ಚಿತ್ರದುರ್ಗದ ರಾಂಪುರ ಪೋಲೀಸರ ಭರ್ಜರಿ ಕಾರ್ಯಾಚರಣೆ: 4 ಕೋಟಿ ರೂ. ಮೌಲ್ಯದ 8250 ಗಾಂಜಾ ಗಿಡಗಳ ವಶ

ಸ್ಯಾಂಡಲ್‌ವುಡ್​​ ಡ್ರಗ್ ಪ್ರಕರಣವೂ ಸಂಚಲನ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಕೋಟೆನಾಡಿನ ಪೊಲೀಸರು ಖಚಿತ ಮಾಹಿತಿ ಆಧರಿಸಿ ನೀರಾವರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 4ಕೋಟಿ ರೂ‌ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು.

news18-kannada
Updated:September 15, 2020, 4:19 PM IST
ಚಿತ್ರದುರ್ಗದ ರಾಂಪುರ ಪೋಲೀಸರ ಭರ್ಜರಿ ಕಾರ್ಯಾಚರಣೆ:  4 ಕೋಟಿ ರೂ. ಮೌಲ್ಯದ 8250 ಗಾಂಜಾ ಗಿಡಗಳ ವಶ
ಗಾಂಜಾ ಸೊಪ್ಪು
  • Share this:
ಚಿತ್ರದುರ್ಗ(ಸೆ.15): ಚಿತ್ರದುರ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 4ನೇ ತಾರೀಕಿನಂದು ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಯಾಂಡಲ್‌ವುಡ್​​ ಡ್ರಗ್ ಪ್ರಕರಣವೂ ಸಂಚಲನ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಕೋಟೆನಾಡಿನ ಪೊಲೀಸರು ಖಚಿತ ಮಾಹಿತಿ ಆಧರಿಸಿ ನೀರಾವರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು 4ಕೋಟಿ ರೂ‌ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ ಸೆಪ್ಟೆಂಬರ್ 04ರಂದು ಮುಂಜಾನೆ ರಾಂಪುರ ಸಮೀಪದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ 4.20 ಎಕರೆ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಗಿತ್ತು. ಈ ವೇಳೆ ಜಮೀನಿನ ಮೇಲೆ ದಾಳಿ ಮಾಡಿದಾಗ ತಪ್ಪಿಸಿಕೊಂಡಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.


ಇನ್ನು, ಸೆ.4ರಂದು ಪೊಲೀಸರ ಮೂಲಕ ಮಾಹಿತಿ ಪಡೆದ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ, ಅಡಿಷನಲ್ ಎಸ್ಪಿ ಮಹಾನಿಂಗ ಎಂ.ನಂದಗಾವಿ, ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ ಕೆ.ವಿ ಶ್ರೀಧರ್ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಮತ್ತು ಡಿಎಆರ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ 9871.73 ಕೆಜಿ ತೂಕದ ಸುಮಾರು 4ಕೋಟಿ ರೂ ಮೌಲ್ಯದ 8250 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿ ರುದ್ರೇಶ್ ಎಂಬಾತ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಹದೇವಪುರ ನಿವಾಸಿ ಸಮಂತಗೌಡ ಎಂಬ ಮಧ್ಯವರ್ತಿ ಮೂಲಕ ಜಮೀನು ಗುತ್ತಿಗೆ ಪಡೆದು ಗಾಂಜಾ ಗಿಡ ಬೆಳೆಸಿದ್ದ ಎಂದು ತಿಳಿದು ಬಂದಿತ್ತು.

ಅಂದೇ ಈ ವಿಚಾರ ಗೊತ್ತಾದ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಜಮೀನು‌ ಮಾಲೀಕರಾದ ರಾಂಪುರದ ಡಿ.ಬಿ ಮಂಜುನಾಥ್, ತಿಮ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವೈ ಜಂಬುನಾಥ್ ಹಾಗು ರಾಂಪುರದ ಡಿ.ವೈ ಮಂಜುನಾಥ್ ಎಂಬುವರನ್ನು ವಶಕ್ಕೆ ಪಡೆದರು. ಜತೆಗೆ ತಲೆ ಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ ರುದ್ರೇಶ್ ಹಾಗು ಮಧ್ಯವರ್ತಿ ಸಮಂತಗೌಡನನ್ನು ಬಂಧಿಸಿದ್ದರು. ಐವರು ಆರೋಪಿಗಳ ವಿರುದ್ದ NDPS ಆಕ್ಟ್ ಕಲಂ 8 ಹಾಗು 20(a)(b) ಅಡಿ ಪ್ರಕರಣ ದಾಖಲಿಸಿದ್ದಾರೆ.ಇನ್ನು, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಯಶಸ್ವಿ ಕಾರ್ಯಾಚರಣೆ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Published by: Ganesh Nachikethu
First published: September 15, 2020, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading