Drugs Case- ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ: ಎಫ್ಎಸ್ಎಲ್ ವರದಿಯಲ್ಲಿ ರಾಗಿಣಿ, ಸಂಜನಾ ಪಾಸಿಟಿವ್

ಒಂದು ವರ್ಷದ ಹಿಂದಿನವರೆಗೆ ಡ್ರಗ್ಸ್ ಸೇವನೆಯನ್ನ ತಲೆಕೂದಲಿನಿಂದ ಪತ್ತೆ ಮಾಡಬಹುದು. ಈಗ ಡ್ರಗ್ಸ್ ಪ್ರಕಣದ ಆರೋಪಿಗಳಾದ ರಾಗಿಣಿ, ಸಂಜನಾ ಮೊದಲಾದವರ ಹೇರ್ ಸ್ಯಾಂಪಲ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.

ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ

  • Share this:
    ಬೆಂಗಳೂರು (ಆ. 24): ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟಿಯರಾದ ಸಂಜನಾ ಗಲ್ರಾಣಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಹಿನ್ನಡೆಯಾಗುವ ಬೆಳವಣಿಗೆಯಾಗಿದೆ. ಪ್ರಕರಣದ 13 ಆರೋಪಿಗಳ ಕೂದಲ ಸ್ಯಾಂಪಲ್​ನ ಫೋರೆನ್ಸಿಕ್ ಪರೀಕ್ಷೆಯ ವರದಿ ಬರೋಬ್ಬರಿ ಒಂದು ವರ್ಷದ ಬಳಿಕ ಬಂದಿದೆ. ರಾಗಿಣಿ, ಸಂಜನಾ, ಆಳ್ವ ಮೊದಲಾದ ಹಲವು ಆರೋಪಿಗಳಿಗೆ ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಎಫ್​ಎಸ್​ಎಲ್ ವರದಿ ಪ್ರಕಾರ ಈ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಈ ವರದಿ ಬಹಳ ಮುಖ್ಯ ಸಾಕ್ಷ್ಯವಾಗಲಿದೆ. ಸಿಸಿಬಿ ಮುಖ್ಯಸ್ಥ ಸಾಂದೀಪ್ ಪಾಟೀಲ್ ಅವರು ಈ ವರದಿಯನ್ನು ಸ್ವಾಗತಿಸಿದ್ದು, ಆರೋಪಿಗಳು ಡ್ರಗ್ಸ್ ಸೇವಿಸಿರುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

    ಒಂದು ವರ್ಷದ ಹಿಂದೆ ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಣಿ, ಸಂಜನಾ ಗಲ್ರಾಣಿ ಸೇರಿದಂತೆ ಹಲವು ಜನರನ್ನ ಬಂಧಿಸಿದ್ದರು. ಮಾಮೂಲಿಯ ರಕ್ತ ಮತ್ತು ಮೂತ್ರ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿರಲಿಲ್ಲ. ನಂತರ 13 ಜನರ ಹೇರ್ ಸ್ಯಾಂಪಲ್​ಗಳನ್ನ ಹೈದರಾಬಾದ್​ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಇದು ಆಗಿದ್ದು 2020, ಸೆಪ್ಟೆಂಬರ್ ತಿಂಗಳಲ್ಲಿ. ಡ್ರಗ್ಸ್ ಸೇವನೆ ಪತ್ತೆಗೆ ಹೇರ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು. ಆದರೆ, ಒಂದು ವರ್ಷದ ಬಳಿಕ ವರದಿ ಬಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ಸುಳ್ಳಲ್ಲ.

    ಒಂದು ವರ್ಷ ವಿಳಂಬ ದೊಡ್ಡ ವಿಚಾರವಲ್ಲ: ಆದರೆ, ಒಂದು ವರ್ಷದ ಬಳಿಕ ಎಫ್​ಎಸ್​ಎಲ್ ವರದಿ ಬಂದಿರುವುದು ಅಚ್ಚರಿಯೂ ಅಲ್ಲ ಎನ್ನುತ್ತಾರೆ ಕೆಲ ಪೊಲೀಸ್ ಅಧಿಕಾರಿಗಳು. ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ, ದೇಶದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುವುದರಿಂದ ತುಂಬಾ ಓವರ್ ಲೋಡ್ ಇದೆ. ಹೀಗಾಗಿ, ಪರೀಕ್ಷೆ ವರದಿ ವಿಳಂಬವಾಗಿ ಬರುವುದು ಸಹಜ. ಕೆಲವೊಮ್ಮೆ ನಾವು ಐದಾರು ವರ್ಷಗಳವರೆಗೆ ಕಾದಿದ್ದು ಉಂಟು ಎಂದು ಅಭಿಪ್ರಾಯಪಟ್ಟಿದ್ಧಾರೆ.

    ಇದನ್ನೂ ಓದಿ: ಶಾಲೆಗಳತ್ತ ವಿದ್ಯಾರ್ಥಿಗಳ ನೋಟ, ನೆಚ್ಚಿನ ಶಿಕ್ಷಕರಿಂದ ಪಾಠ, ಮಕ್ಕಳ ಕಣ್ಣಲ್ಲಿ ನಗೆಯ ನೋಟ

    ಇದೇ ವೇಳೆ, ಹೇರ್ ಸ್ಯಾಂಪಲ್​ನ ಎಫ್​ಎಸ್​ಎಲ್ ವರದಿ ಒಂದು ವರ್ಷ ವಿಳಂಬವಾಗಿ ಬಂದಿರುವುದು ಆರೋಪಿಗಳು ಬಚಾವಾಗಲು ಅವಕಾಶ ಕೊಡಬಹುದು ಎಂದು ಮಾಲಗತ್ತಿ ಹೇಳುತ್ತಾರೆ. ವಿಧಿವಿಜ್ಞಾನ ತಜ್ಞ ದಿನೇಶ್ ಕೂಡ ಇದನ್ನೇ ಪುನರುಚ್ಚರಿಸುತ್ತಾರೆ. ಕೂದಲ ಸ್ಯಾಂಪಲ್​ನ ಪರೀಕ್ಷೆಗೆ ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಅಗತ್ಯ ಇಲ್ಲ. ಇಷ್ಟು ವಿಳಂಬ ಯಾಕಾಯಿತು ಎಂಬುದು ಗೊತ್ತಿಲ್ಲ. ಇದಕ್ಕೆ ತನಿಖಾಧಿಕಾರಿಗಳು ಉತ್ತರ ನೀಡಬೇಕು ಎಂದು ದಿನೇಶ್ ತಿಳಿಸಿದ್ದಾರೆ.

    ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ:

    ಇನ್ನು, ಈ ಪ್ರಕರಣದಲ್ಲಿ ಒಬ್ಬ ಫಿರ್ಯಾದಿಯಾಗಿರುವ ಪ್ರಶಾಂತ್ ಸಂಬರಗಿ ಅವರು ಎಫ್​ಎಸ್​ಎಲ್ ವರದಿಯನ್ನ ಸ್ವಾಗತಿಸಿದ್ದಾರೆ. ಒಂದು ವರ್ಷ ಬಳಿಕ ಬಂದಿರುವುದ ಅಷ್ಟೇನೂ ವಿಳಂಬ ಎನಿಸುವುದಿಲ್ಲ. ತಾನು ಈ ಹಿಂದೆ ಕೆಲ ಪ್ರಕರಣಗಳಲ್ಲಿ ಏಳೆಂಟು ವರ್ಷಗಳ ಬಳಿಕ ವರದಿ ಬಂದಿದ್ದನ್ನು ನೋಡಿದ್ಧೇನೆ. ಸದ್ಯ ಪ್ರಕರಣದ ತನಿಖೆ ಬಹಳ ವೇಗವಾಗಿ ನಡೆಯುತ್ತಿದೆ ಎಂಬುದು ನನ್ನ ಅಭಿಪ್ರಾಯ. ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮುಂದುವರಿಯುತ್ತದೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ಧಾರೆ.

    ಈಗ ಪ್ರಕರಣದಲ್ಲಿ ಆರೋಪಿಗಳ ಜಾಮೀನು ರದ್ದುಗೊಳಿಸಲು ಎಫ್​ಎಸ್​ಎಲ್ ವರದಿ ಸಹಕಾರಿಯಾಗುತ್ತದೆ. ರಾಗಿಣಿ ದ್ವಿವೇದಿ ಸುಪ್ರೀಮ್ ಕೋರ್ಟ್​​ನಲ್ಲಿ ಜಾಮೀನು ಪಡೆದಿದ್ದಾರೆ. ಇನ್ನುಳಿದ ಆರೋಪಿಗಳು ರಾಜ್ಯ ಹೈಕೋರ್ಟ್​​ನಲ್ಲಿ ಜಾಮೀನು ಪಡೆದಿದ್ದಾರೆ. ಇವರ ಜಾಮೀನು ರದ್ದುಗಳಿಸಲು ಸಿಸಿಬಿ ಪೊಲೀಸರಿಗೆ ಈ ಎಫ್​ಎಸ್​ಎಲ್ ವರದಿ ಸಹಾಯಕವಾಗುತ್ತದೆ ಎಂದು ಪ್ರಶಾಂತ್ ಸಂಬರ್ಗಿ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ 4ರಂದು ಡ್ರಗ್ಸ್ ಕೇಸ್ ಸಂಬಂಧ ಕಾಟನ್​ಪೇಟೆಯಲ್ಲಿ 12 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ವೀರೇನ್ ಖನ್ನಾ, ವೈಭವ್ ಜೈನ್, ರಾಗಿಣಿ ದ್ವಿವೇದಿ, ಸಂಜನಾ ಗರ್ಲಾಣಿ ಮೊದಲಾದವರು ಆರೋಪಿಗಳಾಗಿದ್ದಾರೆ. ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಎ1 ಆರೋಪಿಯಾಗಿದ್ದಾರೆ. ನಟಿ ರಾಗಣಿ ಮತ್ತು ಸಂಜನಾ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಡ್ರಗ್ಸ್ ಡೀಲರ್ ಲೂಮ್ ಪೆಪ್ಪರ್ ಎ4 ಆರೋಪಿಯಾಗಿದ್ದಾರೆ. ಸೆ. 4ರಂದು ರಾಗಿಣಿ ದ್ವಿವೇದಿ ಅವರನ್ನ ಹಾಗೂ ಸೆ. 8ರಂದು ಸಂಜನಾ ಗರ್ಲಾಣಿ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೂರ್ನಾಲ್ಕು ತಿಂಗಳ ಬಳಿಕ ಅವರನ್ನ ಬಿಡುಗಡೆ ಮಾಡಲಾಯಿತು.
    Published by:Vijayasarthy SN
    First published: