news18-kannada Updated:September 22, 2020, 6:01 PM IST
ನಟಿ ರಶ್ಮಿತಾ.
ಬೆಂಗಳೂರು: ಡ್ರಗ್ಸ್ ಜಾಲಕ್ಕೂ, ಸ್ಯಾಂಡಲ್ವುಡ್ ತಾರೆಯರಿಗೂ ನಂಟಿದೆ ಅಂತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹೇಳುತ್ತಲೇ ಸಿಸಿಬಿ ಅಲರ್ಟ್ ಆಗಿತ್ತು. ಕಳೆದ ಎರಡು ವಾರಗಳಿಂದ ಹಲವಾರು ಮಂದಿಯನ್ನು ಬಂಧಿಸಿ ರಾಜ್ಯಾದ್ಯಂತ ಹಲವೆಡೆ ರೇಡ್ಗಳನ್ನು ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದೆ. ಅದರ ಬೆನ್ನಲ್ಲೇ ಐಎಸ್ಡಿ (ಇಂಟರ್ನಲ್ ಸೆಕ್ಯುರಿಟಿ ಡಿಪಾರ್ಟ್ಮೆಂಟ್) ಕೂಡ ಕಳೆದ ವಾರದಿಂದಲೇ ಕಾರ್ಯಾಚರಣೆಗೆ ಇಳಿದಿದೆ. ಹಲವು ಕಿರುತೆರೆ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಹೀಗೆ ವಿಚಾರಣೆಗೆ ಒಳಗಾದವರಲ್ಲಿ ನಟಿ ರಶ್ಮಿತಾ ಚೆಂಗಪ್ಪ ಕೂಡ ಒಬ್ಬರು. ಎರಡು ತುಳು ಸಿನಿಮಾ, ಮಹಾರಾಣಿ, ಗಟ್ಟಿಮೇಳ ಹಾಗೂ ಮೂರು ಗಂಟು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿಕಾ ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. "ಕಳೆದ ವಾರ ನೋಟೀಸ್ ಕೊಟ್ಟಿದ್ದರು. ನೊಟೀಸ್ ಕೊಟ್ಟಾಗ ನನಗೆ ಯಾಕೆ ನೋಟೀಸ್ ಕೊಟ್ರು ಅಂತ ನನಗೂ ಶಾಕ್ ಆಗಿತ್ತು. ಸೆಲೆಬ್ರಿಟಿ ಆಗಿರುವ ಕಾರಣ ಯಾರೋ ಭೇಟಿಯಾಗಿರುತ್ತಾರೆ, ಫೋಟೋ ತಗೊಂಡಿರ್ತಾರೆ, ಅವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುತ್ತಾರೆ. ಅದಕ್ಕೇ ನನ್ನನ್ನು ವಿಚಾರಣೆಗೆ ಕರೆದಿರಬಹುದು ಎನಿಸಿತು. ಆದರೆ ನನ್ನ ಮೊಬೈಲ್ಅನ್ನೇನೂ ವಶಕ್ಕೆ ಪಡೆದಿಲ್ಲ. ಸುಮಾರು ಒಂದೂವರೆ ತಾಸು ಕೆಲ ಮಾಹಿತಿ ಕೇಳಿದರು. ನಾನೂ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ"` ಎನ್ನುತ್ತಾರೆ ನಟಿ ರಶ್ಮಿತಾ.
ರಶ್ಮಿತಾ....ತಾವೂ ಸೆಲೆಬ್ರೇಷನ್ಸ್ ಮತ್ತು ಪಾರ್ಟಿಗಳಿಗೆ ಹೋಗಿರುವುದಾಗಿ ತಿಳಿಸುವ ಅವರು, ಡ್ರಗ್ಸ್ ಬಳಸುವುದನ್ನು ನೋಡಿರುವುದಿರಲಿ, ಕೇಳೂ ಇಲ್ಲವಂತೆ. `ಇದೇ ಮೊದಲ ಬಾರಿಗೆ ನಶೆ, ಮಾಫಿಯಾ, ದಂಧೆ ಅಂತ ಕೇಳುತ್ತಿರುವುದು. ಈ ಕನ್ನಡ ಚಿತ್ರರಂಗವನ್ನು ಕಟ್ಟಿದವರೇ ಯಾರೋ, ಅವರಿಂದ ಸ್ಫೂರ್ತಿ ಪಡೆದು ಏನಾದರೂ ಸಾಧಿಸಬೇಕು ಅಂತ ಇರುವವರು. ಪ್ರತಿದಿನ ಸಂಭಾವನೆ ಪಡೆದು ಕೆಲಸ ಮಾಡುವ ಮಧ್ಯಮ ವರ್ಗದ ಕುಟುಂಬದವಳು ನಾನು. ನನ್ನ ಮತ್ತು ನನ್ನ ಕುಟುಂಬದ ಜವಾಬ್ದಾರಿಯೂ ಇದೆ.
ಅಷ್ಟೆಲ್ಲಾ ಅದ್ಧೂರಿ ಜೀವನದ ಬಗ್ಗೆ ಇಂಟರೆಸ್ಟ್ ಕೂಡ ನನಗಿಲ್ಲ` ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ರಶ್ಮಿತಾ ಚೆಂಗಪ್ಪ. ಇನ್ನು ಡ್ರಗ್ಸ್ ಜಾಲ ಹಾಗೂ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಮಾತನಾಡುವ ಅವರು, `ಕೆಲ ಹೆಸರುಗಳು ಹೊರಬಂದಿವೆ, ಕೆಲ ಸಾಕ್ಷಿಗಳು ದೊರೆತಿವೆ, ತನಿಖೆ ನಡೆಯುತ್ತಿದೆ. ವಿಚಾರಣೆಗೆ ಕರೆದ ಮಾತ್ರಕ್ಕೇ ನಾವು ತಪ್ಪು ಮಾಡಿದ್ದೇವೆ ಅಂತಲ್ಲ.
ಇದನ್ನೂ ಓದಿ : ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ; ನರೇಂದ್ರ ಮೋದಿ ವಿಷಾದ
ಮತ್ತೆ ವಿಚಾರಣೆಗೆ ಕರೆಯುತ್ತೇವೆ ಅಂತ ಹೇಳಿಲ್ಲ, ಆದರೆ ಕರೆದರೆ ಖಂಡಿತವಾಗಿ ಹೋಗುತ್ತೇನೆ. ವಿಚಾರಣೆ ನಡೆಸಲಿ, ತನಿಖೆ ಮಾಡಲಿ, ತಪ್ಪು ಯಾರದಿದೆ, ಅವರಿಗೆ ಶಿಕ್ಷೆ ಆಗಲಿ. ಸ್ಪಷ್ಟತೆ ಸಿಗಬೇಕಿದೆ. ಇದು ಬೇಗ ಮುಗಿಯಲಿ` ಎನ್ನುತ್ತಾರೆ ಸ್ಮಾಲ್ ಸ್ಕ್ರೀನ್ ಸುಂದರಿ.
ಐಎಸ್ಡಿಯಿಂದ ಇನ್ನೂ ಹಲವಾರು ಮಂದಿಗೆ ನೋಟೀಸ್ ಜಾರಿಯಾಗಿದ್ದು, ವಿಚಾರಣೆಗೆ ಕರೆಯಲಾಗಿದೆ. ಅದರ ನಡುವೆಯೇ ಹಲವಾರು ಮಂದಿಯ ಹೆಸರೂ ಓಡಾಡುತ್ತಿದೆ. `ಇಲ್ಲದಿರುವವರ ಹೆಸರು ಇದರಲ್ಲಿ ಹರಿದಾಡುವುದು ಬೇಡ. ಚಿತ್ರರಂಗ ಹಾಗೂ ಕಿರುತೆರೆಯನ್ನೇ ನಂಬಿಕೊಂಡಿರುವ ಹಲವರಿದ್ದಾರೆ. ಅವರ ಜೀವನ ಮತ್ತು ಕರಿಯರ್ ಮೇಲೆ ಪರಿಣಾಮ ಬೀರುವುದು ಬೇಡ` ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಶ್ಮಿತಾ.
Published by:
MAshok Kumar
First published:
September 22, 2020, 6:01 PM IST