದೆ ಹಲವು ಸೆಲೆಬ್ರಿಟಿಗಳು ಸಹ ಪೇಜ್ 3 ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಎಂಬುದು ಬಯಲಾಗಿತ್ತು. ಹೌಸ್ ಆಫ್ ಲೈಫ್ ಮೇಲೆ ಸಿಸಿಬಿ ದಾಳಿ ವೇಳೆ ಗಾಂಜಾ, ಎಕ್ಸಟೆಸಿ ಮಾತ್ರೆಗಳು ಪತ್ತೆಯಾಗಿತ್ತು. ಪಾರ್ಟಿಗಳು ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಿಸಿಬಿ ಕಲೆ ಹಾಕಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ